ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ | ಸಿಂಹಕಟಾಂಜನ: ಕಾಲಮಾನಕ್ಕೆ ಕನ್ನಡಿ ಹಿಡಿದ ಸಾಕ್ಷಿಗಳು

‘ಹಲ್ಮಿಡಿ’ ಪೂರ್ವದ ಶಾಸನದ ಐತಿಹಾಸಿಕ ಹಿನ್ನೆಲೆ
Last Updated 26 ನವೆಂಬರ್ 2022, 4:44 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ತಾಳಗುಂದ ಸಿಂಹಕಟಾಂಜನ ಶಾಸನವು ಭೂಮಿಯ ಮೇಲ್ಮೈಯಿಂದ 6 ಪದರಗಳನ್ನು ದಾಟಿ ನೈಸರ್ಗಿಕ ಮಣ್ಣಿನ ಮೇಲೆ ಸುಮಾರು 2 ಮೀಟರ್‌ ಆಳದಲ್ಲಿ ಭೂಗತವಾಗಿತ್ತು.

ಈ ಶಾಸನವನ್ನು ಪತ್ತೆಹಚ್ಚಿ ಮತ್ತು ತ್ರುಟಿತಗೊಂಡ (ತುಂಡಾದ) ಭಾಗವನ್ನು ದಾಖಲೆ ಮಾಡಿ ಕಾಪಾಡುವಲ್ಲಿ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎಂ.ಕೇಶವ ಅವರ ಪಾತ್ರ ಅತ್ಯಂತ ಮಹತ್ವದಾಗಿದ್ದು, ತಮ್ಮ ಜ್ಞಾನದಿಂದ ಕನ್ನಡದ ಹಿರಿತನವನ್ನು ಶತಮಾನದ ಹಿಂದಕ್ಕೆ ಕೊಂಡೊಯ್ದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ತಾಳಗುಂದದಲ್ಲಿ ಲಭ್ಯವಾದ ಶಾಸನ ಕನ್ನಡದ ಪ್ರಾಚಿನ ಶಾಸನವೆಂದು ಪುಷ್ಠಿಕರಿಸಲು ಇರುವ ಐತಿಹಾಸಿಕ ದಾಖಲೆಗಳು:

*ಕ್ರಿ.ಶ. 450ರ ತಾಳಗುಂದ ಶಾಸನದ ಪ್ರಕಾರ ಇಲ್ಲಿನ ಪ್ರಣವೇಶ್ವರ (ಮಹಾದೇವ) ಶಾತವಾಹನರಿಂದ ಪೂಜಿಸಲ್ಪಟ್ಟಿದೆ. ಇದು ಸುಮಾರು 2,000 ವರ್ಷಗಳಿಂದ ದೇವಾಲಯ ಅಸ್ತಿತ್ವದಲ್ಲಿರುವ ಬಗ್ಗೆ ಬೆಳಕು ಚೆಲ್ಲುತ್ತದೆ.

3ನೇ ಶತಮಾನದ ಆದಿಯಲ್ಲಿ ಮಯೂರ ವರ್ಮ ತಾಳಗುಂದದಲ್ಲಿ ಸ್ನಾತಕ ಪದವಿವರೆಗೂ ಶಿಕ್ಷಣ ಪಡೆಯುತ್ತಾನೆ. ಇದನ್ನು ಕ್ರಿ.ಶ. 450ರ ಸ್ತಂಭ ಶಾಸನ ತಿಳಿಸುತ್ತದೆ. ಹಾಗಾಗಿ, 3ನೇ ಶತಮಾನದ ಆದಿಯಲ್ಲಿಯೇ ಶಿಕ್ಷಣ ನಡೆಯುತ್ತಿದ್ದ ಬಗ್ಗೆ ಸಾಕ್ಷಿ ಲಭಿಸುತ್ತದೆ.

*ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಲಿಪಿ ತಜ್ಞ ದಿವಂಗತ ಷ.ಶೆಟ್ಟರ್ ಅವರು ಕನ್ನಡ ಲಿಪಿಗಳು ಹಲ್ಮಿಡಿಗಿಂತ ಪೂರ್ವದಲ್ಲಿ ಬಳಕೆಯಲ್ಲಿದ್ದು, 3ನೇ ಶತಮಾನದಲ್ಲಿ ಕನ್ನಡ ಲಿಪಿಗಳ ಅನ್ವೇಷಣೆ ಅಥವಾ ಉಗಮವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಆ ಕಾಲಘಟ್ಟದಲ್ಲಿ ತಾಳಗುಂದದ ಹೊರತು ರಾಜ್ಯದ ಮತ್ಯಾವ ಪ್ರದೇಶದಲ್ಲೂ ಉನ್ನತ ಅಧ್ಯಯನ ಕೇಂದ್ರಗಳು ಕಾಣಸಿಗುವುದಿಲ್ಲ. ಆದ್ದರಿಂದ ತಾಳಗುಂದದಲ್ಲಿ ಹಲ್ಮಿಡಿಗಿಂತ ಪ್ರಾಚೀನ ಶಾಸನ ಲಭ್ಯವಾಗಿರುವುದು ಆಶ್ಚರ್ಯಕರ ಸಂಗತಿಯಲ್ಲ.

*ಹಲ್ಮಿಡಿ ಶಾಸನವು ಕೂಡ ಕದಂಬರ ಶಾಸನವಾಗಿದ್ದು, ಅಂದಿನ ಕಾಲದಲ್ಲಿ ಶಾಸನ ರಚನೆ ಮಾಡಿದ ವ್ಯಕ್ತಿಯು ಆ ಅವಧಿಯ ಪ್ರಖ್ಯಾತ ವಿದ್ವಾಂಸನಾಗಿರುವ ಸಾಧ್ಯತೆ ಇದೆ. ಅಂತಹ ವಿದ್ವಾಂಸನಿಗೆ ಶಾಸನ ರಚನೆಯ ಜ್ಞಾನ ನೀಡಿದಂತ ಶಿಕ್ಷಣ ಕೇಂದ್ರಗಳು ತಾಳಗುಂದ ಹೊರತುಪಡಿಸಿ ರಾಜ್ಯದಲ್ಲಿ ಎಲ್ಲೂ ಇದ್ದ ಬಗ್ಗೆ ಈವರೆಗೂ ಮಾಹಿತಿ ಲಭಿಸಿಲ್ಲ. ಹಾಗಾಗಿ, ಆತನ ಅಭ್ಯಾಸ ಕೂಡ ತಾಳಗುಂದಲ್ಲಿ ಆಗಿರುವ ಸಾಧ್ಯತೆ ಇದೆ.

*ಲಿಪಿಯ ರಚನೆಯಲ್ಲೂ ತಾಳಗುಂದದ ಶಿಕ್ಷಣ ವ್ಯವಸ್ಥೆ ಇಡೀ ದಕ್ಷಿಣ ಭಾರತದಲ್ಲೇ ಉತ್ತಮೊತ್ತಮವಾಗಿತ್ತೆಂದು ಹೇಳಬಹುದು. ಭಾರತದ ಇತಿಹಾಸದಲ್ಲಿ ಕ್ರಿ.ಶ. 450ರ ವೇಳೆಗೆ ತಾಳಗುಂದ ಸ್ತಂಭ ಶಾಸನದ ಅಕ್ಷರಗಳ ಕ್ರಮಬದ್ಧತೆ, ಶಿಸ್ತು, ವಿನ್ಯಾಸ ಇದರ ಜೊತೆಗೆ ಅಕ್ಷರಗಳ ಸೌಂದರ್ಯಗಳಲ್ಲಿ ಕಂಡುಬರುವ ಶಿಷ್ಟತೆ ಆ ವೇಳೆಯ ಯಾವ ಶಿಲಾ ಶಾಸನದಲ್ಲೂ ಕಾಣಸಿಗುವುದಿಲ್ಲ. (ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ- ಷ.ಶೆಟ್ಟರ್ ಪುಟ ಸಂಖ್ಯೆ-29).

ತ್ರುಟಿತ ಶಾಸನದ ಮಣ್ಣಿನ ಪದರದ ಮೇಲೆ ಕಾಕುತ್ಸವರ್ಮನ ಕಾಲದ ನಾಣ್ಯ ಸಿಕ್ಕಿದೆ. ಸ್ಥಳದಲ್ಲಿ ದೊರೆತಿರುವ ಸಾಂದರ್ಭಿಕ ಆಧಾರಗಳನ್ನು, ಮಣ್ಣಿನ ಸ್ತರಗಳ ಚಿತ್ರಣ, ಲಿಪಿ ಶೈಲಿ, ಐತಿಹಾಸಿಕ ದಾಖಲೆಗಳು ಈ ಶಾಸನವನ್ನು ಹಲ್ಮಿಡಿ ಶಾಸನಕ್ಕಿಂತ ಸುಮಾರು 50 ವರ್ಷಗಳಷ್ಟು ಹಳೆಯದೆಂದೂ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ ಎಂದು ಟಿ.ಎಂ.ಕೇಶವ ಅಭಿಪ್ರಾಯಪಡುತ್ತಾರೆ.

ಶಾಸನದ ಕಾಲಮಾನ ನಿರ್ಧಾರಕ್ಕೆ ಬಳಸಿದ ಸಾಂದರ್ಭಿಕ ಆಧಾರಗಳು

* ಮಹಾದ್ವಾರದ ಪ್ರವೇಶ ಪಾವಟಿಕೆಗಳ ಇಕ್ಕೆಲಗಳಲ್ಲಿ ನಿರ್ಮಿತವಾಗಿರುವ ಸಿಂಹಕಟಾಂಜನ ಶಾಸನದ ಶಿಲ್ಪ ಲಕ್ಷಣಗಳು ಕ್ರಿ.ಶ. 400ರ ಸುಮಾರಿನಲ್ಲಿ ಬಳಕೆಯಾಗಿರುವ ಶೈಲಿಯಲ್ಲಿವೆ.

* ಈ ಶಾಸನದಿಂದ ಪೂರ್ವಕ್ಕೆ 2 ಮೀಟರ್‌ ಅಂತರದಲ್ಲಿ ಸುಪ್ರಸಿದ್ಧ ಕಾಕುತ್ಸವರ್ಮ– ಶಾಂತಿವರ್ಮರ ಪೇಟಿಕಾಶಿರ ಅಕ್ಷರಗಳುಳ್ಳ ಸ್ತಂಭ ಶಾಸನವಿದೆ. ಇದರ ಕಾಲಮಾನವನ್ನು ಕ್ರಿ.ಶ. ಸುಮಾರು 450 ಎಂದು ಲಿಪಿಯ ಆಧಾರದ ಮೇಲೆ ನಿರ್ಧರಿಸಲಾಗಿದೆ.

* ಈ ಶಾಸನದ ಲಿಪಿ ಲಕ್ಷಣಗಳು ಹತ್ತಿರದ ಮಳವಳ್ಳಿಯ ಶಿವಸ್ಕಂದವರ್ಮನ ಶಾಸನದ (3ನೇ ಶತಮಾನದ) ಅಕ್ಷರಗಳನ್ನು ಹೋಲುತ್ತವೆ.

* ಉತ್ಖನನದಲ್ಲಿ ದೊರೆತ ಈ ಶಾಸನವು ಕದಂಬ ಕಾಕುತ್ಸವರ್ಮನ ಶಿಲಾಶಾಸನದ ವೇದಿಕೆಯಿಂದ ಸುಮಾರು 80 ಸೆಂ.ಮೀ. ಆಳದಲ್ಲಿ ದೊರೆತಿದ್ದು, ಇನ್ನಿತರ ಸಾಂದರ್ಭಿಕ ಆಧಾರಗಳಿಂದ ಸ್ತಂಭ ಶಾಸನಕ್ಕಿಂತ ಪೂರ್ವದ್ದಿರಬಹುದು ಎಂಬುದನ್ನು ಸೂಚಿಸುತ್ತದೆ.

* ಉತ್ಖನನದಲ್ಲಿ ಮಂಟಪದ ರಚನೆಗೆ ಹೊಂದಿಕೊಳ್ಳುವಂತೆ ಜೋಡಿಸಲಾದ ಇಟ್ಟಿಗೆಯ ನೆಲಹಾಸು ದೊರೆತಿದ್ದು, ಅದರ ಮೇಲೆ ಕಾಕುತ್ಸವರ್ಮನ ‘ಕಾ’ ಅಕ್ಷರವುಳ್ಳ ಚಿನ್ನದ ಬೇಳೆ ಕಾಸು ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT