ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗಕ್ಕೆ ಬಂದಿಳಿದ ಸ್ಟಾರ್ ಏರ್‌ ವಿಮಾನ: ವಾಟರ್‌ ಸೆಲ್ಯೂಟ್ ಸ್ವಾಗತ

ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ವಾಟರ್ ಸೆಲ್ಯೂಟ್‌ ಮೂಲಕ ಸ್ವಾಗತ
Published 21 ನವೆಂಬರ್ 2023, 14:32 IST
Last Updated 21 ನವೆಂಬರ್ 2023, 14:32 IST
ಅಕ್ಷರ ಗಾತ್ರ

ಶಿವಮೊಗ್ಗ: ಹೈದರಾಬಾದ್‌ನಿಂದ ಇಲ್ಲಿನ ಸೋಗಾನೆ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ಬಂದಿಳಿದ ಸ್ಟಾರ್‌ ಏರ್‌ ಸಂಸ್ಥೆಯ ಮೊದಲ ವಿಮಾನಕ್ಕೆ ವಾಟರ್‌ ಸೆಲ್ಯೂಟ್ ಗೌರವದ ಮೂಲಕ ಸ್ವಾಗತ ನೀಡಲಾಯಿತು.

ರನ್‌ ವೇನ ಎರಡೂ ಕಡೆ ನಿಂತ ಅಗ್ನಿಶಮನ ವಾಹನಗಳು ಜೆಟ್ ಮೂಲಕ ನೀರು ಹಾಯಿಸಿದಾಗ ಅದರ ನಡುವಿನಿಂದ ವಿಮಾನ ಹಾದು ಹೋಯಿತು. ಈ ಅಪರೂಪದ ಕ್ಷಣಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್‌.ಅರುಣ್‌, ಮೇಯರ್‌ ಶಿವಕುಮಾರ್‌, ಉಪಮೇಯರ್‌ ಲಕ್ಷ್ಮೀ ಶಂಕರನಾಯಕ್‌, ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ, ಎಸ್‌.ದತ್ತಾತ್ರಿ, ಜ್ಯೋತಿಪ್ರಕಾಶ್‌, ಸ್ಟಾರ್‌ ಏರ್‌ ಸಂಸ್ಥೆಯ ಭೂಪಣ್ಣ ನಾಯಕ ಸಾಕ್ಷಿಯಾದರು.

ಹೈದರಾಬಾದ್‌ನಿಂದ ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದ 74 ಸೀಟುಗಳ ಈ ಪುಟ್ಟ ವಿಮಾನ ನಂತರ ಇಲ್ಲಿಂದ ಗೋವಾ ಹಾಗೂ ತಿರುಪತಿಗೆ ಪ್ರಯಾಣಿಕರನ್ನು ಹೊತ್ತೊಯ್ದು ಮರಳಿತು. ಸಂಜೆ ಮತ್ತೆ ಹೈದರಾಬಾದ್‌ನತ್ತ ವಾಪಸ್‌ ತೆರಳಿತು. 

ಇದಕ್ಕೂ ಮೊದಲು ನಡೆದ ಸರಳ ಸಮಾರಂಭದಲ್ಲಿ ಶಿವಮೊಗ್ಗದಿಂದ ಸ್ಟಾರ್‌ ಏರ್‌ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ‘ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೆರವಾದರು’ ಎಂದು ಸ್ಮರಿಸಿದರು.

‘ಚಿತ್ರದುರ್ಗ– ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯನ್ನೊಳಗೊಂಡ ಮಧ್ಯ ಕರ್ನಾಟಕದ ಕೇಂದ್ರೀಕೃತವಾಗಿ ಉದ್ಯಮ, ವ್ಯಾಪಾರ ಹಾಗೂ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿಗೆ ಈ ವಿಮಾನ ನಿಲ್ದಾಣ ಪೂರಕವಾಗಲಿದೆ. ಬಹಳಷ್ಟು ಕಡೆ ವಿಮಾನ ನಿಲ್ದಾಣಗಳು ವಿಮಾನ ಸಂಚಾರವಿಲ್ಲದೆ ಕಾಂಕ್ರೀಟ್ ಮ್ಯೂಸಿಯಂನಂತಾಗಿವೆ. ಶಿವಮೊಗ್ಗ ಅದಕ್ಕೆ ಅಪವಾದವಾಗಲಿದೆ’ ಎಂದರು.

ಗೋವಾ, ತಿರುಪತಿ, ಹೈದರಾಬಾದ್ ಮಾರ್ಗಗಳನ್ನು ಉಡಾನ್ ಯೋಜನೆ ವ್ಯಾಪ್ತಿಗೆ ಒಳಪಡಿಸಿರುವುದರಿಂದ ಟಿಕೆಟ್ ದರದಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ಕೂಡ ಲಭ್ಯವಾಗಲಿದೆ. ಇಂದು ಒಂದೇ ದಿನ 400 ಪ್ರಯಾಣಿಕರು ವಿವಿಧ ಮಾರ್ಗಗಳಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಶುಭಾಶಯ ಕೋರಿದರು.

ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ವಿಮಾನ ಇಳಿಯಲು ಪೂರಕ ತಾಂತ್ರಿಕ ವ್ಯವಸ್ಥೆ ಹಾಗೂ ರಾತ್ರಿ ವೇಳೆ ಇಳಿಯುವ ವ್ಯವಸ್ಥೆಯನ್ನು ಡಿಸೆಂಬರ್ ಅಂತ್ಯದೊಳಗೆ ಅಳವಡಿಸಲಾಗುವುದು.
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ

12 ಆಸನ ಬ್ಯುಸಿನೆಸ್‌ ಕ್ಲಾಸ್‌

ಉಡಾನ್ ಯೋಜನೆಯಡಿಯ ವಿಮಾನದಲ್ಲಿ ಇದೇ ಮೊದಲ ಬಾರಿಗೆ ಬ್ಯುಸಿನೆಸ್ ಕ್ಲಾಸ್‌ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದು ದೇಶದಲ್ಲಿಯೇ ಮೊದಲು ಎಂದು ಸ್ಟಾರ್ ಏರ್ ಅಧಿಕಾರಿಗಳು ಮಾಹಿತಿ ನೀಡಿದರು. ವಿಮಾನದಲ್ಲಿ 12 ಆಸನಗಳು ಬ್ಯುಸಿನೆಸ್ ಕ್ಲಾಸ್ ಸೌಲಭ್ಯ ಹೊಂದಿವೆ. ಮಧ್ಯದ ಆಸನ ಇಲ್ಲ. ಎರಡು ಆಸನಗಳಲ್ಲಿ ಅರಾಮದಾಯಕವಾಗಿ ಸಂಚರಿಸಬಹುದು. ತಿರುಪತಿ ಗೋವಾ ಹಾಗೂ ಹೈದರಾಬಾದ್‌ಗೆ ಆರಂಭಿಕ ಆಫರ್ ಆಗಿ ಟಿಕೆಟ್‌ ಬೆಲೆ ₹1999 ನಿಗದಿಪಡಿಲಾಗಿದೆ. ಗೋವಾಗೆ 50 ನಿಮಿಷದಲ್ಲಿ ಹಾಗೂ ತಿರುಪತಿ ಹೈದರಾಬಾದ್‌ಗೆ 1 ಗಂಟೆಯಲ್ಲಿ ವಿಮಾನ ತಲುಪಲಿದೆ ಎಂದು ಹೇಳಿದರು.

ಶೀಘ್ರ ಮತ್ತೆ ಮೂರು ವಿಮಾನ ಹಾರಾಟ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರ ದೆಹಲಿ ಮುಂಬೈ ಹಾಗೂ ಬೆಂಗಳೂರಿಗೆ ಏರ್‌ ಇಂಡಿಯಾ ಅಲಯನ್ಸ್‌ ಏರ್‌ಲೈನ್ಸ್ ಹಾಗೂ ಸ್ಪೈಸ್‌ಜೆಟ್‌ ವಿಮಾನಗಳು ಹಾರಾಟ ಆರಂಭಿಸಲಿವೆ. ಅದಕ್ಕೆ ಟೆಂಡರ್‌ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT