ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ವಾಲ್ಮೀಕಿ ನಿಗಮದ ಅಧೀಕ್ಷಕ ಆತ್ಮಹತ್ಯೆ

Published 27 ಮೇ 2024, 23:18 IST
Last Updated 27 ಮೇ 2024, 23:18 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್‌ ಪಿ. (52) ಅವರು ಇಲ್ಲಿನ ವಿನೋಬ ನಗರದ ಕೆಂಚಪ್ಪ ಲೇಔಟ್‌ ಬಳಿಯಿರುವ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮ್ಮ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದವರ ಹೆಸರು ಮತ್ತು ನಿಗಮ ದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಡೆತ್‌ನೋಟ್‌ನಲ್ಲಿ ಚಂದ್ರಶೇಖರ್‌ ಅವರು ವಿವರವಾಗಿ ಉಲ್ಲೇಖಿಸಿದ್ದಾರೆ.

‘ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಮ್ಮ ವಿಶೇಷ ತಂಡ ಶಿವಮೊಗ್ಗಕ್ಕೆ ತೆರಳಿ ಮಾಹಿತಿ ಸಂಗ್ರಹಿಸಲಿದೆ’ ಎಂದು ಸಿಐಡಿ ಡಿಜಿಪಿ ಎಂ.ಎ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯವರಾದ ಇವರು, ಬೆಂಗಳೂರಿನಿಂದ ಮೇ 25ರಂದು ನಗರಕ್ಕೆ ಬಂದಿದ್ದರು. 26ರಂದು ಪತ್ನಿ ಕವಿತಾ ಮತ್ತಿತರರು ಮೃತರೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಮಾಚೇನಹಳ್ಳಿಗೆ ತೆರಳಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣ ಪತ್ರ ಪತ್ತೆ:

‘ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮತಾ ರವುಲ್‌ ನನ್ನ ಸಾವಿಗೆ ಕಾರಣ. ಮಾನ್ಯ ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹಣ ವರ್ಗಾಯಿಸಲು ಲೆಕ್ಕಾಧಿಕಾರಿ ಹೇಳಿದ ಹಿನ್ನೆಲೆಯಲ್ಲಿ ನಿಗಮದ ₹187.33 ಕೋಟಿ ಅನುದಾನವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಒತ್ತಾಯಪೂರ್ವಕ ಅನುದಾನ ವರ್ಗಾಯಿಸುತ್ತಿದ್ದರು. ನಮಗೆ ಅವರ ಒಳಸಂಚು ಅರ್ಥವೇ ಆಗಿಲ್ಲ. ಬ್ಯಾಂಕ್‌ನವರು ಚೆಕ್‌ ಬುಕ್‌ ಮತ್ತು ಪಾಸ್ ಬುಕ್‌ನ್ನು ಈವರೆಗೂ ನೀಡಿಲ್ಲ. ಇದಲ್ಲದೇ ನಿಗಮದಲ್ಲಿ ಅಂದಾಜು ₹80 ಕೋಟಿಯಿಂದ ₹85 ಕೋಟಿ ಅವ್ಯವಹಾರ ಆಗಿದೆ. ಅಧಿಕಾರಿಗಳು ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿದ್ದಾರೆ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನಾನು ನಿಗಮಕ್ಕೆ ಮೋಸ ಮಾಡಿಲ್ಲ. ಅವ್ಯವಹಾರದಲ್ಲಿ ಭಾಗಿ ಆಗಿಲ್ಲ. ವಂಚನೆಯನ್ನೂ ಮಾಡಿಲ್ಲ. ಬೇರೆಯ ವರು ನಿಯಮಬಾಹಿರವಾಗಿ ಹಣ ಲೂಟಿ ಮಾಡಿರುವುದು ಕಂಡುಬರುತ್ತಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಕೆಲಸದ ಒತ್ತಡದಲ್ಲಿ ನಾನು ಮಾಡಿರುವ ತಪ್ಪು ಏನೆಂದರೆ, ಖಾತೆಯ ಚೆಕ್‌ ಬುಕ್‌ ಮತ್ತು ಕ್ಯಾಶ್‌ ಪುಸ್ತಕ ಮುಕ್ತಾಯಗೊಳಿಸದಿರುವುದು’ ಎಂದು ಬರೆದಿದ್ದಾರೆ.

‘ನಾನು ಹೇಡಿಯಲ್ಲ. ಅಲ್ಲದೇ, ಅವಮಾನವನ್ನು ಸಹಿಸಲಾರೆ. ನನಗೆ ಬೇರೆ ದಾರಿ ತೋಚಲಿಲ್ಲ. ಎಲ್ಲರೂ ಕ್ಷಮಿಸಿ’ ಎಂದು ಚಂದ್ರಶೇಖರ್‌ ಬರೆದಿದ್ದಾರೆ.

ಮರಣ ಪತ್ರ ಆಧಾರದ ಮೇಲೆ ಅವರ ಪತ್ನಿ ಕವಿತಾ ಅವರು ಇಲ್ಲಿನ ವಿನೋಬ ನಗರ ಪೊಲೀಸ್‌ ಠಾಣೆಯಲ್ಲಿ ಮೂವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

ಅಧಿಕಾರಿ ಆತ್ಮಹತ್ಯೆ; ಸರ್ಕಾರದ ಭ್ರಷ್ಟಾಚಾರಕ್ಕೆ ಹೊಸ ಪುರಾವೆ

ಕೋಲಾರ: ಅಧಿಕಾರಿಯೊಬ್ಬರು ₹187 ಕೋಟಿ ಅವ್ಯವಹಾರ ಸಂಬಂಧ ಅಧಿಕಾರಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನೈತಿಕತೆ, ಮಾನ ಮರ್ಯಾದೆ ಇದ್ದರೆ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಈಗ ದಾಖಲೆ ಸಮೇತ ಸಿಕ್ಕಿಬಿದ್ದಿದೆ. ಕಾಂಗ್ರೆಸ್‌ ಸರ್ಕಾರವು ಕರ್ನಾಟಕ ರಾಜ್ಯವನ್ನು ಲೂಟಿ ಮಾಡಿ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಹಣ ಕಳುಹಿಸಿಕೊಡುತ್ತಿದೆ ಎಂಬುದಾಗಿ ಈಚೆಗೆ ಪ್ರಧಾನಿ ಮೋದಿ ಹೇಳಿದ್ದರು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂದು ಪ್ರಶ್ನಿಸಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಲೂಟಿ ಸರ್ಕಾರ ಎಂದು ಟೀಕಿಸುತ್ತಿದ್ದವರಿಗೆ ಸಿದ್ದರಾಮಯ್ಯ ದಾಖಲೆ ಕೇಳುತ್ತಿದ್ದರು. ಅಧಿಕಾರಿ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ ನೋಟ್‌ನಲ್ಲಿ ಅಧಿಕಾರಿಗಳ ಹೆಸರು ನಮೂದಿಸಿದ್ದಾರೆ. ಲೂಟಿ ಸರ್ಕಾರ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT