ಬುಧವಾರ, ನವೆಂಬರ್ 30, 2022
16 °C
ಗ್ರಾಮೀಣ ಪ್ರತಿಭೆ ಶೋಭಿತ್ ವಿಶಿಷ್ಟ ಸಾಧನೆ; ಅಭಿನಂದನೆಗಳ ಮಹಾಪೂರ

ಈ ಗ್ರಾಮೀಣ ಪ್ರತಿಭೆ 3 ವರ್ಷಗಳಲ್ಲಿ 7 ಸರ್ಕಾರಿ ಹುದ್ದೆಗೆ ಆಯ್ಕೆ

ಸುಕುಮಾರ ಎಂ. Updated:

ಅಕ್ಷರ ಗಾತ್ರ : | |

Prajavani

ತುಮರಿ: ‘ಒಂದು ಸರ್ಕಾರಿ ನೌಕರಿ ಸಿಕ್ಕರೆ ಜೀವನ ಸಾರ್ಥಕವಾಯಿತು’ ಎಂದು ಭಾವಿಸುವವರೇ ಹೆಚ್ಚು. ಆದರೆ, ಕುಗ್ರಾಮವಾಗಿರುವ ಎಸ್‌.ಎಸ್‌. ಬೋಗ್‌ ಗ್ರಾಮದ ಯುವಕನೊಬ್ಬ ಮೂರು ವರ್ಷಗಳಲ್ಲಿ ಬರೋಬ್ಬರಿ ಏಳು ಸರ್ಕಾರಿ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ದ್ವೀಪದ ಶರಾವತಿ ಎಡದಂಡೆಯ ಎಸ್‌.ಎಸ್. ಭೋಗ್ ಗ್ರಾಮದ ಕೊಲ್ಸೂರಿನ ಕೃಷಿ ಪ್ರಧಾನ ಕುಟುಂಬದ ಪುಟ್ಟಪ್ಪ ಹಾಗೂ ಹಾಲಮ್ಮ ದಂಪತಿಯ ಪುತ್ರ ಶೋಭಿತ್ ಪಿ.ಕೆ. (23) ಈ ಸಾಧನೆ ಮಾಡಿದ ಯುವಕ. ಸರ್ಕಾರಿ ಶಾಲೆಯಲ್ಲಿ ಓದಿ ಪದವಿ ಶಿಕ್ಷಣ ಪಡೆಯಲು ಆಸರೆಯಾದ ಹೆತ್ತವರಿಗೆ ಪುತ್ರನ ಸಾಧನೆ ಸಂತಸ ಮೂಡಿಸಿದೆ. 

ವಿದ್ಯುತ್ ಲೈನ್‌ಮೆನ್ (2019 ನೇರ ದೈಹಿಕ ಪರೀಕ್ಷೆ), ಪೊಲೀಸ್‌ ಕಾನ್‌ಸ್ಟೆಬಲ್ (ಸಿವಿಲ್, ನವೆಂಬರ್ 2019), ಪೊಲೀಸ್‌ ಕಾನ್‌ಸ್ಟೆಬಲ್ (ಡಿ.ಆರ್. ಡಿಸೆಂಬರ್ 2019), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ 2022), ಪೊಲೀಸ್‌ ಕಾನ್‌ಸ್ಟೆಬಲ್ (ಸಿವಿಲ್ 2020), ಪೊಲೀಸ್‌ ಕಾನ್‌ಸ್ಟೆಬಲ್ (ಸಿವಿಲ್ 2022), ಫೈರ್ ಸಬ್ ಇನ್‌ಸ್ಪೆಕ್ಟರ್ (ಅಗ್ನಿ ಶಾಮಕ ಇಲಾಖೆ) ಹೀಗೆ ಏಳು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಕರೂರು, ಬಾರಂಗಿ ಹೋಬಳಿಯಲ್ಲಿ ಸಂಚಲನ ಮೂಡಿಸಿದೆ.

ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಕೊಡನವಳ್ಳಿ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಹಾಗೂ ಸಾಗರದ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಸಾಗರದ ಲಾಲ್ ಬಹದ್ದೂರ್
ಶಾಸ್ತ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ.

ಬಿ.ಎಸ್‌ಸಿ ಪದವಿ ಪೂರೈಸಿರುವ ಶೋಭಿತ್ ಹಲವು ಖಾಸಗಿ ಕಂಪೆನಿಯಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದರೂ ನಿರಾಕರಿಸಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಹಂಬಲದಿಂದ ಕಠಿಣ ಶ್ರಮದಿಂದ ಅಭ್ಯಾಸ ಮಾಡಿದರು. ಈಗ ಏಳು ಸರ್ಕಾರಿ ಹುದ್ದೆಗೆ ಆಯ್ಕೆಯಾಗುವ ಮೂಲಕ ದ್ವೀಪದ ಜನರ ಪ್ರಶಂಸೆಗೆ ಕಾರಣವಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ: 1ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿರುವ ಅವರು, ಸ್ವರ್ಧಾತ್ಮಕ ಪರೀಕ್ಷೆಗೆ ಯಾವುದೇ ತರಬೇತಿ ಪಡೆಯದೆ ಸ್ವಯಂ ಪ್ರಯತ್ನದಿಂದ ಸಾಧನೆ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೊಲೀಸ್‌ ಇಲಾಖೆಯ ತರಬೇತಿ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು, ಮುಂದೆ ಅಗ್ನಿ ಶಾಮಕ ಇಲಾಖೆಯ ಹುದ್ದೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.

ಸ್ವರ್ಧಾತ್ಮಕ ಪರೀಕ್ಷೆಗೆ ‘ಪ್ರಜಾವಾಣಿ’ ಪೂರಕ: ‘ಸ್ವರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ‘ಪ್ರಜಾವಾಣಿ’ ದಿನ ಪತ್ರಿಕೆ ಓದು ಪೂರಕವಾಗಿದೆ. 2019ರಲ್ಲಿ ಪರಿಕ್ಷೆ ತಯಾರಿ ಆರಂಭಿಸಿದಾಗಿನಿಂದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಓದುಗನಾಗಿದ್ದೇನೆ’ ಎಂದು ಶೋಭಿತ್ ಅಭಿಮಾನದಿಂದ ಹೇಳಿದ್ದಾರೆ.

***

ಜಾಣ ಓದು ಇಂದಿನ ಅಗತ್ಯ

ಏಳು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಕಠಿಣ ಪರಿಶ್ರಮದ ಈ ಸಾಧನೆಗೆ ಪೋಷಕರೇ ಸ್ಫೂರ್ತಿ. ಜಾಣ ಓದು ಇಂದಿನ ಅಗತ್ಯವಾಗಿದ್ದು, ಮಾನಸಿಕ ಸಾಮರ್ಥ್ಯವನ್ನು ಮನೆಯಲ್ಲಿಯೇ ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಇದರಿಂದ ಮಾತ್ರ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.

– ಶೋಭಿತ್ ಪಿ.ಕೆ, ಕೊಲ್ಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು