7ರಂದು ವಿಧಾನಸೌಧಕ್ಕೆ ಮುತ್ತಿಗೆ; ಬಾರುಕೋಲು ಚಳವಳಿ

ಹೊಳೆಹೊನ್ನೂರು: ದೇಶಾದ್ಯಂತ ಹೋರಾಟ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಡಿ.7ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಬಾರುಕೋಲು ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರಾವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ಬುಧವಾರ ಸಮೀಪದ ಅರತೊಳಲು ಕೈಮರದ ಎನ್.ಡಿ. ಸುಂದರೇಶ್ ಸರ್ಕಲ್ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಭೂ ಹಿಡುವಳಿ ಕಾಯ್ದೆ ರೈತರಿಗೆ ಮಾರಕ. ದೇಶದ ಭೂಮಿಯನ್ನು ಐಟಿಸಿ ಕಂಪನಿಗೆ ಕೊಡಲಾಗುತ್ತಿದೆ. ಇದು ಕಪ್ಪು ಹಣ ಹೊಂದಿದವರಿಗೆ ಹಣವನ್ನು ಬಿಳಿಯನ್ನಾಗಿಲು ಸುವರ್ಣ ಅವಕಾಶವಾಗುತ್ತದೆ ಎಂದು ಆರೋಪಿಸಿದರು.
ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಳುವವನೇ ಒಡೆಯ ಎಂಬ ಕಾಯ್ದೆ ಜಾರಿಗೆ ತಂದ ಕಾರಣ ಬಡವರಿಗೆ ಭೂಮಿ ದೊರೆಯುವಂತಾಯಿತು. ಆದರೆ, ಈ ಕಾಯ್ದೆಯಿಂದ ಹಣವಂತರು ಭೂಮಿಯನ್ನು ಖರೀಸುವುದರಿಂದ ರೈತರು ಮತ್ತೊಮ್ಮೆ ಬೀದಿ ಪಾಲಾಗುತ್ತಾರೆ ಎಂದು ಎಚ್ಚರಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಎಪಿಎಂಸಿಯಲ್ಲಿ ಖಾಸಗೀಕರಣವಾದರೆ ಕೃಷಿ ಬೆಳೆಗಳನ್ನು ಒಬ್ಬಾತ ಎಷ್ಟಾದರೂ ಸಂಗ್ರಹ ಮಾಡಿ ಮಾರಾಟ ಮಾಡಬಹುದಾಗಿದೆ. ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಅದರ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಲು ಅವಕಾಶ ಇದೆ ಎಂದು ದೂರಿದರು.
ಬಳಿಕ ಉಪ ತಹಶೀಲ್ದಾರ್ ಪುಷ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಮೂರ್ತಿ, ಚಂದ್ರಪ್ಪ ಟಿ.ಎಂ., ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ ಟಿ.ಡಿ.ಎಚ್. ರಾಮಚಂದ್ರಪ್ಪ, ಕೆ.ಆರ್. ಶ್ರೀಧರ್, ಸಿದ್ದೋಜಿರಾವ್, ಲೋಕೇಶ್, ಅರಬಿಳಚಿ ಈಶಣ್ಣ, ಪರಮೇಶ್ವರಪ್ಪ ಎಂ.ಯಲವಟ್ಟಿ ಚಂದ್ರಪ್ಪ, ಮೈದೊಳಲು ಜಗದೀಶ್, ರಾಜಾರಾವ್, ಮಲ್ಲಾರಿರಾವ್, ಎಂ.ಎಚ್. ತಿಮ್ಮಪ್ಪ ಇದ್ದರು.
ಗರ್ಭಿಣಿಗೆ ನೆರವು: ರೈತರ ಪ್ರತಿಭಟನೆ ಕಾರಣ ಖಾಸಗಿ ಬಸ್ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಗೆ ಪರದಾಡುವಂತಾಯಿತು. ತಕ್ಷಣ ಇದಕ್ಕೆ ಸ್ಪಂದಿಸಿದ ರೈತ ಮುಖಂಡರು ಖಾಸಗಿ ಆಮ್ನಿ ವ್ಯವಸ್ಥೆ ಮಾಡಿ ಗರ್ಭಿಣಿಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅವರೊಂದಿಗೆ ಕೆಲವು ರೋಗಿಗಳನ್ನು ಆಸ್ಪತ್ರೆ ತೆರಳಲು ಅವಕಾಶ ಕಲ್ಪಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.