ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಹಿಂಸಾಚಾರ | ಚಿಂತೆ ಇಲ್ಲದವನಿಗೆ ದಂಗೆಯಲ್ಲೂ ನಿದ್ದೆ, CM ವಿರುದ್ಧ BJP

Published 2 ಅಕ್ಟೋಬರ್ 2023, 11:34 IST
Last Updated 2 ಅಕ್ಟೋಬರ್ 2023, 11:34 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಟೌಟ್ ವಿಚಾರವಾಗಿ ಉಂಟಾದ ವಿವಾದ ಕಾಂಗ್ರೆಸ್‌ –ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

ಶಿವಮೊಗ್ಗದ ಹಿಂಸಾಚಾರ ವಿಚಾರ ಪ್ರಸ್ತಾಪಿಸಿ ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ಚಿಂತೆ ಇಲ್ಲದವನಿಗೆ, ದಂಗೆಯಲ್ಲಿಯೂ ನಿದ್ದೆ. ಕರ್ನಾಟಕ ಓಲೈಕೆ ರಾಜಕಾರಣದ ಪರಾಕಾಷ್ಠೆಯಲ್ಲಿ ದಹದಹಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ಅವರು ‌ಮೂಲಭೂತವಾದಿಗಳನ್ನು ಬಿಡುಗಡೆಗೊಳಿಸುತ್ತಾರೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಕೃತ್ಯದಲ್ಲಿ ಭಾಗಿಯಾದವರನ್ನು ಅಮಾಯಕರೆಂದು ಕ್ಲೀನ್‌ಚಿಟ್ ನೀಡುತ್ತಾರೆ. ಮಾನಸಿಕರಂತೆ ಹೇಳಿಕೆ ಕೊಡುವ ಜಿಲ್ಲಾ ಉಸ್ತುವಾರಿ ಸಚಿವರು (ಮಧು ಬಂಗಾರಪ್ಪ) ಇರುವಾಗ ಶಿವಮೊಗ್ಗದಲ್ಲಿ ಗಲಭೆ ನಡೆಯದೆ ಮತ್ತೇನು ತಾನೆ ನಡೆದೀತು ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ಮತಾಂಧರ ಕಿಡಿಗೇಡಿತನಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ಹಿಂದೂ ಸಮಾಜವೂ ಸಿದ್ಧವಿದೆ. ಕಾಂಗ್ರೆಸ್‌ ಸರ್ಕಾರ ಮತಾಂಧರ ಗುಲಾಮನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಕುಟುಕಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಗಲಭೆಯ ವೇಳೆ ಹಿಂದೂಗಳ ಮನೆ ಮೇಲೆ ಗುರಿಯಿಟ್ಟು ದಾಳಿ ಮಾಡಿದ್ದಾರೆ. ಪ್ರಚೋದನಕಾರಿ ಬ್ಯಾನರ್‌ ಮೂಲಕ ಮತಾಂಧರು ಶಾಂತಿ ಕದಡಿದ್ದಾರೆ. ತಲ್ವಾರ್‌ ಇಡುವುದಕ್ಕೆ ಅನುಮತಿ ಬೇಡವೇ? ಮತಾಂಧರ ಬೆನ್ನಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ನಿಂತಂತಿದೆ ಎಂದು ಬಿಜೆಪಿ ಶಾಸಕ ಎಸ್.ಎನ್.‌ ಚೆನ್ನಬಸಪ್ಪ ಆರೋಪಿಸಿದ್ದಾರೆ.

ಅಮಾಯಕ ಹಿಂದೂಗಳನ್ನು ಟಾರ್ಗೆಟ್‌ ಮಾಡಿ ಶಿವಮೊಗ್ಗದಲ್ಲಿ ಗಲಭೆ ನಡೆದಿದೆ. ಕಾಂಗ್ರೆಸ್‌ ಸರ್ಕಾರ, ಜಿಲ್ಲಾಡಳಿತ ಪ್ರಚೋದನಾಕಾರಿ ಫ್ಲೆಕ್ಸ್‌ಗಳನ್ನು ತೆಗೆಯದೆ ಗಲಭೆಕೋರರಿಗೆ ಸಹಕರಿಸಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT