ಭಾನುವಾರ, ಅಕ್ಟೋಬರ್ 25, 2020
22 °C

PV Web Exclusive | ಮುಳುಗಡೆ ಸಂತ್ರಸ್ತರಿಗೆ ಸಿಕ್ಕಿದ್ದು ಬರೀ ಚಾವಣಿ ಖಾತೆ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಆರು ದಶಕಗಳಿಂದ ಇಲ್ಲಿ ನೆಲೆ ನಿಂತಿದ್ದೇವೆ. ಒಂದು ಗುಂಟೆ ಜಾಗವೂ ನಮ್ಮದಾಗಿಲ್ಲ. ಕಟ್ಟಿಕೊಂಡ ಮನೆಯ ಚಾವಣಿಗೆ ಪಂಚಾಯಿತಿ ಕಂದಾಯ ಕಟ್ಟುತ್ತಿದ್ದೇವೆ. ಭೂಮಿಯೂ ನಮ್ಮದಲ್ಲ, ಮನೆಗೂ ಹಕ್ಕಿಲ್ಲ. 

– ಇದು ಪುರದಾಳುವಿನ ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬದ 80 ವರ್ಷದ ಹಿರಿಯ ಸಣ್ಣಪ್ಪ ನೇರಿಗೆ ಅವರ ನೋವಿನ ಮಾತು.

ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣ ಆರಂಭವಾದ ನಂತರ ಅಲ್ಲಿನ ಜನರನ್ನು ಲಾರಿಗಳಲ್ಲಿ ತುಂಬಿಕೊಂಡು ಬಂದು ಹಲವೆಡೆ ಬಿಟ್ಟಿದ್ದರು. ತಾವು ನೆಲೆ ನಿಂತ ಸ್ಥಳದ ಸುತ್ತಲ ಉಳುಮೆ ಮಾಡಿಕೊಂಡು ಕಳೆದ ಆರು ದಶಕಗಳಲ್ಲಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಅವರು ನಿಂತ ನೆಲೆ ಅವರದಾಗಿಲ್ಲ. ಜಮೀನು, ಮನೆಗಳ ಒಡೆತನ ಸಿಕ್ಕಿಲ್ಲ. ದಾಖಲೆಗಳಿಲ್ಲದ ಕಾರಣ ಅವರಿಗೆ ಬೆಳೆನಷ್ಟ ಪರಿಹಾರ, ಸಾಲ ಸೌಲಭ್ಯ, ಸರ್ಕಾರದ ಯಾವ ಯೋಜನೆಗಳ ಲಾಭವೂ ದೊರಕುತ್ತಿಲ್ಲ. 

‘ನಾವು ಮುಳುಗಡೆ ಪ್ರದೇಶ ತೊರೆದಾಗ ಭೂ ಮಾಲೀಕರ ಬಳಿ ಗೇಣಿ ಮಾಡುತ್ತಿದ್ದೆವು. ಹಾಗಾಗಿ, ಪರಿಹಾರ ಸಿಗಲಿಲ್ಲ. ದಾಖಲೆ ಇದ್ದವರಿಗೆ ನೆರವು ಸಿಕ್ಕಿತು. ಓದು, ಬರಹ ಬಲ್ಲವರು ಶಾನಭೋಗರ ಬಳಿ ಪಹಣಿ ಪಡೆದು ಪರಿಹಾರಕ್ಕೆ ಅರ್ಹತೆ ಪಡೆದುಕೊಂಡಿದ್ದರು. ನಮಗೆ ಅದ್ಯಾವುದೂ ಅರ್ಥವಾಗಲಿಲ್ಲ. ಸರ್ಕಾರ ಬಿಟ್ಟುಹೋದ ಜಾಗದಲ್ಲೇ ನೆಲೆ ಕಂಡುಕೊಂಡೆವು. ಕೊನೆಯ ಪಕ್ಷ ನಿಂತ ನೆಲೆಗಾದರೂ ಹಕ್ಕುಪತ್ರ ದೊರಕುವ ನಿರೀಕ್ಷೆ ಆರು ದಶಕ ಕಳೆದರೂ ಈಡೇರಿಲ್ಲ. ಹಲವು ತಲೆ ಮಾರುಗಳು ನಶಿಸಿಹೋಗಿವೆ. ಹೊಸ ತಲೆಮಾರಿನ ಹುಡುಗರಿಗೆ ಏನೂ ಕೊಡಲು ಸಾಧ್ಯವಾಗಲಿಲ್ಲ’ ಎಂದು ಸಣ್ಣಪ್ಪ ನೇರಿಗೆ ಬೇಸರ ತೋಡಿಕೊಂಡರು.

ಅಭಯಾರಣ್ಯ ಪ್ರದೇಶ, ಕಿರು ಅರಣ್ಯ ಗೊಂದಲಗಳು, ಬಗರ್‌ಹುಕುಂ ವ್ಯಾಪ್ತಿಗೆ ಒಳಪಡದೇ ಇರುವುದು, ಶಿವಮೊಗ್ಗ ನಗರಕ್ಕೆ ಸಮೀಪ ಇರುವುದು ಮತ್ತಿತರ ಗೊಂದಲಗಳ ಕಾರಣ ಪುರದಾಳು ಜನರ ಭೂ ಹಕ್ಕಿನ ಸಮಸ್ಯೆಗಳು ಜಟಿಲವಾಗಿಯೇ ಉಳಿದಿವೆ. ಇಂತಹ ಸಮಸ್ಯೆಯನ್ನು ಬಹುತೇಕ ಸಂತ್ರಸ್ತರು ಅನುಭವಿಸುತ್ತಿದ್ದಾರೆ.

1958–64ರ ಅವಧಿಯಲ್ಲಿ ನಿರ್ಮಾಣವಾದ ಶರಾವತಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಇವರೆಲ್ಲ ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್‌ನೆಲೆ ಕಂಡುಕೊಂಡಿದ್ದರು. ಅವರ ಪುನರ್ವಸತಿಗಾಗಿಯೇ ಅಂದಿನ ಭಾರತ ಸರ್ಕಾರ 8 ಸಾವಿರ ಎಕರೆಗೂ ಹೆಚ್ಚು ಅರಣ್ಯಭೂಮಿ ಮೀಸಲಿಟ್ಟಿತ್ತು. ಆ ಸ್ಥಳದಲ್ಲಿ ಸಂತ್ರಸ್ತರು ನೆಲೆ ನಿಂತು, ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದರೂ, ಅವರ ಅನುಭವದಲ್ಲಿದ್ದ ಆ ಭೂಮಿಯ ಹಕ್ಕು ಸಿಕ್ಕಿರಲಿಲ್ಲ. ಮೂರು ವರ್ಷಗಳ ಹಿಂದೆ 6,459 ಎಕರೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಈಗ 2 ಸಾವಿರಕ್ಕೂ ಹೆಚ್ಚು ಕುಟುಂಬಗಳ ಹೆಸರಿಗೆ 6 ಸಾವಿರ ಎಕರೆಗೂ ಹೆಚ್ಚು ಭೂಮಿ ನೀಡಲಾಗಿದೆ. 

ಸೂಡೂರು ಅರಣ್ಯ ವ್ಯಾಪ್ತಿಯ ಸಿಂಗರಹಳ್ಳಿ, ಕರಡಿಬೆಟ್ಟ ಅರಣ್ಯ ವ್ಯಾಪ್ತಿಯ ತಪ್ಪೂರು, ಹಿರೆಹರಕೆ, ಕೊಣೆಹೊಸೂರು, ಶೆಟ್ಟಿಕೆರೆ, ಅಂಜನಾಪುರ, ಉಡುಗಣಿ, ಕಲ್ಮನೆ, ಅರಸಿನಗೆರೆ, ಕೊಪ್ಪ, ಶಿಕಾರಿಪುರ ಕಸಬಾ, ಅಣ್ಣಾಪುರ, ಕ್ಯಾಸನೂರು ಅರಣ್ಯ ವ್ಯಾಪ್ತಿಯ ಉಳವಿ, ಹೊಳೆಕೊಪ್ಪ, ಬೆಳ್ಳಂದೂರು ಮೀಸಲು ಅರಣ್ಯ ವ್ಯಾಪ್ತಿಯ ಮುಡುಬ ಸಿದ್ದಾಪುರ, ನಾಡಹಳ್ಳಿ, ಕೋಡೂರು ಮೀಸಲು ಅರಣ್ಯ ವ್ಯಾಪ್ತಿಯ ಕೋಡೂರು, ಹೊಸಕೇರಿ, ಜೇನಿ ಮೀಸಲು ಅರಣ್ಯ ವ್ಯಾಪ್ತಿಯ ಮಸಕಲ್ಲು, ಜೇನಿ, ಬರುವೆ ಅರಣ್ಯ ವ್ಯಾಪ್ತಿಯ ತಮ್ಮಡಿಹಳ್ಳಿ, ಬೆನವಳ್ಳಿ, ಮಸರೂರು ಅರಣ್ಯ ವ್ಯಾಪ್ತಿಯ ಶಾಂತಿಕೆರೆ, ವಡೇರಕೊಪ್ಪ, ಕಾರ್ಗಲ್‌ ಮೀಸಲು ಅರಣ್ಯ ವ್ಯಾಪ್ತಿಯ ಬಳಗಲ್ಲೂರು, ಇಡುವಾಣಿ, ಆವಿನಹಳ್ಳಿ, ಮುಂಬಾಳು, ಕಾಸ್ಪಡಿ, ಬರೂರು, ಭೈರಾಪುರ, ಕೊರ್ಲಿಕೊಪ್ಪ, ಚನ್ನಶೆಟ್ಟಿಕೊಪ್ಪ, ಹೊಸೂರು, ನರಸೀಪುರ, ತಳಗಿನ ಮನೆ, ಚಿಕ್ಕಬಿಲಗುಂಜಿ, ಹಿರೇಹಾರಕ, ಮಲಂದೂರು ಅರಣ್ಯ ವ್ಯಾಪ್ತಿಯ ಮಲ್ಲಂದೂರು, ಮತ್ತಿಕೈ ಅರಣ್ಯ ವ್ಯಾಪ್ತಿಯ ಹೊಸೂರು, ಕಾರಕ್ಕಿ, ಮತ್ತಿಕೈ, ಆಲುವಳ್ಳಿ, ಪುಣಜೆ, ಮುತ್ತೂರು ಗ್ರಾಮಗಳ ಬಳಿ ಭೂಮಿ ದೊರೆತಿದೆ.

ಮೊದಲನೇ ಹಂತದಲ್ಲಿ 2,890 ಎಕರೆ, ಎರಡನೇ ಹಂತದಲ್ಲಿ 1,801 ಎಕರೆ, ಮೂರನೇ ಹಂತದಲ್ಲಿ 1,767 ಎಕರೆ ಸೇರಿ ಈವರೆಗೂ 6,459 ಎಕರೆ ಭೂಮಿ ವಿತರಿಸಲಾಗಿದೆ. ಆರ್‌ಟಿಸಿ ಬಂದಿದೆ. ಸಾಗುವಳಿ ಹಕ್ಕು ದೊರೆತಿದೆ. 2,893 ಎಕರೆ ಮೀಸಲು ಭೂಮಿಗೂ, ರೈತರು ಉಳುಮೆ ಮಾಡುವ ಜಮೀನುಗಳಿಗೆ ತಾಳೆಯಾಗುತ್ತಿಲ್ಲ.

ಐದೂವರೆ ದಶಕದಲ್ಲಿ ಸಾಕಷ್ಟು ಸಂತ್ರಸ್ತರು ಮೃತಪಟ್ಟಿದ್ದಾರೆ. ಅವರ ಮಕ್ಕಳು, ಮೊಮ್ಮಕ್ಕಳು ಉತ್ತರಾಧಿಕಾರಿಗಳಾಗಿದ್ದಾರೆ. ಕುಟುಂಬಗಳು ಬೆಳೆದಂತೆ ಭೂಮಿಯ ಅವಶ್ಯಕತೆಯೂ ಬೆಳೆದಿದೆ. ಮೀಸಲಿಟ್ಟ ಭೂಮಿ ಅಂದೇ ಹಂಚಿಕೆ ಮಾಡದ ಪರಿಣಾಮ ತಮ್ಮ ಭೂಮಿ ಯಾವುದು ಎಂದು ತಿಳಿಯದ ಎರಡು ಹಾಗೂ ಮೂರನೇ ತಲೆಮಾರು ಸಿಕ್ಕ ಜಾಗ ಉಳುಮೆ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. 

ಒಬ್ಬ ಸಂತ್ರಸ್ತನಿಗೆ ಸರ್ಕಾರ ಮೂರು ಎಕರೆ ನೀಡಿದರೆ, ಅವರ ಮಕ್ಕಳಲ್ಲಿ ಅದು ಯಾರಿಗೆ ಸೇರಬೇಕು ಎಂಬ ವ್ಯಾಜ್ಯ ಹುಟ್ಟಿಕೊಂಡಿವೆ. ಹಾಗಾಗಿ, ಮೂಲ ಸಂತ್ರಸ್ತರನ್ನು ಗುರುತಿಸಬೇಕು. ಅವರ ವಂಶವೃಕ್ಷ ಹುಡುಕಿ, ನ್ಯಾಯಯುತವಾಗಿ ಸಿಗಬೇಕಾದವರಿಗೆ ಜಮೀನಿನ ಹಕ್ಕು ನೀಡಬೇಕು. ತಡ ಮಾಡಿದಷ್ಟೂ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಸಾಗಿದೆ.

ಪೂರ್ವಾನುಮತಿ ಆದೇಶದ ಗೊಂದಲ: ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಭಾಗವಾದ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದಿಂದ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್‌ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಸಲ್ಲಿಸುವ ಎಲ್ಲ ಪ್ರಸ್ತಾವಗಳಿಗೂ ಇನ್ನು ಮುಂದೆ ಸುಪ್ರೀಂ ಕೋರ್ಟ್‌ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಆದೇಶ ಹೊರಡಿಸಿತ್ತು. ಈ ಕುರಿತು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಇಲಾಖೆಯ ಅಧೀನ ಕಾರ್ಯದರ್ಶಿ 2018 ನ. 5ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದರು.

ಅವರೆಲ್ಲ ನೆಲೆಸಿರುವ ಬಹುತೇಕ ಸ್ಥಳ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ, ಅಭಯಾರಣ್ಯಗಳ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ, ಸುಪ್ರೀಂಕೋರ್ಟ್‌ ಪೂರ್ವಾನುಮತಿ ಪಡೆಯುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಸಮಯವೂ ಹಿಡಿಯುತ್ತದೆ. ಸರ್ಕಾರದ ಈ ಆದೇಶ ಸಂತ್ರಸ್ತರ ಪಾಲಿಗೆ ಉರುಳಾಗಲಿದೆ ಎಂದು ಸಂತ್ರಸ್ತರ ಪರ ಹೋರಾಟ ನಡೆಸುತ್ತಿರುವ ಸಂಘಟನೆಗಳು ದೂರಿದ್ದವು.

ಗ್ರಾಮ ತೊರೆಯಲು ಶೆಟ್ಟಿಹಳ್ಳಿ ಜನರ ನಿರ್ಧಾರ: ಮುಳುಗಡೆ ಸಂತ್ರಸ್ತರ ಒಂದಷ್ಟು ಕುಟುಂಬಗಳು ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಕಾನನದಲ್ಲಿ ನೆಲೆ ನಿಂತಿದ್ದವು. ಈಗ ಅಲ್ಲಿ ನೆಲೆಸಿರುವ 119 ಕುಟುಂಬಗಳು ಸುಮಾರು 400 ಎಕರೆ ಭೂಮಿ ಸಾಗುವಳಿ ಮಾಡಿಕೊಂಡಿವೆ. 

ಶೆಟ್ಟಿಹಳ್ಳಿಯನ್ನು ಒಳಗೊಂಡ ಪಶ್ಚಿಮಘಟ್ಟದ ಈ ಸೂಕ್ಷ್ಮ ಪರಿಸರ ಪ್ರದೇಶವನ್ನು 1984ರಲ್ಲಿ ಸರ್ಕಾರ ಅಭಯಾರಣ್ಯ ಎಂದು ಘೋಷಿಸಿತ್ತು. ಅಂದಿನಿಂದಲೂ ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಯತ್ನಿಸಿದ್ದವಾದರೂ ಅಲ್ಲಿನ ಜನರು ಮಣಿದಿರಲಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಗೌಳೇರು, ಮರಾಠಿಗರ ಐದಾರು ಕುಟುಂಬಗಳಿಗೆಂದು ಆಗ ಬ್ರಿಟಿಷರು ನಿರ್ಮಿಸಿಕೊಟ್ಟಿದ್ದ ಕಾಲು ದಾರಿಯೇ ಇಂದಿಗೂ ಶಿವಮೊಗ್ಗ ತಲುಪಲು ಇರುವ ಸಂಪರ್ಕ ರಸ್ತೆ. ನಿತ್ಯವೂ 18 ಕಿ.ಮೀ ಹಾದಿಯಲ್ಲಿ ಶಾಲಾ ಮಕ್ಕಳು, ಗರ್ಭಿಣಿಯರು, ವೃದ್ಧರು ಓಡಾಡುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದಾರೆ. ಜಲಾಶಯಕ್ಕೆ ನೆಲೆ ಬಿಟ್ಟುಕೊಟ್ಟು, ನಾಡಿಗೆ ಬೆಳಕು ನೀಡಲು ಕಾರಣರಾದ ಅವರ ಊರಿಗೆ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲ. ಸಣ್ಣಪುಟ್ಟ ಮೂಲ ಸೌಕರ್ಯಗಳಿಗೂ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಾ ಬಂದಿದೆ. ಗ್ರಾಮದ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಗ್ರಾಮ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಮುಳುಗಡೆಯ ಇತಿಹಾಸ: ಪ್ರಪಂಚದ ಯಾವುದೇ ಭಾಗದಲ್ಲಿ ಜಲಾಶಯಗಳ ನಿರ್ಮಾಣಕ್ಕಾಗಿ ಅಲ್ಲಿನ ಜನ ವಸತಿ ಪ್ರದೇಶವನ್ನು ಒಮ್ಮೆ ಮಾತ್ರ ಕಳೆದುಕೊಂಡಿದ್ದಾರೆ. ಆದರೆ, ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಜನರನ್ನು ಜಲಾಶಯಗಳ ನಿರ್ಮಾಣಕ್ಕಾಗಿಯೇ ಹಲವು ಬಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಕ್ಕಲೆಬ್ಬಿಸಲಾಗಿದೆ.

ಮಲೆನಾಡಿನ ಜೀವನದಿ ಶರಾವತಿಗೆ ಸ್ವಾತಂತ್ರ್ಯಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64ರ ಅವಧಿಯಲ್ಲಿ ಲಿಂಗನಮಕ್ಕಿ, ನಂತರ ಚಕ್ರ–ಸಾವೇಹಕ್ಲು, ಮಾಣಿ ನಿರ್ಮಾಣವಾದವು. ಮತ್ತೊಂದು ತುದಿಯಲ್ಲಿ ನೀರಾವರಿ ಉದ್ದೇಶಕ್ಕೆ 1960ರ ದಶಕದಲ್ಲಿ ಭದ್ರಾ ನದಿಗೆ ಲಕ್ಕವಳ್ಳಿ ಬಳಿ, ತುಂಗಾನದಿಗೆ ಗಾಜನೂರು ಬಳಿ ಅಣೆಕಟ್ಟೆ ನಿರ್ಮಿಸಲಾಯಿತು.

ಜಿಲ್ಲೆಯ ಜಲಾಶಯಗಳು ಮತ್ತು ವರ್ಷ

* ಹಿರೇ ಭಾಸ್ಕರ- 1939
* ಲಿಂಗನಮಕ್ಕಿ 1964
* ಭದ್ರಾ- 1965
* ತುಂಗಾ- 1972
* ಸಾವೆಹಕ್ಲು- 1980
* ಚಕ್ರ- 1985
* ಮಾಣಿ- 1988
* ತುಂಗಾ ಮೇಲ್ದಂಡೆ- 2005

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು