ಸೋಮವಾರ, ಸೆಪ್ಟೆಂಬರ್ 20, 2021
27 °C
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ

ಗುಡಿ ಕೈಗಾರಿಕೆಗಳು ಬದುಕಿನ ಅವಿಭಾಜ್ಯ ಅಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಮಾಜದ ಸಂಸ್ಕೃತಿ, ಬದುಕಿನ ಭಾಗವೇ ಆಗಿರುವ ಗುಡಿ ಕೈಗಾರಿಕೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಸಲಹೆ ನೀಡಿದರು.

ಕಟೀಲ್‌ ಅಶೋಕ್ ಪೈ ಸ್ಮಾರಕ ಪದವಿ ಕಾಲೇಜಿನಲ್ಲಿ ಸಾಗರ ತಾಲ್ಲೂಕು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಕೈ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ 'ಪವಿತ್ರ ವಸ್ತ್ರ ಅಭಿಯಾನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಕರ ಸಂಸ್ಥೆಯ ಕೈಯಿಂದ ನೇಯ್ದ ವಸ್ತ್ರಗಳನ್ನು ಖರೀದಿಸುವ ಮೂಲಕ ಸ್ವಾವಲಂಬಿ ಹೋರಾಟಕ್ಕೆ ಸಾಥ್ ನೀಡಬೇಕು. ಭಾರಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಅಂತಃಕರಣವನ್ನು ಸರ್ಕಾರ, ಜನರು ಇದುವರೆಗೂ ತೋರಿಲ್ಲ. ಕೈಮಗ್ಗದ ಉತ್ಪನ್ನಗಳ ಘಟಕಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿರುವುದು ನಮ್ಮ ವ್ಯವಸ್ಥೆಯ ಮನೋಸ್ಥಿತಿಗೆ ಹಿಡಿದ ಕನ್ನಡಿ. ಜನರು ಖಾದಿ ಬಟ್ಟೆ ಧರಿಸುವ ಮೂಲಕ ಜೀವನ ಶೈಲಿ ಬದಲಾವಣೆಗೂ ಕಾರಣರಾಗಬೇಕು ಎಂದರು.

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಕಾರ್ಯದರ್ಶಿ ಪ್ರತಿಭಾ ರಾಘವೇಂದ್, ಸಂಘದ ಅಸಾಧಾರಣಾ ಸಾಧನೆ ಗುರುತಿಸಿ, ಉದ್ಯೋಗಾವಕಾಶ ದೊರಕಿಸಲು ರಾಜ್ಯ ಸರ್ಕಾರ ₹ 33 ಲಕ್ಷ  ಅನುದಾನ ಘೋಷಣೆ ಮಾಡಿತ್ತು. 3 ವರ್ಷಗಳ ಹಿಂದೆ ಬ್ಯಾಂಕಿಗೆ ಹಣ ಸಂದಾಯವಾಗಿತ್ತು. ಈ ಹಣ ಪಡೆಯಲು ಸಾಕಷ್ಟು ಬಾರಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲ ಹಣವನ್ನೂ ದಾಖಲೆ ಸಮೇತ ವಾಪಸ್‌ ನೀಡಿದ್ದೇವೆ. ಸಂಘದಿಂದ ₹ 60 ಲಕ್ಷ ವೆಚ್ಚದಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಮರುಪಡೆಯಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ರೈತರು, ಕುಶಲಕರ್ಮಿಗಳು ಹಾಗೂ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ನಂತರವಂತೂ ಮಗ್ಗಗಳು, ಕಾರ್ಯಾಗಾರಗಳು, ಸಣ್ಣ ಕೈಗಾರಿಕೆಗಳು ನಿಂತು ಹೋಗಿವೆ. ಲಕ್ಷಾಂತರ ಮೀಟರ್‌ ಬಟ್ಟೆ, ಸೀರೆ, ಚಾಪೆ, ಮಡಕೆ ಇತ್ಯಾದಿ ಸುಂದರ ವಸ್ತುಗಳು ಮಾರಾಟವಾಗದೆ ಉಳಿದಿವೆ. ಸರ್ಕಾರ ಸಹಾಯಹಸ್ತ ಚಾಚುತ್ತಿಲ್ಲ. ಚಾಚಿದಾಗಲೂ ಫಲಾನುಭವಿಗಳನ್ನು ತಲುಪುತ್ತಿಲ್ಲ, ಈ ಅಭಿಯಾನಕ್ಕೆ ಸಹೃದಯರು ಸ್ಪಂದಿಸಿದ್ದಾರೆ. ಸಾಮಾನ್ಯ ಜನರು ಕೈಜೋಡಿಸಿದ್ದಾರೆ ಎಂದರು.

ಮೇಳದಲ್ಲಿ ನೈಸರ್ಗಿಕ ಬಣ್ಣ ಹಾಕಿದ ಪರಿಶುದ್ಧ ಹತ್ತಿ ಕೈಮಗ್ಗದ ಉತ್ಪನ್ನಗಳಾದ ಸೀರೆಗಳು, ಪರಿಸರ ಸ್ನೇಹಿ ಬ್ಯಾಗ್, ಜುಬ್ಬಗಳು, ಮಹಿಳೆಯರ ಟಾಪ್‌ಗಳು, ಕಂಬಳಿ ಉತ್ಪನ್ನಗಳು, ಮಹಿಳೆಯರೇ ತಯಾರಿಸಿದ ಆಹಾರ ಸಾಮಗ್ರಿಗಳು, ಇತರೆ ಕೈ ಉತ್ಪನ್ನಗಳು, ಪುಸ್ತಕಗಳು, ಸಾಂಪ್ರದಾಯಿಕ ಗ್ರಾಮೀಣ ಆಟಗಳ ಪರಿಕರಗಳು, ಸ್ಟೇಷನರಿ ಸಾಮಗ್ರಿಗಳು, ಅಲಂಕಾರಿಕ ಬುಟ್ಟಿಗಳು, ಟೆರಕೋಟ್ಸ್‌ ಆಭರಣಗಳನ್ನು ಜನರು ಖರೀದಿಸಿದರು. ರಾಜ್ಯದ ಹೆಸರಾಂತ ಕೈಮಗ್ಗ ಹಾಗೂ ಕರಕುಶಲ ಸಂಸ್ಥೆಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. 

ಮಾನಸ ಸಂಸ್ಥೆಯ ಮುಖ್ಯಸ್ಥೆ ಡಾ.ರಜನಿ ಪೈ, ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಕಾವೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಕಂಬಳಿ ನೇಕಾರರ ಹೊನ್ನಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.