ಮಂಗಳವಾರ, ಜೂನ್ 28, 2022
24 °C

ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ವಿಲೀನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಪ್ಪನ್‌ಪೇಟೆ: 2005–06ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಾಗರದ ಎಪಿಎಂಸಿಯೊಂದಿಗೆ ವಿಲೀನಗೊಳಿಸುವ ಸರ್ಕಾರದ ಅವೈಜ್ಞಾನಿಕ ಕ್ರಮ ವಿರೋಧಿಸಿ ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಅರ್.ಎ.ಚಾಬುಸಾಬ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್ ನೇತೃತ್ವದಲ್ಲಿ ಪ್ರತಿಭಟಿಸಿ ನಾಡಕಚೇರಿಗೆ ಮನವಿ ಸಲ್ಲಿಸಲಾಯಿತು.

ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಸ್ತಿತ್ವಕ್ಕೆ ಬಂದ ಮೇಲೆ ಕೃಷಿ ಮಾರುಕಟ್ಟೆಯಲ್ಲಿಯೇ ನ್ಯಾಯಯುತ ಬೆಲೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದೆ. ವಾರ್ಷಿಕ ಅಂದಾಜು ಸರಾಸರಿ ₹ 5 ಕೋಟಿಯಿಂದ ₹ 6 ಕೋಟಿಗೂ ಅಧಿಕ ಆದಾಯ ಸರ್ಕಾರಕ್ಕೆ ಜಮಾ ಆಗುತ್ತಿದೆ. ಸುವ್ಯವಸ್ಥೆಯ ಮಾರುಕಟ್ಟೆ ಪ್ರಾಂಗಣಗಳು ದಾಸ್ತಾನು ಮಳಿಗೆಗಳಿದ್ದು, ಸರ್ವಕಾಲಕ್ಕೂ ಶೇಖರಿಸಿ ಸಂರಕ್ಷಿಸಬಲ್ಲ ಉನ್ನತ ಮಟ್ಟದ ತಾಂತ್ರಿಕ ಗೋದಾಮು ಹೊಂದಿದೆ ಎಂದರು.

ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಹೊಸನಗರ ಮುಂತಾದ ಊರುಗಳಿಗೆ ಸಂಪರ್ಕ ಕಲ್ಪಿಸುವ ಹೋಬಳಿ ಕೇಂದ್ರವಾದ ರಿಪ್ಪನ್‌ಪೇಟೆಯಲ್ಲೂ ಅತ್ಯಾಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ, ಉನ್ನತ ಶ್ರೇಣಿಯ ತಾಂತ್ರಿಕ ಗೋದಾಮುಗಳು ಹಾಗೂ ಆಹಾರ ಪದಾರ್ಥಗಳು ಕೆಡದಂತೆ ಇಡುವ ಶೈತ್ಯಾಗಾರ ಘಟಕಗಳು ಇರುವುದರಿಂದ ಈ ಭಾಗದ ರೈತರಿಗೆ ಅನುಕೂಲಕವಾಗಿದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.

ರೈತರ ಹಿತಕ್ಕೆ ಧಕ್ಕೆ ತರುವ ಈ ಯೋಜನೆಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಜೆಡಿಎಸ್ ಮುಖಂಡ ಜಿ.ಎಸ್.ವರದರಾಜ್, ಜನಪರ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ಹೋರಾಟಗಾರ ಟಿ.ಆರ್.ಕೃಷ್ಣಪ್ಪ, ಮಂಜೋಜಿರಾವ್, ದೂನ ಕುಮಾರ, ಮಂಜುನಾಥ ಆಚಾರ್ ನೆವಟೂರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು