ಮಂಗಳವಾರ, ಜೂನ್ 22, 2021
22 °C
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭಾರಿ ಅವ್ಯವಹಾರ

807 ನಿವೇಶನ ಹಂಚಿಕೆಯೇ ಅಕ್ರಮ!: ಸರ್ಕಾರಕ್ಕೆ ಲೋಕಾಯುಕ್ತ ವರದಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಟಲ್‌ ಬಿಹಾರಿ ವಾಜಪೇಯಿ (ಮಲ್ಲಿಗೇನಹಳ್ಳಿ) ಬಡಾವಣೆಯಲ್ಲಿ 2008–2013ರ ಅವಧಿಯಲ್ಲಿ ಹಂಚಿಕೆ ಮಾಡಿದ್ದ 1,305 ನಿವೇಶನಗಳ ಪೈಕಿ, ‘ವಿವೇಚನಾ ಕೋಟಾ’ದಡಿ ನೀಡಿದ 142 ಸೇರಿ ಒಟ್ಟು 807 ನಿವೇಶನಗಳ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಸೂಡಾ ಅಧ್ಯಕ್ಷರಾಗಿದ್ದ ಎಸ್. ಜ್ಞಾನೇಶ್ವರ್‌, ಎಸ್‌. ದತ್ತಾತ್ರಿ, ಆಯುಕ್ತರಾಗಿದ್ದ ಸದಾಶಿವಪ್ಪ, ಸೂಡಾ ಸದಸ್ಯ ಬಿ.ಕೆ. ಶ್ರೀನಾಥ್‌, ಶಿವಮೊಗ್ಗ ಸಿಎಂಸಿ ಆಯುಕ್ತರಾಗಿದ್ದ ಜಯಣ್ಣ, ಸೂಡಾ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ ಜಿ.ಎನ್‌. ಶ್ರೀಧರ್‌ ಸೇರಿದಂತೆ ಒಟ್ಟು 14 ಮಂದಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದಾಖಲೆಗಳ ಸಮೇತ ತನಿಖಾ ವರದಿಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ನಾಲ್ಕು ತಿಂಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸೂಡಾಕ್ಕೆ ಆದೇಶಿಸಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ, ಭೂ ಸ್ವಾಧೀನ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ 2014ರ ಜುಲೈ 17ರಂದು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿತ್ತು. ನಗರಾಭಿವೃದ್ಧಿ ಇಲಾಖೆ ಮತ್ತು ಸೂಡಾಕ್ಕೆ ಲೋಕಾಯುಕ್ತರು ಸಲ್ಲಿಸಿದ 76 ಪುಟಗಳ ತನಿಖಾ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವರದಿಯಲ್ಲಿ ಏನಿದೆ?: ‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆದರೆ, ಅಭಿವೃದ್ಧಿ ಕಾಮಗಾರಿಯಲ್ಲಿ ₹ 24.14 ಲಕ್ಷವನ್ನು ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಪಾವತಿಸಲಾಗಿದೆ. ನಿವೇಶನಗಳ ಹಂಚಿಕೆ ವೇಳೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವ ನಿವೇಶನಗಳನ್ನು ರದ್ದುಪಡಿಸಿ, ಅರ್ಹ ಅರ್ಜಿದಾರರಿಗೆ ಮರು ಹಂಚಿಕೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ತಪ್ಪಿತಸ್ಥರನ್ನು ಪ್ರಾಧಿಕಾರ, ನಿಗಮ– ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಾರದು’ ಎಂದು ಲೋಕಾಯುಕ್ತ ಹೇಳಿದೆ.

498 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿಲ್ಲ. ಈ ಅರ್ಜಿದಾರರಿಗೆ ಎರಡು ತಿಂಗಳ ಒಳಗೆ ಮಂಜೂರಾತಿ ನೀಡಬೇಕು.

ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವ 807 ನಿವೇಶನಗಳ ಪೈಕಿ, 142 ನಿವೇಶನಗಳನ್ನು ‘ವಿವೇಚನಾ ಕೋಟಾ’ದಡಿ ನೀಡಲಾಗಿದೆ. ಅಂಥವರಿಗೆ ವಾರ್ಷಿಕ ಶೇ 8 ಬಡ್ಡಿ ನೀಡಿ ಠೇವಣಿ ಮರಳಿಸಿ, ಹಂಚಿಕೆ ರದ್ದುಪಡಿಸಬೇಕು. ಪತಿ–ಪತ್ನಿಗೆ 32, ಸೂಡಾ, ಗೃಹ ಮಂಡಳಿಯಿಂದ ಈಗಾಗಲೇ ನಿವೇಶನ, ಮನೆ ಪಡೆದ 50 ಮಂದಿಗೆ, ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರಿಗೆ 55 ನಿವೇಶನ ಹಂಚಿಕೆ ಮಾಡಲಾಗಿದೆ ಎಂದೂ ವರದಿಯಲ್ಲಿದೆ.

ನಿವೇಶನಕ್ಕಾಗಿ ಹಿಂದೆ ಅರ್ಜಿ ಸಲ್ಲಿಸಿದ ಸಂಖ್ಯೆಯ ಆಧಾರದಲ್ಲಿ ನಿವೇಶನ ಪಡೆದ 9, ತಪ್ಪು ಮಾಹಿತಿ ನೀಡಿದ 25 ಮಂದಿಗೆ ಹಂಚಿಕೆಯಾದ ನಿವೇಶನ ರದ್ದುಪಡಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಹಂಚಿಕೆಯಾದ 7, ಕೇಂದ್ರ ನೌಕರರಿಗೆ ಹಂಚಿಕೆಯಾದ 8 , ಆರಂಭಿಕ ಠೇವಣಿ ಪಾವತಿಸದ 93 ಮಂದಿಯ ನಿವೇಶನವನ್ನೂ ರದ್ದುಪಡಿಸಬೇಕು ಎಂದೂ ವರದಿಯಲ್ಲಿದೆ

ವಾಸದ ಪ್ರಮಾಣಪತ್ರವನ್ನೇ ಸಲ್ಲಿಸದ 184 ಮಂದಿಗೂ ನಿವೇಶನ ಹಂಚಿಕೆ ಮಾಡಲಾಗಿದೆ. 8 ಮಂದಿ ಜಾತಿ ಪ್ರಮಾಣಪತ್ರ ಸಲ್ಲಿಸಿಲ್ಲ. 6 ಮಂದಿ ಉದ್ಯೋಗ ಪ್ರಮಾಣಪತ್ರ ಸಲ್ಲಿಸಿಲ್ಲ. ಗಂಡನ ಹೆಸರಿನ ಬದಲು ತಂದೆಯ ಹೆಸರು ನೀಡಿ 7 ಮಂದಿ ನಿವೇಶನ ಪಡೆದಿದ್ದು, ಸೂಡಾ ಅಥವಾ ಗೃಹಮಂಡಳಿ ಮೂಲಕ ಈಗಾಗಲೇ ನಿವೇಶನ ಹೊಂದಿದ್ದಾರೆಯೇ ಎಂದು ಪರಿಶೀಲಿಸಿ ಈ ಹಂಚಿಕೆ ರದ್ದುಪಡಿಸಬೇಕು.

ಕುಟುಂಬದ ಸದಸ್ಯರ ಹೆಸರಿನಲ್ಲಿ ಈಗಾಗಲೇ ನಿವೇಶನ ಪಡೆದ 3, ಕೇರಾಫ್‌ ವಿಳಾಸ ನೀಡಿದ 44, ಕಚೇರಿ–ಅಂಗಡಿ ವಿಳಾಸ ನೀಡಿದ 18 ಮಂದಿಯ ಹಂಚಿಕೆಯನ್ನು ರದ್ದುಪಡಿಸಬೇಕು. ದೋಷಪೂರಿತ ಪ್ರಮಾಣಪತ್ರ ಸಲ್ಲಿಸಿ ಅಂಗವಿಕಲ ಕೋಟಾದಡಿ ನಿವೇಶನ ಪಡೆದ 6 ಮತ್ತು ಅಂಗವಿಕಲತೆಯ ಬಗ್ಗೆ ದೃಢೀಕರಣ ಸಹಿ ಪಡೆಯದ 22 ಮಂದಿಗೆ ಹಂಚಿಕೆಯಾಗಿರುವುದನ್ನೂ ಪರಿಶೀಲಿಸಿ ರದ್ದುಪಡಿಸಬೇಕು.

ಕರ್ತವ್ಯದಲ್ಲಿದ್ದ ಸೈನಿಕರಿಗೆ ‘ಮಾಜಿ’ ಕೋಟಾದಲ್ಲಿ ನಿವೇಶನ!: ಕರ್ತವ್ಯದಲ್ಲಿದ್ದರೂ ಮಾಜಿ ಸೈನಿಕರೆಂದು ನಮೂದಿಸಿ 34 ಮಂದಿ ನಿವೇಶನ ಪಡೆದಿದ್ದಾರೆ. ಸೈನಿಕರು ಗಡಿ ಕಾಯುವ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ‘ಪ್ರತ್ಯೇಕ ಪ್ರಕರಣ’ವೆಂದು ಪರಿಗಣಿಸಬೇಕು. 2011ರಲ್ಲಿ ನಿವೇಶನ ಹಂಚಿಕೆಯಾದ ಬಳಿಕ ಕೆಲವರು ನಿವೃತ್ತರಾಗಿದ್ದಾರೆ. ಅಂಥವರ ಅರ್ಜಿಯನ್ನು ಮುಂದಿನ ಹಂತದಲ್ಲಿ ಪರಿಗಣಿಸಬಹುದು ಎಂದು ವರದಿಯಲ್ಲಿದೆ.

6,556 ಅರ್ಜಿ ಸಲ್ಲಿಕೆ
1,163 ನಿವೇಶನಗಳ ಹಂಚಿಕೆಗೆ ಸೂಡಾ ಅರ್ಜಿ ಆಹ್ವಾನಿಸಿದಾಗ 6,556 ಅರ್ಜಿ ಸಲ್ಲಿಕೆಯಾಗಿತ್ತು. ಭೂಮಿ ಕಳೆದುಕೊಂಡವರಿಗೆ 359 ನಿವೇಶನಗಳನ್ನು ಮೀಸಲಿಡಲಾಗಿತ್ತು. ಆದರೆ, ಭೂಮಿ ಕಳೆದುಕೊಂಡರಲ್ಲಿ ಕೆಲವರು ನಿವೇಶನದ ಬದಲು ಪರಿಹಾರ ಪಡೆದುಕೊಂಡರು. ಹೀಗಾಗಿ, ಆ ಪೈಕಿ, 142 ನಿವೇಶನಗಳನ್ನೂ ಸೇರಿಸಿ ಹಂಚಿಕೆ ಮಾಡಿದ್ದರಿಂದ ನಿವೇಶನಗಳ ಸಂಖ್ಯೆ 1,305 ಆಯಿತು. ‘ವೀರಪ್ಪನ್‌ ಕಾರ್ಯಾಚರಣೆ’ಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಅಧಿಕಾರಿಗಳಿಗೆ 19 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

**

ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ. ವರದಿಯಲ್ಲಿರುವ ಅಂಶಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ.
-ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಲೋಕಾಯುಕ್ತ

**

ಲೋಕಾಯುಕ್ತರ ಆದೇಶವನ್ನು ಸರ್ಕಾರ ಜಾರಿಗೊಳಿಸುವ ಜೊತೆಗೆ, ಅರ್ಹರಿಗೆ ನಿವೇಶನವನ್ನು ಮರುಹಂಚಿಕೆ ಮಾಡಬೇಕು.
-ಕೆ.ಬಿ. ಪ್ರಸನ್ನಕುಮಾರ್‌, ಕಾಂಗ್ರೆಸ್‌ ಮಾಜಿ ಶಾಸಕ (ಶಿವಮೊಗ್ಗ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು