ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಗ್ರ ಕೃಷಿಗೆ ಸೈ.. ಹೈನುಗಾರಿಕೆ, ಕುರಿ ಸಾಕಣೆಗೆ ಜೈ..

ಕೃಷಿಯಲ್ಲಿ ಮಾದರಿಯಾದ ದ್ಯಾವಿನಕೆರೆಯ ಸಹೋದರರು
ವರುಣ್ ಕುಮಾರ್ ಡಿ.
Published 14 ಫೆಬ್ರುವರಿ 2024, 6:52 IST
Last Updated 14 ಫೆಬ್ರುವರಿ 2024, 6:52 IST
ಅಕ್ಷರ ಗಾತ್ರ

ಕುಂಸಿ: ಸಮೀಪದ ದ್ಯಾವಿನಕೆರೆಯ ಸಹೋದರರಿಬ್ಬರು ವೈವಿಧ್ಯಮಯ ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಣೆ ಮೂಲಕ ಯಶಸ್ಸು ಕಂಡು ಇತರರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ವೆಂಕಟೇಶ್– ಲೋಲಾಕ್ಷಿ ದಂಪತಿಯ ಪುತ್ರರಾದ ಅಪ್ಪು ಮತ್ತು ಅಂಕಿತ್ ಅವರು ಕುಟುಂಬದ ಅರ್ಧ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಲಾಭ ಕಾಣುತ್ತಿದ್ದಾರೆ.

ಆಯನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಪ್ಪು ತೃತೀಯ ಬಿ.ಕಾಂ ಓದುತ್ತಿದ್ದು, ಹಿರಿಯ ಸೋದರ ಅಂಕಿತ್ ಪದವಿ ಪೂರ್ಣಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಜತೆಗೆ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ.

ಅರ್ಧ ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದು, ಅದರ ನಡುವೆ ಮಲ್ಲಿಗೆ ಗಿಡ ನೆಟ್ಟಿದ್ದಾರೆ. ಮೂರು ವರ್ಷಗಳಿಂದ ಮಲ್ಲಿಗೆ ಗಿಡಗಳು ಹೂವು ಬಿಡುತ್ತಿದ್ದು, ಕೆ.ಜಿ.ಗೆ ₹ 450 ರಿಂದ ₹ 500 ಪಡೆಯುತ್ತಿದ್ದಾರೆ.

ಅದರ ನಡುವೆ ಅಡಿಕೆ ಗಿಡಗಳನ್ನು ಹಾಕಿದ್ದಾರೆ. ಜತೆಗೆ ಪಪ್ಪಾಯಿ ಹಣ್ಣು, ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ನಡುವೆ 15 ಲಿಂಬೆ, 40 ನುಗ್ಗೆ ಮರಗಳನ್ನು ಬೆಳೆಸಿದ್ದಾರೆ. ಜಮೀನಿನ ಸುತ್ತಲೂ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಜಮೀನಿನ ಮಧ್ಯೆ ಬಾಳೆ ಗಿಡ ಬೆಳೆಸಿದ್ದಾರೆ. ಈ ಸಮಗ್ರ ಬೇಸಾಯ ಪದ್ಧತಿಯಿಂದ ಅವರು ಯಶಸ್ಸು ಕಂಡಿದ್ದಾರೆ.

ಹೈನುಗಾರಿಕೆಗೂ ಸೈ: 

ಪ್ರಾಣಿ ಪ್ರಿಯರಾಗಿರುವ ಸಹೋದರರು ಹೈನುಗಾರಿಕೆಯನ್ನೂ ನೆಚ್ಚಿಕೊಂಡಿದ್ದಾರೆ. 30 ಕೋಳಿಗಳು, ಮೊಲಗಳು, ಕುರಿ ಹಾಗೂ ಹಸುಗಳನ್ನು ಸಾಕಿದ್ದಾರೆ. ಇದರಿಂದಲೂ ಲಾಭ ಗಳಿಸುತ್ತಿದ್ದಾರೆ.

ಸಮಗ್ರ ಕೃಷಿ ಪದ್ಧತಿ ಹಾಗೂ ಹೈನುಗಾರಿಕೆಯಿಂದ ವರ್ಷಕ್ಕೆ ₹ 5 ಲಕ್ಷ ಆದಾಯ ಗಳಿಸುತ್ತಿದ್ದಾರೆ. ತೋಟಕ್ಕೆ ನೀರಿಗಾಗಿ ಕೊಳವೆಬಾವಿ ಕೊರೆಯಿಸಿದ್ದಾರೆ.

‘ಕಾಲೇಜಿನಲ್ಲಿ ಉಪನ್ಯಾಸಕರು ಪ್ರಪಂಚದ ಜ್ಞಾನದ ಬೋಧನೆ ಮಾಡಿದರೆ ಮನೆಯಲ್ಲಿ ತಂದೆ–ತಾಯಿ ಬದುಕು ನಡೆಸುವ ರೀತಿನೀತಿಯನ್ನು ಕಲಿಸಿದ್ದಾರೆ’ ಎನ್ನುವ ಅಪ್ಪು ಹಾಗೂ ಅಂಕಿತ್, ‘ರೈತರು ಒಂದೇ ಬೆಳೆಗೆ ಸೀಮಿತವಾಗಬಾರದು. ವೈವಿಧ್ಯಮಯ ಬೆಳೆಗಳನ್ನು ಬೆಳೆದಾಗ ಮಾತ್ರ ಲಾಭ ಪಡೆಯಲು ಸಾಧ್ಯ. ಇದರ ಜತೆಗೆ ಹೈನುಗಾರಿಕೆಯೂ ಇದ್ದರೆ ಬದುಕು ಹಸನು ಮಾಡಿಕೊಳ್ಳಲು ಸಾಧ್ಯ’ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ.

ಅಂಕಿತ್ ಅಪ್ಪು ಸಹೋದರರ ಸಮಗ್ರ ಕೃಷಿ ಪದ್ಧತಿಯ ತೋಟ
ಅಂಕಿತ್ ಅಪ್ಪು ಸಹೋದರರ ಸಮಗ್ರ ಕೃಷಿ ಪದ್ಧತಿಯ ತೋಟ
ಅಂಕಿತ್ ಅಪ್ಪು ಸಹೋದರರು ಕುರಿ ಸಾಕಿರುವುದು
ಅಂಕಿತ್ ಅಪ್ಪು ಸಹೋದರರು ಕುರಿ ಸಾಕಿರುವುದು
ಅಂಕಿತ್ ಅಪ್ಪು ಸಹೋದರರು ಮೊಲ ಸಾಕಿರುವುದು
ಅಂಕಿತ್ ಅಪ್ಪು ಸಹೋದರರು ಮೊಲ ಸಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT