ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ವಯನಾಡಿನ ಪರಿಸ್ಥಿತಿ ಮಲೆನಾಡಿಗೂ ಬರಬಹುದು’

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸರ್ಕಾರದ ಮೀನಮೇಷ; ಪ್ರೊ . ಶರತ್ ಅನಂತಮೂರ್ತಿ ಬೇಸರ
Published 2 ಆಗಸ್ಟ್ 2024, 15:38 IST
Last Updated 2 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರೊ.ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದೇ ಇದ್ದರೆ ಕೇರಳದ ವಯನಾಡಿನಲ್ಲಿ ಅದ ಅನಾಹುತ ನಮ್ಮ ಮಲೆನಾಡಿನಲ್ಲೂ ಆಗುವ ಕಾಲ ದೂರವಿಲ್ಲ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಸಹವಾಸ’ ವಿಷಯ ಕುರಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕದ ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶಗಳು, ಕೇರಳದ ವಯನಾಡ್‌ಗಿಂತ ಭಿನ್ನವಾಗಿಲ್ಲ. ಅಲ್ಲಿ ನಡೆದದ್ದು ಇಲ್ಲಿ ಯಾವಾಗ ಬೇಕಾದರೂ ಆಗಬಹುದು. ನಾಡಿನ ಸಾರಸ್ವತ ಲೋಕ ಇಲ್ಲಿನ ಪ್ರಕೃತಿಯಲ್ಲಿನ ವೈವಿಧ್ಯತೆ ಶ್ರೀಮಂತಿಕೆಯನ್ನು ಸದಾ ಎತ್ತಿ ತೋರಿಸಿದೆ. ಮತ್ತು ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳಿದೆ. ಕುವೆಂಪು ಅವರ ಕೃತಿಗಳಲ್ಲಿ ಚಿತ್ರಿತವಾಗಿರುವ ಸ್ವಭಾವವನ್ನು ಪಿ.ಲಂಕೇಶ್ ಅವರ ಅವ್ವ ಕವಿತೆಯಲ್ಲಿ ಗಮನಿಸಬಹುದು ಎಂದು ಮಾರ್ಮಿಕವಾಗಿ ಹೇಳಿದರು. 

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಪ್ರೊ.ಮಾಧವ್ ಗಾಡ್ಗೀಳ್ ಅವರ ವರದಿಯನ್ನು ಉಲ್ಲೇಖಿಸಿದ ಶರತ್ ಅನಂತಮೂರ್ತಿ, ‘ಅದನ್ನು ಒಪ್ಪದೇ ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಸರ್ಕಾರ ಸಮಿತಿ  ರಚಿಸಿತ್ತು. ಅದಾಗ್ಯೂ ಕಸ್ತೂರಿ ರಂಗನ್‌ ಸಮಿತಿ ಕೊಟ್ಟ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದೇ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದೇ ನಿರ್ಲಕ್ಷ್ಯ ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ನಾವು ಇನ್ನೂ ಅನೇಕ ಅನಾಹುತಗಳ ಎದುರಿಸಲಿದ್ದೇವೆ’ ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕನ್ನಡ ಭಾಷೆ ಸದ್ಯಕ್ಕೆ ತೀವ್ರ ಅಪಾಯ ಎದುರಿಸುತ್ತಿದೆ. ಹಿಂದಿ, ಬಂಗಾಳಿ, ತಮಿಳು ಸೇರಿದಂತೆ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ತೀರಾ ಕಡಿಮೆ ಆಗಿದೆ. ಕನ್ನಡದಲ್ಲಿ ಮಾತನಾಡುವ ಜನರ ಸಂಖ್ಯೆ ಶೇ 3.73ರ ದರದಲ್ಲಿ ಬೆಳೆಯುತ್ತಿದೆ. ಆದಾಗ್ಯೂ, ಇತರ ಭಾಷೆಗಳ ಬೆಳವಣಿಗೆ ತುಂಬಾ ಹೆಚ್ಚಾಗಿದೆ. ಸದ್ಯಕ್ಕೆ ಶೇ.50ಕ್ಕೂ ಹೆಚ್ಚು ಕನ್ನಡಿಗರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿದ್ದಾರೆ. ಭಾಷೆಯ ಬೆಳವಣಿಗೆಯ ಬಗ್ಗೆ ಚಿಂತಿಸಬೇಕಾಗಿದೆ. ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾದರೆ ಅದು ಅಳಿದುಹೋಗಲಿದೆ’ ಎಂದು  ಹೇಳಿದರು.

ಸಂಶೋಧಕ ಬಸವರಾಜ ಕಲ್ಗುಡಿ ಮಾತನಾಡಿ, ‘ಸಾಹಿತ್ಯದ ಜೊತೆಗಿನ ಸಹವಾಸಗಳು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಹೊಸ ಹೊಸ ಪ್ರಯೋಗಕ್ಕೆ ಕನ್ನಡದ ಮನಸ್ಸುಗಳು ಒಡ್ಡಿಕೊಂಡು ಮತ್ತೆ ಮತ್ತೆ ಅರಳಬೇಕಾಗಿದೆ. ಕ್ರಿಯಾಶೀಲತೆ ಹೆಚ್ಚಾಗಬೇಕು. ಸಾಹಿತ್ಯ ಸಂಸ್ಕೃತಿ ಭಾಷೆಯ ಸಮ್ಮಿಲನದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಕನ್ನಡದ ಚೈತನ್ಯವನ್ನು ಹೆಚ್ಚಿಸಬೇಕು. ಈ ಹಿನ್ನೆಲೆಯಲ್ಲಿ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯ ಆಸಕ್ತಿ ವಹಿಸುತ್ತಿದೆ ಎಂದರು.

ಕುವೆಂಪು ಅವರ ಪುತ್ರಿ, ಲೇಖಕಿ ತಾರಿಣಿ ಚಿದಾನಂದ ಗೌಡ ಅವರು ತಮ್ಮ ಸಹೋದರ  ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡರು. ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಚಿದಾನಂದಗೌಡ ಅವರು ಕವಿ ಕುವೆಂಪು ಅವರೊಂದಿಗಿನ ಒಡನಾಟ ಸ್ಮರಿಸಿದರು.

ಪ್ರೊ.ಅನಂತಮೂರ್ತಿ ಅವರ ವಿಡಿಯೋ ಉಪನ್ಯಾಸಗಳ ಕುರಿತು  ನಿತ್ಯಾನಂದ ಬಿ.ಶೆಟ್ಟಿ, ಪ್ರೊ.ಎಚ್.ಎನ್.ಮುರಳೀಧರ್,  ಚಂದನ್ ಗೌಡ,  ಸುರೇಶ್ ನಾಗಲಮಡಿಕೆ, ಎಚ್‌.ಶಶಿಕಲಾ ಎಚ್ ಮಾತನಾಡಿದರು. ರಂಗ ಬೆಳಕು ತಂಡದ ಸದಸ್ಯರಿಂದ ಪಿ.ಲಂಕೇಶ್ ಅವರ ಅವ್ವ ಕವನ ವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ಹೊಂಗಿರಣ ರಂಗ ತಂಡ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯ ಆಯ್ದ ಭಾಗದ ರಾವಣ ದರ್ಶನ ಎಂಬ ನಾಟಕವನ್ನು ಪ್ರದರ್ಶಿಸಿತು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಟಿ.ಅವಿನಾಶ್,  ಕುವೆಂಪು ವಿವಿ ಕುಲಸಚಿವ ಎ.ಎಲ್. ಮಂಜುನಾಥ್,   ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಸಿ.ಎಸ್. ಮಹೇಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT