ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಯೋಜನೆಗಳ ಗಂಧ, ಗಾಳಿ ಗೊತ್ತಿಲ್ಲದ ಕಾಂಗ್ರೆಸ್ ಅಭ್ಯರ್ಥಿ’

ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಲೇವಡಿ
Published 27 ಏಪ್ರಿಲ್ 2024, 15:40 IST
Last Updated 27 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ಸೊರಬ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಚುನಾವಣೆಗೋಸ್ಕರ ಬಾಡಿಗೆ ಮನೆ ಮಾಡಿದ್ದು, ಪರಾಜಿತಗೊಂಡ ನಂತರ ಮತ್ತೆ‌ ಬೆಂಗಳೂರಿಗೆ ವಲಸೆ ಹೋಗುತ್ತಾರೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದರು.

ಶನಿವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಭದ್ರಾವತಿ ವಿಎಸ್ಐಲ್ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಗಂಧ–ಗಾಳಿ ಗೊತ್ತಿಲ್ಲದ ಗೀತಾ ಶಿವರಾಜಕುಮಾರ್ ಅವರು ಅವುಗಳ ಉಳಿವು ಹಾಗೂ ಅನುಷ್ಠಾನಕ್ಕೆ ಹೇಗೆ ಮುಂದಾಗಬಲ್ಲರು ಎಂದು ಜನರು ಯೋಚಿಸಬೇಕಿದೆ. ಗೀತಾ, ನಟ ಶಿವರಾಜಕುಮಾರ್ ಹಾಗೂ ಮಧು ಬಂಗಾರಪ್ಪ ಚುನಾವಣೆಗಾಗಿ ಕವಲು ದಾರಿಯಲ್ಲಿದ್ದಾರೆ. ಫಲಿತಾಂಶದ ನಂತರ ಎಲ್ಲರೂ ಪಲಾಯನ ಮಾಡಲಿದ್ದಾರೆ ಎಂದು ತಿಳಿಸಿದರು.

‘ಡಾ.ರಾಜಕುಮಾರ್ ಅವರಿಗೆ ರಾಜಕೀಯ ಹಂಬಲವಿತ್ತು ಎನ್ನುವ ಶಿವರಾಜಕುಮಾರ್, ಈ ಕಾರಣಕ್ಕೆ ಪತ್ನಿ ಗೀತಾ ಅವರು ಸ್ಪರ್ಧೆ ಮಾಡಿದ್ದು, ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ತಾಲ್ಲೂಕಿನ ಬಂಕಸಾಣದ ಹೊಳೆಲಿಂಗೇಶ್ವರ ಜಾತ್ರೆಗೆ ಹಿಂದೊಮ್ಮೆ ಆಗಮಿಸಿದ್ದ ಡಾ.ರಾಜಕುಮಾರ್ ಅವರು, ಶಿವರಾಜಕುಮಾರ್ ಹೇಳಿದಂತೆ ರಾಜಕೀಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರೆ ಬಂಗಾರಪ್ಪ ಅವರು ತಮ್ಮ ಅಳಿಯ ಶಿವರಾಜಕುಮಾರ್ ಅವರನ್ನು ಅಂದೇ ಕ್ಷೇತ್ರದ ಶಾಸಕರನ್ನಾಗಿ ಮಾಡುತ್ತಿದ್ದರು. ಅದಕ್ಕೆ ನಮ್ಮ ಕುಟುಂಬದ ಸಹಮತವೂ ಇರುತ್ತಿತ್ತು. ಆದರೆ ಡಾ.ರಾಜ್ ಹಾಗೂ ಬಂಗಾರಪ್ಪ ಅವರು ಇಲ್ಲದ ಹೊತ್ತಿನಲ್ಲಿ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ರಾಜಕುಮಾರ್ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ’ ಎಂದು ಕುಮಾರ್ ಬಂಗಾರಪ್ಪ ದೂರಿದರು.

‘ದ್ವೇಷದ ರಾಜಕಾರಣಕ್ಕೆ ಮುಂದಾದ ಮಧು ಬಂಗಾರಪ್ಪ ‌ಸಹೋದರಿಯರನ್ನು ಎತ್ತಿಕಟ್ಟಿದ್ದಾರೆ. ಕೊನೆಯ ದಿನಗಳಲ್ಲಿ ತನ್ನ ಸ್ವಾರ್ಥಕ್ಕಾಗಿ ತಂದೆ ಬಂಗಾರಪ್ಪ ಅವರನ್ನು ಜೆಡಿಎಸ್‌ಗೆ ಕರೆತಂದು ರಾಜಕೀಯವಾಗಿ ಸಂಪೂರ್ಣ ಮುಳುಗಿಸಿದರು. ಕೈ‌ ಮುಷ್ಠಿ ‌ಕಟ್ಟಿದರೆ ಹೆಬ್ಬೆಟ್ಟು ಹೊರಗುಳಿಯುತ್ತದೆ. ಮುಷ್ಠಿಗೆ ಭೂಷಣ ಹೆಬ್ಬೆರಳೇ. ನಾಲ್ಕು ಬೆರಳು ಒಟ್ಟಾಗಿದ್ದರೂ ಕ್ಷೇತ್ರದಲ್ಲಿ ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ’ ಎನ್ನುವ ಮೂಲಕ ತಮ್ಮ ರಾಜಕೀಯ ನಡೆಯನ್ನು ಸಮರ್ಥಿಸಿಕೊಂಡರು.

ತಾಲ್ಲೂಕಿನ ತಾಳಗುಪ್ಪ ಗ್ರಾಮದ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಲಾಗಿದೆ ಎಂದು ಚುನಾವಣೆ ಪೂರ್ವದಲ್ಲಿ ಹೂಂಕರಿಸುತ್ತಿದ್ದ ಸಚಿವ ಮಧು ಬಂಗಾರಪ್ಪ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಏಕೆ ನ್ಯಾಯ ಒದಗಿಸಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಎಂ.ಡಿ.ಉಮೇಶ್, ಗುರುಕುಮಾರ್ ಪಾಟೀಲ್, ವಿ.ಜಿ.ಪರಶುರಾಮ್, ಪ್ರಶಾಂತ್, ಸೋಮಶೇಖರ್ ಬರದವಳ್ಳಿ, ಎಂ.ನಾಗಪ್ಪ, ಸುಧಾ ಶಿವಪ್ರಸಾದ್, ಲಲಿತಾ, ಶಬ್ಬೀರ್, ರಾಜು ಮಾವಿನ ಬಳ್ಳಿಕೊಪ್ಪ,ದೇವೇಂದ್ರಪ್ಪ ಚನ್ನಾಪುರ ಇದ್ದರು.

‘ಮಧು ಸಾಲಮುಕ್ತ ಆಗಿದ್ದು ಹೇಗೆ?’ ‘ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ತರದ ಸಚಿವರು ಚುನಾವಣೆ ಪೂರ್ವದಲ್ಲಿ ₹6 ಕೋಟಿ‌ ಚೆಕ್‌ ಬೌನ್ಸ್ ಪ್ರಕರಣದಲ್ಲಿ ಜಾಮೀನು‌ ಮೇಲೆ ಓಡಾಡುತ್ತಿದ್ದರು. ಈಗ ಸಾಲ ತೀರಿಸಲು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದ ಕುಮಾರ್ ಬಂಗಾರಪ್ಪ ‘ಜಿಲ್ಲೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಂದ ವಸೂಲಿ ಮಾಡಿದ ಹಣದಿಂದ ಅವರು ಸಾಲ ಮುಕ್ತಗೊಂಡಿದ್ದಾರೆ’ ಎಂದು ಆರೋಪಿಸಿದರು. ‘ಅಕ್ಷರ ಜ್ಞಾನವಿಲ್ಲದ ದುರಂಹಕಾರಿ ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲಿ ದಲ್ಲಾಳಿಗಳ ಮೂಲಕ ಆಡಳಿತ ನಡೆಸುತ್ತಾರೆ. ಜಿಲ್ಲೆಯ ಆಡಳಿತ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಅಣತಿಯಂತೆ ನಡೆಯುತ್ತಿದೆ ಎಂದು ಸಾಗರ ಕ್ಷೇತ್ರದ ಶಾಸಕ‌ ಗೋಪಾಲಕೃಷ್ಣ ಬೇಳೂರು ಹಲವು ಬಾರಿ ಆರೋಪಿಸಿದ್ದಾರೆ‌. ಪರಿಹಾರ ಕೇಳಿ ಬರುವವರಿಗೆ ತಮ್ಮ ಹಿಂಬಾಲಕರನ್ನು ಕೇಳಿ ಎನ್ನುವ ಸಚಿವರ ಸ್ಥಿತಿ ಹರೆಯದ ಯುವಕನಿಗೆ‌ ಮನೆಯ ಯಜಮಾನಿಕೆ ನೀಡಿದಂತಾಗಿದೆ’ ಎಂದು ಛೇಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT