ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ: ಚಪ್ಪರದಡಿ ಸಾಗುತ್ತಿದೆ ಅಕ್ಷರ ಕಲಿಕೆ!

ಜೇಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ
Last Updated 25 ಜೂನ್ 2022, 5:05 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಜೇಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ನಿರ್ಮಿಸಲಾಗಿರುವ ಚಪ್ಪರದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ದುಃಸ್ಥಿತಿ ಎದುರಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 304 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಬಹುತೇಕ ಗ್ರಾಮಗಳಲ್ಲಿನ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಕೆಲವು ಗ್ರಾಮಗಳಲ್ಲಿನ ಶಾಲೆಗಳ ನೂತನ ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಇನ್ನೂ ಕೆಲವು ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣದ ಬಗ್ಗೆ ಗಮನಹರಿಸಿಲ್ಲ.

ಕೆಲವು ಶಾಲೆಗಳ ಕಟ್ಟಡಕ್ಕೆ ಅನುದಾನ ಮಂಜೂರಾಗಿದೆ ಎಂಬ ಕಾರಣದಿಂದ ಹಳೆಯ ಕಟ್ಟಡ ತೆರವುಗೊಳಿಸಿದ್ದರಿಂದ, ಬದಲಿ ವ್ಯವಸ್ಥೆಗಾಗಿ ಗ್ರಾಮಸ್ಥರ ನೆರವಿನೊಂದಿಗೆ ಚಪ್ಪರ, ಟಾರ್ಪಲ್ ಹಾಗೂ ಶೆಡ್ ನಿರ್ಮಿಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿದೆ. 5 ವರ್ಷಗಳ ಹಿಂದೆಯೇ ಜೇಡಗೇರಿ ಗ್ರಾಮದ ಶಾಲೆಯ ಕಟ್ಟಡ ನೆಲಕಚ್ಚಿದ್ದು, ಹೊಸ ಕಟ್ಟಡಕ್ಕಾಗಿ ಜನಪ್ರತಿನಿಧಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ.

ಈ ಶಾಲೆಗೆ 4.13 ಎಕರೆ ಜಮೀನು ಇದೆ. ಆದರೆ, ಕಲಿಕೆಗೆ ಬೇಕಾದ ಉತ್ತಮ ವಾತಾವರಣ ಇಲ್ಲ. ಸುಸಜ್ಜಿತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು 5 ವರ್ಷಗಳಿಂದಗೋಡೆ ಬಿರುಕು ಬಿಟ್ಟಿರುವ, ಮಳೆ– ಗಾಳಿಗೆ ಸೋರುತ್ತಿರುವ ಕಟ್ಟಡದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ.

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 24 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಒಂದೇ ಕೊಠಡಿಯಲ್ಲಿ ಇಬ್ಬರು ಶಿಕ್ಷಕರು ಒಟ್ಟಿಗೆ ಪಾಠ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಬಿಸಿಯೂಟದ ಕೊಠಡಿಯಲ್ಲಿ 4 ಮತ್ತು 5ನೇ ತರಗತಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿತ್ತು. ಶಾಲೆಯ ಸುತ್ತಮುತ್ತ ಗಿಡಮರಗಳು ಹೆಚ್ಚಾಗಿರುವುದರಿಂದ ಈ ಕೊಠಡಿಯಲ್ಲಿ ಹುಳಹುಪ್ಪಟೆ ಕಾಟ ಇತ್ತು. ಹಲವು ಬಾರಿ ಹಾವುಗಳು ಕಣ್ಣಿಗೆ ಬಿದ್ದಿದ್ದರಿಂದ ವಿದ್ಯಾರ್ಥಿಗಳು ಅಲ್ಲಿ ಕುಳಿತುಕೊಳ್ಳಲು ಭಯ ಪಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರ ಗಮನಕ್ಕೆ ತಂದ ಬಳಿಕ ಗ್ರಾಮಾಭಿವೃದ್ಧಿ ಸಮಿತಿ, ಶಾಲಾಭಿವೃದ್ಧಿ ಸಮಿತಿ ಹಾಗೂ ಪಾಲಕರ ನೆರವಿನೊಂದಿಗೆ ತಾತ್ಕಾಲಿಕ ಚಪ್ಪರ ಹಾಕಿ ಪಾಠಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಲ್ಕೈದು ತಿಂಗಳಿಂದ ಚಪ್ಪರದ ಅಡಿಯಲ್ಲಿ ವಿದ್ಯಾರ್ಥಿಗಳ ಕಲಿಕೆ ಸಾಗುತ್ತಿದೆ.

‘ಬೇಸಿಗೆಯಲ್ಲಿ ತೊಂದರೆ ಇರಲಿಲ್ಲ. ಈಗ ಮಳೆಗಾಲ ಆಗಿರುವುದರಿಂದ ಚಪ್ಪರ ಸೋರುತ್ತಿದೆ. ಗಾಳಿ ಬೀಸುತ್ತಿರುವುದರಿಂದ ಚಳಿಗೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ. ಇರುವ ಕಟ್ಟಡವೂ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ತಗಡು ಹಾಕಲಾಗಿದೆ. ಭಾರಿ ಮಳೆ ಸುರಿದರೆ ಅದೂ ಸೋರುವುದರಿಂದ ಮಕ್ಕಳ ಕಲಿಕೆಗೆ ಸಂಪೂರ್ಣ ಹಿನ್ನೆಡೆಯಾಗಿದೆ’ ಎಂದು ಗ್ರಾಮದ ಶಿವಪ್ಪ ಅಸಮಾಧಾನ ವ್ಯಕ್ತಪಡಿಸಿದರು.

***

ಶಾಲಾ ಕಟ್ಟಡ ಸೋರುತ್ತಿರುವುದರಿಂದ ಪಾಲಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ತಾತ್ಕಾಲಿಕವಾಗಿ ಚಪ್ಪರ ಹಾಕಲಾಗಿದೆ. ಸರ್ಕಾರ ಶಿಕ್ಷಣಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಿಸಲು ಆದ್ಯತೆ ನೀಡಬೇಕು.
-ಎಸ್.ಗಣಪತಿ, ಅಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT