ಸಾಗರ: ಹವ್ಯಕರ ಸಂಘಟನೆ ನಗರ ಕೇಂದ್ರಿತವಲ್ಲ

ಸಾಗರ: ಹವ್ಯಕರ ಸಂಘಟನೆ ಬೆಂಗಳೂರಿನಂತಹ ನಗರಕ್ಕೆ ಸೀಮಿತವಾಗದೆ ಹವ್ಯಕರು ನೆಲೆಸಿರುವ ಎಲ್ಲೆಡೆ ಅದರ ಚಟುವಟಿಕೆ ನಡೆಯುವಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.
ಇಲ್ಲಿನ ರಾಘವೇಶ್ವರ ಸಭಾಭವನದಲ್ಲಿ ಅಖಿಲ ಹವ್ಯಕ ಮಹಾಸಭಾದ ತಾಲ್ಲೂಕು ಘಟಕ ಭಾನುವಾರ ಏರ್ಪಡಿಸಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹವ್ಯಕ ಬಾಂಧವರು ಸಮಾಜದ ಸಂಘಟನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹವ್ಯಕ ಸಮಾಜದ ಜೊತೆಗೆ ಕೈಜೋಡಿಸಬೇಕು. ಹವ್ಯಕ ಸಮುದಾಯದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರತಿಭಾವಂತರು ಇದ್ದಾರೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಹಾಸಭಾ ಮಾಡುತ್ತಿದೆ ಎಂದರು.
‘ಯಾವುದೇ ಸಮುದಾಯ ತನ್ನ ಹಕ್ಕನ್ನು ಪಡೆಯಬೇಕಾದರೆ ಸಂಘಟನೆ ಹೊಂದಬೇಕಾದದ್ದು ಅನಿವಾರ್ಯವಾಗಿದೆ. ಹವ್ಯಕ ಸಮುದಾಯ ಕೂಡ ಈ ಮಾತಿಗೆ ಹೊರತಾಗಿಲ್ಲ. ಸಂಘಟನೆಯಿಂದಲೇ ಸಮುದಾಯಕ್ಕೆ ಹಲವು ಸೌಲಭ್ಯ ದೊರಕುತ್ತಿವೆ’ ಎಂದು ಸಾಗರ ನಗರ ಯೋಜನಾ ಪ್ರಾಧಿಕಾರದ ಸದಸ್ಯ ವಿನಾಯಕರಾವ್ ಮನೆಘಟ್ಟ ಹೇಳಿದರು.
‘ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಈ ಭಾಗದಲ್ಲಿ ಹವ್ಯಕರು ಮುಂಚೂಣಿಯಲ್ಲಿದ್ದಾರೆ. ಆದರೆ ರಾಜಕೀಯವಾಗಿ ಹಿನ್ನಡೆಯಾಗಿದೆ. ಈ ಕೊರತೆಯನ್ನು ತುಂಬುವ ಅಗತ್ಯವಿದೆ’ ಎಂದು ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರವೀಶ್ ಕುಮಾರ್ ಅಭಿಪ್ರಾಯಪಟ್ಟರು.
ಹವ್ಯಕ ಮಹಾಸಭಾದ ತಾಲ್ಲೂಕು ಮಾಜಿ ಅಧ್ಯಕ್ಷ ಕಲಸೆ ಶ್ರೀಧರ ಭಟ್, ಪ್ರಮುಖರಾದ ಈಳಿ ಶ್ರೀಧರ್ ಇದ್ದರು. ಮೇಘಾ ಪ್ರಾರ್ಥಿಸಿದರು. ಹು.ಭಾ.ಅಶೋಕ್ ಸ್ವಾಗತಿಸಿದರು. ಶ್ರೀಧರ ಭಟ್ ವಂದಿಸಿದರು. ವಿಷ್ಣುಮೂರ್ತಿ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.