ಶುಕ್ರವಾರ, ಡಿಸೆಂಬರ್ 3, 2021
26 °C
ಒಂದೇ ಗ್ರಾಮೀಣ ಪ್ರದೇಶದ ಸಂಪರ್ಕ ಕೊಂಡಿಗೂ ಸಂಚಕಾರ

ಶಿವಮೊಗ್ಗ: ಭಾರಿ ವಾಹನಗಳ ಓಡಾಟ; ಅಪಾಯದ ಅಂಚಿನಲ್ಲಿ ಸುತ್ತಾ ಸೇತುವೆ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ತಾಲ್ಲೂಕಿನ ತೆಂಕಬೈಲು, ಸುತ್ತಾ, ಮಳಲಿ, ಎಲ್. ಗುಡ್ಡೆಕೊಪ್ಪ, ಬಾಳೆಕೊಪ್ಪ, ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುತ್ತಾ ಸೇತುವೆ ಅಪಾಯದ ಅಂಚಿನಲ್ಲಿದೆ. ಸೇತುವೆ ಮೇಲೆ ದಿನನಿತ್ಯ ಭಾರಿ ವಾಹನಗಳು ಓಡಾಡುತ್ತಿದ್ದು, ಸೇತುವೆ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

ಸುತ್ತಲೂ ಮುಳುಗಡೆ ಹಿನ್ನೀರನ್ನು ಹೊದ್ದು ಮಲಗಿರುವ ಸೇತುವೆ ಅವನತಿ ಹಂತ ತಲುಪಿದ ಕಾರಣ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಎರಡು ವರ್ಷಗಳ ಹಿಂದೆಯೇ ಆದೇಶಿಸಿದ್ದರು. ಈ ಆದೇಶವನ್ನು ಗಾಳಿಗೆ ತೂರಲಾಗಿದೆ.

ಮರಳು ತುಂಬಿದ ಲಾರಿ ಸೇರಿ ಕಲ್ಲು ಕ್ವಾರಿ ವಾಹನಗಳು, ಅಕೇಶಿಯಾ, ನೀಲಗಿರಿ ತುಂಬಿದ ಭಾರಿ ಗಾತ್ರದ ಲಾರಿಗಳ ಓಡಾಟ  ಎಗ್ಗಿಲ್ಲದೆ ಸಾಗಿದೆ. ಹಗಲು ರಾತ್ರಿ ಎನ್ನದೇ ವಾಹನಗಳು ಸಂಚರಿಸುತ್ತಿದ್ದು, ಸೇತುವೆ ಕುಸಿಯುವ ಭೀತಿ ಎದುರಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ‌ಸೇತುವೆ ಇದು. ಹಿಂದೆ ಶಿವಮೊಗ್ಗ-ಕೊಲ್ಲೂರು ಮಾರ್ಗವನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಈ ಸೇತುವೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಹಿನ್ನೀರು ಸೇತುವೆ ಪ್ರದೇಶವನ್ನು ವ್ಯಾಪಿಸಿದ ಕಾರಣ ನಂತರದಲ್ಲಿ ಶಿವಮೊಗ್ಗ-ಕೊಲ್ಲೂರು ಸಂಪರ್ಕಕ್ಕೆ ಬೇರೆ ಮಾರ್ಗ ಕಂಡುಕೊಳ್ಳಲಾಯಿತು. ಬಳಿಕ ಸುತ್ತಾ ಸೇತುವೆ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳಲಾಯಿತು. ಇದೀಗ ಮುಳುಗಡೆ ಹಿನ್ನೀರಿಗೆ ಅರ್ಧ ಆಹುತಿಯಾಗಿರುವ ಸೇತುವೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದಿದೆ. ಇದರಿಂದ ಈ ಭಾಗದ ಗ್ರಾಮೀಣ ಜನರು ತೊಂದರೆ ಎದುರಿಸುವಂತಾಗಿದೆ.

ಸೇತುವೆ ಶಿಥಿಲ: ಸೇತುವೆ ಮೊದಲೇ ಶಿಥಿಲಾವಸ್ಥೆ ತಲುಪಿದೆ. ಮುಳುಗಡೆ ಪ್ರದೇಶದಲ್ಲಿರುವ ಈ ಸೇತುವೆ 6 ತಿಂಗಳ ಕಾಲ ಹಿನ್ನೀರಿನಲ್ಲಿಯೇ ಇರುತ್ತದೆ. ತಡೆಗೋಡೆಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಸೇತುವೆ ಇಕ್ಕೆಲಗಳ ಕೈಪಿಡಿ ಬಿದ್ದು ಹೋಗುತ್ತಿದೆ. ಸೇತುವೆ ತಳಭಾಗದಿಂದ ಕಟ್ಟಲಾಗಿದ್ದ ಕಲ್ಲುಗಳು ಉದುರಿ ಬೀಳುತ್ತಿವೆ. 

ಬ್ಯಾರಿಕೇಡ್ ಮಾಯ: ಭಾರಿ ಗಾತ್ರದ ವಾಹನಗಳ ಓಡಾಟಕ್ಕೆ ನಿಷೇಧವಿದ್ದರೂ ಅಧಿಕಾರಿಗಳು ನಿಗಾ ವಹಿಸಿ‌ಲ್ಲ. ಮರಳು, ಕಲ್ಲುಗಣಿ ಲಾರಿ ಓಡಾಡುತ್ತಿದ್ದರೂ ಗಮನ ಹರಿಸಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಲಾಗಿದೆ. ಪತ್ರ ಬರೆಯಲಾಗಿದೆ. ಆ ಮೊದಲು ಲಾರಿ ಓಡಾಡದಂತೆ ಬ್ಯಾರಿಕೇಡ್ ಹಾಕಲಾಗಿತ್ತು. ಕೆಲದಿನಗಳು ಮಾತ್ರ ಇದ್ದ ಬ್ಯಾರಿಕೇಡ್ ಈಗ ಮಾಯವಾಗಿದೆ. ಸೇತುವೆ ಕುಸಿದು ಬೀಳುವ ಆತಂಕ ಇದೆ ಎಂದು ಮಳಲಿಯ ಶ್ರೀಕಾಂತ್ ಭಟ್ ದೂರಿದರು.

ಮಳೆಗಾಲದಲ್ಲಿ ಸೇತುವೆ ಮುಳುಗಿ ಸೇತುವೆ ಮೇಲೆ ಎರಡು ಅಡಿಗೂ ಹೆಚ್ಚು ನೀರು ತುಂಬುತ್ತದೆ. ಧಾರಾಕಾರ ಮಳೆ ಬಂದರೆ ತೆಂಕಬೈಲು, ಬಾಳೆಕೊಪ್ಪ, ಕುಂಬತ್ತಿ, ಸುತ್ತಾ, ಮಳಲಿ, ಎಲ್. ಗುಡ್ಡೆಕೊಪ್ಪ ಮತ್ತಿತರ ಹತ್ತಾರು ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಇಲ್ಲಿನ ಜನರು ಹೊಸನಗರ ಸಂಪರ್ಕಕ್ಕಾಗಿ ಸುತ್ತಿ ಬಳಸಿ ಬರಬೇಕಾಗುತ್ತದೆ.ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ಹೋಗಬೇಕಿದೆ ಎಂದು ಬೇಸರಿಸಿದರು ಅವರು.

ಭಾರಿ ವಾಹನಗಳ ಓಡಾಟಕ್ಕೆ ಬದಲಿ ಮಾರ್ಗವಾಗಿ ಬಾಳೆಕೊಪ್ಪ, ಕುಂಬತ್ತಿ ಮೇಲೆ ಕಾರಣಗಿರಿ ಮೂಲಕ ಸಂಪರ್ಕ ಸಾಧಿಸಬಹುದು. ಆದರೆ ದೂರ ಆಗುತ್ತದೆ ಎಂದು ಈ ಸೇತುವೆ ಮೇಲೆ ಓಡಾಡುತ್ತವೆ ಎಂಬುದು ಗ್ರಾಮಸ್ಥರ ದೂರು.

***

ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಸುತ್ತಾ ಸೇತುವೆ ಹಾಳಾಗಿದ್ದರೂ ದುರಸ್ತಿ ಕಾರ್ಯ ಆಗಿಲ್ಲ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ. ಭಾರಿ ವಾಹನಗಳ ಸಂಚಾರದಿಂದ ಸೇತುವೆಗೆ ಸಂಚಕಾರ ಬಂದಿದೆ. 

- ಶ್ರೀಕಾಂತ್ ಭಟ್, ಮಳಲಿ ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು