ಗುರುವಾರ , ಡಿಸೆಂಬರ್ 1, 2022
20 °C
ಸಿಗಂದೂರು: ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯ

ಧಾರ್ಮಿಕ ಕ್ಷೇತ್ರಗಳ ಮೇಲೆ ಪ್ರಭುತ್ವ ಸಾಧಿಸುವ ಯತ್ನ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮರಿ: ‘ಧಾರ್ಮಿಕ ಕ್ಷೇತ್ರಗಳ ಮೇಲೆ ಪ್ರಭುತ್ವ ಸಾಧಿಸುವ ದುಷ್ಟ ಶಕ್ತಿಗಳ ಪ್ರಯತ್ನ ಸಲ್ಲದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಎರಡನೇ ದಿನದ ಶರವನ್ನವರಾತ್ರಿ ಉತ್ಸವದಲ್ಲಿ ಅವರು ಅಶೀರ್ವಚನ ನೀಡಿದರು.

ರಾಷ್ಟ್ರದ ಒಳಗೆ ಹಾಗೂ ಹೊರಗೆ ಶತ್ರುಗಳಿಂದ ಭದ್ರತೆಗೆ ಆಪಾಯ ಎದುರಾಗದಂತೆ ಎಚ್ಚರವಹಿಸಬೇಕು. ಪ್ರಾಣದ ಹಂಗು ತೊರೆದು ಜನ ಸಮುದಾಯವನ್ನು ರಕ್ಷಿಸುವ ಯೋಧರಿಗೆ ಗೌರವ ಸಲ್ಲಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಮಾತೃ ಸ್ವರೂಪವಾಗಿರುವ ಮಣ್ಣು, ನೀರು, ಗಾಳಿ ಕಲುಷಿತವಾಗಲು ಬಿಡಬಾರದು. ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ‘ವಸ್ತು ಪೂಜಾವಾದ’ (ಪ್ರಕೃತಿ ಆರಾಧನೆ) ಹಾಗೂ ಸಂರಕ್ಷಣೆಯಿಂದ ಮಾತ್ರ ಮನುಕುಲದ ಏಳಿಗೆ ಸಾಧ್ಯ’

‘ಧರ್ಮ ಮಾರ್ಗದಲ್ಲಿ ನಡೆಯಲು ಆಹಾರ, ವಿಹಾರ, ವಿಚಾರ, ಯೋಗ, ಧ್ಯಾನ ಅವಶ್ಯ. ಇಂದಿನ ಆಧುನಿಕ ಸಮಾಜಕ್ಕೆ ಬಸವಣ್ಣ ಹಾಗೂ ನಾರಾಯಣ ಗುರುಗಳ ವಿಚಾರಧಾರೆಗಳನ್ನು ವಿಶ್ವಕ್ಕೆ ತಲುಪಿಸುವ ಮಹತ್ತರ ಜವಾಬ್ದಾರಿ ಯುವ ಸಮೂಹದ್ದಾಗಿದೆ ಎಂಬುದನ್ನು ನಾವು ಮರೆಯಬಾರದು’ ಎಂದರು.

ನೂತನ ತುರ್ತು ಸೇವೆಗೆ ಚಾಲನೆ: ಸಿಗಂದೂರು ಚೌಡಮ್ಮ ದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇವಸ್ಥಾನದಲ್ಲಿ ತುರ್ತು ಪರಿಸ್ಥಿತಿಗೆ ಬಳಸಲು ನೂತನ ಆಂಬುಲೆನ್ಸ್‌ ಸೇವೆಗೆ ಶ್ರೀಗಳು ಚಾಲನೆ ನೀಡಿದರು. ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಶ್ರೀಗಳಿಗೆ ಗೌರವ ಸಮರ್ಪಿಸಲಾಯಿತು.

ರಾತ್ರಿ ‘ಚಿತ್ರಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೀನಾಕ್ಷಿ ರಾಮಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ವ್ಯವಸ್ಥಾಪಕ ಪ್ರಕಾಶ ಇದ್ದರು.

***

‘ಬಾಹ್ಯ ಶಕ್ತಿಗಳು ಅನಗತ್ಯ ಹಸ್ತಕ್ಷೇಪ ಸಲ್ಲ’

‘ಸಿಗಂದೂರು ದೇವಸ್ಥಾನದ ಆಡಳಿತದಲ್ಲಿ ಯಾವುದೇ ಬಾಹ್ಯ ಶಕ್ತಿಗಳು ಅನಗತ್ಯ ಹಸ್ತಕ್ಷೇಪ ಮಾಡುವುದು ಸಲ್ಲದು. ಧರ್ಮಾಧಿಕಾರಿ ಎಸ್. ರಾಮಪ್ಪ ಜೊತೆಗೆ ಪಂಚಮಸಾಲಿ ಲಿಂಗಾಯತ ಪೀಠ ಸದಾ ಬೆನ್ನುಲುಬಾಗಿ ಇರಲಿದೆ. ಸರ್ಕಾರವಾಗಲಿ, ಕ್ಷುದ್ರ ಶಕ್ತಿಗಳಾಗಲಿ ಶ್ರೀ ಕ್ಷೇತ್ರದ ಮೇಲೆ ಅನಗತ್ಯವಾಗಿ ಪ್ರಭುತ್ವ ಸಾಧಿಸಲು ಪ್ರಯತ್ನಿಸಿದರೆ ಕೂಡಲ ಸಂಗಮ ಪೀಠದ ಶಕ್ತಿ ಏನೆಂದು ತೋರಿಸಲು ಸಿದ್ಧ. ಧರ್ಮಾಧಿಕಾರಿ ರಾಮಪ್ಪ ನೇತೃತ್ವದಲ್ಲಿಯೇ ದೇವಸ್ಥಾನ ಮುಂದುವರಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಮತವಿದೆ. ದೇವಸ್ಥಾನದ ವಿರುದ್ಧ ಷಡ್ಯಂತ್ರ ಮಾಡಿಸುವವರಿಗೆ ದೇವಿಯ ಅಶೀರ್ವಾದ ಇಲ್ಲ’.

– ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲ ಸಂಗಮ
ಲಿಂಗಾಯತ ಪಂಚಮಸಾಲಿ ಪೀಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು