ಶನಿವಾರ, ನವೆಂಬರ್ 28, 2020
26 °C

ಸಹೋದರರ ಕಲಹದಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಸಹೋದರರಾದ ಶಾಸಕ ಕುಮಾರ್‌ ಬಂಗಾರಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಕಲಹದಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ. ಬಗರ್‌ಹುಕುಂ ಹೆಸರಿನಲ್ಲಿ ಮಧು ಬಂಗಾರಪ್ಪ ಕಮಿಷನ್ ಪಡೆದು ಸಾಗುವಳಿ ಚೀಟಿ ನೀಡಿದರೆ, ಈಗಿನ ಶಾಸಕ ಕುಮಾರ್ ಬಂಗಾರಪ್ಪ ಹಕ್ಕುಪತ್ರ ರದ್ದುಪಡಿಸುವ ಮೂಲಕ ಬಡ ಸಾಗುವಳಿದಾರರ ಬದುಕಿಗೆ ಕಂಟಕವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಆರೋಪಿಸಿದರು.

ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಪಾಸಿಟಿವ್ ಬಂದ ಕಾರಣ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಈಗಾಗಲೇ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 40 ಜನ ಸಂಭಾವ್ಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಮತ್ತೊಮ್ಮೆ ಮುಖಂಡರ ಸಭೆ ಕರೆದು ಉಳಿದಿರುವ ಗ್ರಾಮ ಪಂಚಾಯಿತಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ರೂಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರ ಪರಿಶ್ರಮದಿಂದ ದೇವಸ್ಥಾನ ಅಭಿವೃದ್ಧಿ ಕಂಡಿದೆ. ಕ್ಷೇತ್ರದ ಮಹಿಮೆ ಸಹಿಸದ ಕೆಲವರು ಅರ್ಚಕ ಶೇಷಗಿರಿ ಭಟ್ ಅವರನ್ನು ಮುಂದಿಟ್ಟುಕೊಂಡು ವ್ಯವಸ್ಥೆ ಕೆಡಿಸಲು ಹೊರಟಿದ್ದಾರೆ. ಶಾಸಕ ಕುಮಾರ್ ಬಂಗಾರಪ್ಪ ಅವರು ವಿವಾದವನ್ನು ತಿಳಿಗೊಳಿಸಲು ಮುಂದಾಗದೇ ಮತ್ತಷ್ಟು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು
ದೂರಿದರು.

ಹಿಂದುಳಿದ ಸಮುದಾಯಕ್ಕೆ ಸೇರಿರುವ ದೇವಸ್ಥಾನವನ್ನು ಉಳಿಸಿಕೊಳ್ಳಲು ತಳ ಸಮುದಾಯ ಒಂದಾಗುವ ಅನಿವಾರ್ಯ ಇದೆ. ಈ ನಿಟ್ಟಿನಲ್ಲಿ ಮಡಿವಾಳ ಸಮುದಾಯ ರಾಮಪ್ಪ ಅವರ ಬೆಂಬಲಕ್ಕೆ ನಿಲ್ಲಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು