ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,500 ಪಿಡಿಒ ಹುದ್ದೆಗಳು ಮೇಲ್ದರ್ಜೆಗೆ: ರಾಜ್ಯ ಸರ್ಕಾರ ಆದೇಶ

Last Updated 11 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ)1,500 ಹುದ್ದೆಗಳನ್ನು ‘ಗ್ರೂಪ್‌ ಸಿ’ನಿಂದ ‘ಗ್ರೂಪ್‌ ಬಿ’ಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದುವರೆಗೂ ಗ್ರೂಪ್‌–ಸಿ ನಲ್ಲಿದ್ದ ₹ 37,900–₹ 70,850 ವೇತನ ಶ್ರೇಣಿ ಹೊಂದಿದ್ದ 1,500 ಪಿಡಿಒ ಹುದ್ದೆಗಳನ್ನು ವೇತನ ಶ್ರೇಣಿ ₹ 40,900–₹ 78,200 ವೇತನ ಶ್ರೇಣಿಯ ಗ್ರೂಪ್‌–ಬಿ ಕಿರಿಯ ವೃಂದಕ್ಕೆ ಉನ್ನತೀಕರಿಸಲಾಗಿದೆ. ಇನ್ನು ಮುಂದೆ ಅವರು ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಪದನಾಮ ಹೊಂದಲಿದ್ದಾರೆ.

6,021 ಹುದ್ದೆಗಳಲ್ಲಿ 4,521 ಹುದ್ದೆಗಳನ್ನು₹ 37,900–₹ 70,850 ವೇತನ ಶ್ರೇಣಿಯಲ್ಲಿ (ಗ್ರೂಪ್‌ ‘ಸಿ’) ಮುಂದುವರಿಸಲಾಗಿದೆ. ಹಿರಿಯ ಪಿಡಿಒ ಹಾಗೂ ಪಿಡಿಒ ವೃಂದಗಳಿಗೆ ಪ್ರತ್ಯೇಕ ನೇಮಕಾತಿ ಕಾರ್ಯವಿಧಾನವನ್ನು ರೂಪಿಸಲಾಗುತ್ತಿದೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ತಾಲ್ಲೂಕುಮಟ್ಟದಲ್ಲಿ ಸೃಷ್ಟಿಸಿರುವ 176 ಹೆಚ್ಚುವರಿ ಕಾರ್ಯಕ್ರಮ ಅಧಿಕಾರಿ ಹುದ್ದೆಗಳನ್ನು ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕರ ಹುದ್ದೆಗಳೆಂದು ಪುನರ್ ನಾಮಕರಣಗೊಳಿಸಲಾಗಿದೆ. ಅಲ್ಲದೇ ತಾಲ್ಲೂಕು ಪಂಚಾಯಿತಿಯ ಪಂಚಾಯತ್ ರಾಜ್‌ ವಿಭಾಗಕ್ಕೆ226 ಸಹಾಯಕ ನಿರ್ದೇಶಕರ ಹುದ್ದೆ ಮಂಜೂರು ಮಾಡಲಾಗಿದೆ. ಹಾಗಾಗಿ, ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ, ಸಮನ್ವಯದ ಹೊಣೆಗಾರಿಕೆಯನ್ನು ಪಂಚಾಯಿತಿಗಳು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಲು, ಮುಂಬಡ್ತಿಗಳಿಗೆ ಅನುಕೂಲ ಕಲ್ಪಿಸಲುಪಿಡಿಒ ಹುದ್ದೆಗಳನ್ನು ಉನ್ನತೀಕರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಆದೇಶದಲ್ಲಿ ವಿವರಿಸಿದ್ದಾರೆ.

2010ರಲ್ಲಿ ನೇಮಕವಾಗಿದ್ದ 2,500 ಪಿಡಿಒಗಳಲ್ಲಿ 613 ಮಂದಿಗೆ ಇದುವರೆಗೂ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಉಳಿದವರಿಗೆ ಬಡ್ತಿ ನೀಡಲು ಸಾಧ್ಯವಾಗದ ಕಾರಣ ಸರ್ಕಾರ ಹುದ್ದೆಗಳನ್ನೇ ಮೇಲ್ದರ್ಜೆಗೆ ಏರಿಸಲು ಕಳೆದ ತಿಂಗಳು ನಡಾವಳಿ ರೂಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT