ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಗಲಭೆಗೆ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣ: ಬಿಜೆಪಿ ನಾಯಕರ ಕಿಡಿ

Published 2 ಅಕ್ಟೋಬರ್ 2023, 11:52 IST
Last Updated 2 ಅಕ್ಟೋಬರ್ 2023, 11:52 IST
ಅಕ್ಷರ ಗಾತ್ರ

ಬೆಂಗಳೂರು: 'ಶಿವಮೊಗ್ಗದಲ್ಲಿ ಹಿಂದೂಗಳ ಮನೆಗಳ ಮೇಲೆ ದೌರ್ಜನ್ಯ ನಡೆದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಇದಕ್ಕೆ ತುಷ್ಟೀಕರಣ ನೀತಿಯೇ ಕಾರಣ. ಸರ್ಕಾರದ ವೈಫಲ್ಯದ ಕಾರಣ ಈ ಗಲಭೆ ನಡೆದಿದೆ' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕರಾದ ಬಸವರಾಜ ಬೊಮ್ಮಾಯಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮತ್ತು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಅಶಾಂತಿ ಇರಬೇಕೆಂಬ ಸರ್ಕಾರದ ಮನಸ್ಥಿತಿ ಶಿವಮೊಗ್ಗ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಾಣುತ್ತಿದೆ’ ಎಂದು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಸಂಸ್ಕೃತಿ, ನಮ್ಮ ಧರ್ಮ ನಿರ್ನಾಮ ಮಾಡುವ ವ್ಯಕ್ತಿಗಳನ್ನು ಮೆರೆಸುತ್ತಿದ್ದಾರೆ. ಎಸ್ಪಿಯವರ ಮೇಲೆಯೇ ಕಲ್ಲು ತೂರಾಟ ಮಾಡಿ ಹಲ್ಲೆ ನಡೆಸಲಾಗಿದೆ. ಆದರೆ, ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದೆ. ಅಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಕೋಮುಗಲಭೆ ಮಾಡಿದವರ ಆಸ್ತಿ ಜಪ್ತಿ ಮಾಡಬೇಕು. ಗೂಂಡಾ ಕಾಯ್ದೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಕ್ರೂರಿಗಳಾದ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್‌ ಅವರನ್ನು ಮಹಾನ್‌ ಎನ್ನುವವರ ಮೇಲೆ ಕ್ರಮ ಕೈಗೊಳ್ಳಬೇಕು. ಮತಾಂಧರಿಂದ ಹಲ್ಲೆಗೊಳಗಾದವರಿಗೆ ರಕ್ಷಣೆ ಮತ್ತು ಚಿಕಿತ್ಸೆ ಕೊಡಿಸಬೇಕು’ ಎಂದರು.

ಸರ್ಕಾರದ ವೈಫಲ್ಯ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ದೂರಿದ್ದಾರೆ.

ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣ ಇರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆಗಳು ನಡೆದಿವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ, ಅಲ್ಲಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಶಿವಮೊಗ್ಗದ ಮೂರು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತವೆ. ಇಂತಹ ಠಾಣೆಗಳಿಗೆ ಸಮರ್ಥ ಅಧಿಕಾರಿಗಳನ್ನು ಹಾಕಬೇಕು. ಸ್ವಹಿತಾಸಕ್ತಿಗಳಿಗೆ ಬಲಿಯಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ, ಅವರು ಕಾನೂನು ಸುವ್ಯವಸ್ಥೆ ಕಾಪಾಡುವುದರ ಬದಲು ಬೇರೆ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

ಕತ್ತಿ– ಗುರಾಣಿಗೆ ಅವಕಾಶ ಕೊಟ್ಟವರು ಯಾರು?;

‘ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸರ್ಕಾರದ ಸಂಪೂರ್ಣ ವೈಫಲ್ಯತೆಯೇ ಕಾರಣ. ಶಿವಮೊಗ್ಗ ಹೊತ್ತಿ ಉರಿದರೂ ಸರ್ಕಾರ ತಣ್ಣಗೆ ಕುಳಿತಿದೆ’ ಎಂದು ಎನ್‌.ರವಿಕುಮಾರ್‌ ಹೇಳಿದರು. ‘ಸಮರ್ಪಕವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ನಿನ್ನೆ ಕತ್ತಿ, ಗುರಾಣಿ ಹಿಡಿದು ಮೆರವಣಿಗೆ ಮಾಡಲು ಅವಕಾಶ ಕೊಟ್ಟವರು ಯಾರು? ಹಿಂದೂ ಮಹಿಳೆಯರ ಮೇಲೆ, ಯುವಕರ ಮೇಲೆ ದೌರ್ಜನ್ಯ ನಡೆದಿದೆ. ಮೊಹಲ್ಲಾದಲ್ಲಿ ಶಾಂತಮ್ಮ ಎಂಬುವರು ಗಾಯಗೊಂಡಿದ್ದಾರೆ. ಮನೆಗಳಿಗೆ ನುಗ್ಗಿದ್ದಾರೆ. ಇವೆಲ್ಲವನ್ನು ನೋಡಿದಾಗ ಸರ್ಕಾರ ಅಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ನಡೆಸಲು ಪ್ರೇರೇಪಣೆ ಕೊಟ್ಟಂತಿದೆ’ ಎಂದೂ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT