ಶುಕ್ರವಾರ, ಮೇ 27, 2022
21 °C
ಕೃಷಿ ವಿ.ವಿಗಾಗಿ ರೈತರನ್ನು ಒಕ್ಕಲೆಬ್ಬಿಸುವುದಕ್ಕೆ ಶಾಸಕ ಎಚ್‌. ಹಾಲಪ್ಪ ಹರತಾಳು ವಿರೋಧ

ಆನಂದಪುರಂ: ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದಪುರಂ: ಇರುವಕ್ಕಿಯ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕಾಗಿ ಗ್ರಾಮದ ಸ್ಮಶಾನ ಹಾಗೂ ರೈತರ ಭೂಮಿಗೆ ಬೇಲಿ ಹಾಕಲು ಬಂದಿದ್ದ ತಹಶೀಲ್ದಾರ್ ಮತ್ತು ಅಧಿಕಾರಿಗಳ ವಿರುದ್ಧ ಅಲ್ಲಿನ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಚ್‌. ಹಾಲಪ್ಪ ಹರತಾಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ನೇತೃತ್ವದಲ್ಲಿ ಇರುವಕ್ಕಿ ಗ್ರಾಮದ ಸರ್ವೆ ನಂ. 45 ರಲ್ಲಿರುವ ಸ್ಮಶಾನ ಮತ್ತು ರೈತರ ಭೂಮಿಗೆ ಬೇಲಿ ಹಾಕಲು ಬಂದಿದ್ದರು. ಯಾವುದೇ ಮಾಹಿತಿ ನೀಡದೆ ಏಕಾಏಕಿ ಬೇಲಿ ಹಾಕಲು ಬಂದ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ರೈತರ ಭೂಮಿಗೆ ಬೇಲಿ ಹಾಕುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಚ್‌. ಹಾಲಪ್ಪ ಹರತಾಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ನನ್ನ ಗಮನಕ್ಕೂ ತರದೆ ಬೇಲಿ ಹಾಕಲು ಬಂದಿದ್ದು ಸರಿಯಲ್ಲ’ ಎಂದು ತಹಶೀಲ್ದಾರ್ ಮತ್ತು ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.

‘ವಿಶ್ವವಿದ್ಯಾಲಯದ ಬೇಲಿ ಹಾಕುವ ವಿಷಯವಾಗಿ ಪದೇಪದೇ ಸ್ಥಳೀಯ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಕಂದಾಯ ಅಧಿಕಾರಿಗಳು ಕೆಲವರ ಜತೆ ಶಾಮೀಲಾಗಿ ಈ ರೀತಿ ವರ್ತಿಸುತ್ತಿದ್ದಾರೆ. ಈಗಾಗಲೇ ವಿ.ವಿ. ಸುತ್ತಲಿನ ಸುಮಾರು 7 ಕಿ.ಮೀ. ಪ್ರದೇಶಕ್ಕೆ ಬೇಲಿ ಹಾಕಲಾಗಿದೆ. ಇನ್ನು ಒಂದು ಕಿ.ಮೀ.ನಷ್ಟು ಬೇಲಿ ಹಾಕುವ ಕೆಲಸ ಬಾಕಿ ಇದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಯಾವುದೇ ರೈತರು ಹೊಸದಾಗಿ ಬಗರ್‌ಹುಕುಂ ಜಾಗ ಒತ್ತುವರಿ ಮಾಡಿದರೆ ಅದಕ್ಕೆ ಬೆಂಬಲ ನೀಡುವುದಿಲ್ಲ ಎಂದೂ ಶಾಸಕರು ಹೇಳಿದರು.

ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಶಾಸಕರು, ‘ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಬಂದು ಪರಿಶೀಲನೆ ನಡೆಸಬೇಕು. ರೈತರ ಜಮೀನು ಮತ್ತು ಸ್ಮಶಾನ ಸೇರಿ ಅವರ ಸ್ವಾಧೀನದಲ್ಲಿರುವ ಭೂಮಿ ಬಿಟ್ಟು ಬೇಲಿ ಹಾಕಬೇಕು. ಪರಿಶೀಲನೆ ಆಗುವವರೆಗೂ ಯಾವುದೇ ಬೇಲಿ ಹಾಕಬಾರದು’ ಎಂದು ನೆಟ್ಟ ಕಂಬಗಳನ್ನು ಕಿಳಿಸಿ ಅಧಿಕಾರಿಗಳನ್ನು ವಾಪಸ್ ಕಳಿಸಿದರು.

ರೈತ ರಾಮಚಂದ್ರ ಭಟ್ ಮಾತನಾಡಿ, ‘ಇಲ್ಲಿ 60 ವರ್ಷಗಳಿಂದ ಜೀವನ ನಡೆಸುತ್ತಿದ್ದೇವೆ. ಯಾವುದೇ ಜಮೀನನ್ನು ಒತ್ತುವರಿ ಮಾಡಿಲ್ಲ. ಇರುವ ಕಾಡನ್ನು ಹಾಗೇ ಉಳಿಸಿದ್ದೇವೆ. ಇದರಲ್ಲಿಯೇ ಸ್ಮಶಾನದ ಜಾಗವನ್ನು ಮಾಡಿಕೊಂಡಿದ್ದೇವೆ. ಆ ಜಾಗಕ್ಕೂ ವಿಶ್ವವಿದ್ಯಾಲಯದವರು ಬೇಲಿ ಹಾಕುತ್ತಿದ್ದಾರೆ’ ಎಂದು ದೂರಿದರು.

ರೈತ ಹರೀಶ್ ಮಾತನಾಡಿ, ‘ಶರಾವತಿ ಮುಳುಗಡೆ ಪ್ರದೇಶದಿಂದ ನಾವು ಬಂದಿದ್ದೇವೆ. ಸರ್ಕಾರದಿಂದ ಯಾವುದೇ ಸೌಲಭ್ಯಗಳು ಇಲ್ಲಿಯವರೆಗೆ ದೊರಕಿಲ್ಲ. ಸ್ವಲ್ಪ ಸಾಗುವಳಿ ಮಾಡಿ ಗೇರು ಬೆಳೆದಿದ್ದೇವೆ. ಫಸಲು ಬಂದಿರುವ ಗೇರನ್ನು ಬಿಡದೆ ಅಧಿಕಾರಿಗಳು ಬೇಲಿ ಹಾಕುತ್ತಿದ್ದಾರೆ. ಸಾಗುವಳಿ ಮಾಡಿದ ಜಮೀನು ಕೆಲವೆಡೆ ಬಿಟ್ಟಿದ್ದಾರೆ. ನಮಗೂ ಬೀಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ರೇವಪ್ಪ ಹೊಸಕೊಪ್ಪ, ದೇವರಾಜ್, ಅರುಣ್ ಗೌಡ, ರೇವಣಯ್ಯ, ಕಂದಾಯ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಪೋಲಿಸ್
ಸಿಬ್ಬಂದಿ ಇದ್ದರು.

‘ಜಮೀನು ಕಡಿಮೆಯಾದರೂ ವಿ.ವಿ. ಸ್ಥಾಪನೆ ಮಾಡಬಹುದು’: ‘ಕೃಷಿ ವಿಶ್ವವಿದ್ಯಾಲಯ ಬರುವುದಕ್ಕಿಂತ ಮೊದಲು ಈ ಭೂಮಿಯಲ್ಲಿ ರೈತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ವಿಶ್ವವಿದ್ಯಾಲಯ ಸ್ಪಾಪನೆ ಮಾಡಲು 777 ಎಕರೆ ಜಮೀನು ಬೇಕು ಎನ್ನುವುದು ಎಷ್ಟು ಸರಿ? 60 ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ತೊಂದರೆ ಆಗಬಾರದು. 50 ಎಕರೆ ಜಮೀನು ಹೆಚ್ಚು ಕಡಿಮೆಯಾದರೂ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬಹುದು. ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ. ರೈತರು ಸಾಗುವಳಿ ಮಾಡಿಕೊಂಡ ಜಮೀನಿಗೆ, ಸ್ಮಶಾನಕ್ಕೆ ಬೇಲಿ ಹಾಕಲು ಬಂದಿದ್ದು ಎಷ್ಟು ಸರಿ’ ಎಂದು ಅಧಿಕಾರಿಗಳ ವಿರುದ್ಧ ಶಾಸಕ ಎಚ್‌. ಹಾಲಪ್ಪ ಗರಂ ಆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು