ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ: ವಿದ್ಯುತ್ ಅಭಾವಕ್ಕೆ ಸೋಲಾರ್‌ ಪರಿಹಾರ ಕಂಡ ರೈತ

ಬಳ್ಳಿಗಾವಿ ಗ್ರಾಮದ ಪ್ರಗತಿಪರ ರೈತ ದಿವಾಕರ್ ಅಡಿಕೆಹಾಳಿ
Last Updated 30 ಮಾರ್ಚ್ 2022, 1:50 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ವಿದ್ಯುತ್ ಉಳಿಸುವ ಜೊತೆಗೆ ರೈತರು ಅನುಭವಿಸುತ್ತಿರುವ ಹಲವಾರು ಬಗೆಯ ಬೋರ್‌ವೆಲ್‌ನ ಸಮಸ್ಯೆಗಳಿಗೆ ಪರಿಹಾರವಾಗಿ ಸೋಲಾರ್ ಬೋರ್‌ವೆಲ್ ಪದ್ಧತಿಯನ್ನು ಅಳವಡಿಸಿಕೊಂಡಿರುವ ಬಳ್ಳಿಗಾವಿ ಗ್ರಾಮದ ಪ್ರಗತಿಪರ ರೈತ ದಿವಾಕರ್ ಅಡಿಕೆಹಾಳಿ ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿಯಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಮಾಡುತ್ತಿರುವ ಇವರು, ತಮ್ಮ ಅಡಿಕೆ ತೋಟದಲ್ಲಿ 2 ವರ್ಷಗಳ ಹಿಂದೆ ಕೇವಲ ₹ 1 ಲಕ್ಷ ವೆಚ್ಚದಲ್ಲಿ ಸೋಲಾರ್ ಬೋರ್‌ವೆಲ್ ಅಳವಡಿಸಿದ್ದಾರೆ. ಈ ಸೋಲಾರ್ ಬೋರ್‌ವೆಲ್ ಸಹಾಯದಿಂದ ದಿನಕ್ಕೆ 8 ಗಂಟೆಗಳ ಕಾಲ ಯಾವುದೇ ತೊಂದರೆ ಇಲ್ಲದೇ ನೀರನ್ನು ಮೇಲಕ್ಕೆ ಎತ್ತುತ್ತಿದ್ದಾರೆ. ಈವರೆಗೂ ವೋಲ್ಟೇಜ್ ವ್ಯತ್ಯಾಸದಿಂದ ಮೋಟರ್, ವೈರ್ ಸೇರಿ ಯಾವುದೇ ಪರಿಕರಗಳು ಸುಟ್ಟಿಲ್ಲ. ತಡರಾತ್ರಿ ವಿದ್ಯುತ್ ಬಂದಾಗ ತೋಟಕ್ಕೆ ಹೋಗುವ ಅವಶ್ಯಕತೆ ಇಲ್ಲ. ಹಗಲಿನಲ್ಲಿಯೇ ತೋಟಕ್ಕೆ ಸಂಪೂರ್ಣ ನೀರು ಹಾಯಿಸುವ ಅನುಕೂಲ ಸಹ ಅವರು ಪಡೆದಿದ್ದಾರೆ.

ಫಲ ಬರುತ್ತಿರುವ 2,800 ಅಡಿಕೆ ಗಿಡಗಳ ಜೊತೆಗೆ ನೂರಾರು ತೇಗದ ಮರ, ತೆಂಗಿನ ಮರ, ಜಾಯಿ ಕಾಯಿ, ದಾಲ್ಚಿನ್ನಿ, ಏಲಕ್ಕಿ, ಕೋಕಂ, ಚಕ್ಕೋತಾ, ಕರಿ ಬೇವು, ಪಪ್ಪಾಯಿ, ಬಾಳೆ ಸೇರಿ ಹಲವು ಬಗೆಯ ಮಸಾಲೆ ಪದಾರ್ಥಗಳನ್ನು ಪ್ರಾಯೋಗಿಕವಾಗಿ ಬೆಳೆದಿದ್ದಾರೆ.

ಈ ಭಾಗದಲ್ಲಿ ವಿರಳವಾಗಿ ಬೆಳೆಯುವ ಜಾಯಿಕಾಯಿ ಗಿಡಗಳನ್ನು ಬೆಳೆಸಿ ಫಸಲನ್ನು ಉತ್ತಮವಾಗಿ ಪಡೆಯುತ್ತಿರುವ ಇವರು, ಪ್ರತಿ ಗಿಡದಿಂದ ಒಂದು ಸಾವಿರಕ್ಕೂ ಹೆಚ್ಚು ಕಾಯಿ ಬೆಳೆಯುತ್ತಿದ್ದಾರೆ.

ಸತತವಾಗಿ 8 ವರ್ಷ ಸಾವಯವ ಗೊಬ್ಬರ ಬಳಸಿ ಭತ್ತದ ಪೈರನ್ನು ಬೆಳೆದು ತಾವೇ ಸ್ವತಃ ಅಕ್ಕಿ ಚೀಲ ಮಾಡಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಸಹ ಮಾಡಿದ್ದಾರೆ. 20 ವರ್ಷಗಳ ಹಿಂದೆಯೇ ಬೋರ್‌ವೆಲ್‌ಗಳಿಗೆ ಮಳೆಕೊಯ್ಲು ಮಾದರಿ ನಿರ್ಮಿಸಿದ್ದಾರೆ. ಹಾಗಾಗಿ, ಇವರ ಬೋರ್‌ವೆಲ್‌ನಲ್ಲಿ ಸದಾ ನೀರು
ಹೆಚ್ಚಿರುತ್ತದೆ.

‘ನಾನು ಕಾಲೇಜು ದಿನಗಳಿಂದಲೂ ಕೃಷಿಯಲ್ಲಿ ತಂದೆ ಬಸವರಾಜಪ್ಪ ಜೊತೆಗೆ ಕೆಲಸ ಮಾಡಿದ್ದೇನೆ. ‘ಪ್ರಜಾವಾಣಿ’ ಪತ್ರಿಕೆಯ ಕೃಷಿ ಪುರವಣೆಯಲ್ಲಿ 2002ನೇ ಇಸ್ವಿಯಲ್ಲಿ ಬಂದ ‘ಅಡಿಕೆಯಲ್ಲಿ ಮಿಶ್ರ ಬೇಸಾಯ ಪದ್ಧತಿ’ ಲೇಖನ ಓದಿ ಅಳವಡಿಸಿಕೊಂಡಿದ್ದೇನೆ. ಇದೇ ಮಾದರಿಯಲ್ಲಿ ‘ಪ್ರಜಾವಾಣಿ’ ಕೃಷಿ ಪುರವಣಿಯೇ ಮಾರ್ಗದರ್ಶನ ಮಾಡಿದೆ’ ಎಂದುದಿವಾಕರ್ ಅಡಿಕೆಹಾಳಿ ಹೆಮ್ಮೆಯಿಂದ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT