ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ಬರಲು ಪೆಗಾಸಸ್ ತಂತ್ರಾಂಶ ಬಳಕೆ: ಕಾಂಗ್ರೆಸ್‌ ಆರೋಪ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆಗೆ ಆಗ್ರಹ
Last Updated 23 ಜುಲೈ 2021, 6:16 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿಯೇತರ ಸರ್ಕಾರ ಉರುಳಿಸಲು ಕೇಂದ್ರ ಸರ್ಕಾರ ಪೆಗಾಸಸ್ ತಂತ್ರಾಂಶ ಬಳಸಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು.

ಪೆಗಾಸಸ್ ಎಂಬುದು ಇಸ್ರೇಲ್ ಕಂಪನಿ ರಚಿಸಿದ ತಂತ್ರಾಂಶವಾಗಿದ್ದು, ಅದನ್ನು ದೇಶಗಳು ಭಯೋತ್ಪಾದನೆ ನಿಗ್ರಹ ಮತ್ತು ದೇಶ ರಕ್ಷಣೆಗಾಗಿ ಉಪಯೋಗಿಸುತ್ತವೆ. ಭಾರತ ಕೂಡ ಇದೇ ಉದ್ದೇಶಕ್ಕೆ ಅದನ್ನು ಖರೀದಿಸಿ ದುರ್ಬಳಕೆ ಮಾಡಿಕೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಪ್ರಮುಖ ನಾಯಕರು, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಚುನಾವಣಾ ಆಯುಕ್ತರು, ಚುನಾವಣಾ ತಂತ್ರಗಾರ ಹಾಗೂ ಪ್ರಮುಖ ಪತ್ರಕರ್ತರು ಸೇರಿ ತಮಗೆ ಆಗದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸಲು ಫೋನ್‌ಗಳನ್ನು ಕದ್ದಾಲಿಕೆ ಮಾಡಿ, ಬ್ಲಾಕ್ ಮೇಲ್ ತಂತ್ರಗಾರಿಕೆ ಅನುಸರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಇದರಿಂದ ಮೋದಿ ಹಾಗೂ ಅಮಿತ್‌ ಶಾ ಅವರ ಅಸಲಿ ಮುಖವಾಡ ಬಯಲಾಗಿದೆ ಎಂದು ಕುಟುಕಿದರು.

ಪೆಗಾಸಸ್ ತಂತ್ರಾಂಶದ ಮೂಲಕ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಿಸಿದ್ದಾರೆ. ಅಲ್ಲದೇ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಪ್ರಮುಖ ನಾಯಕರನ್ನು ಈ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಿ ಬ್ಲಾಕ್ ಮೇಲ್ ತಂತ್ರ ಪ್ರಯೋಗಿಸಿ, ಅವರನ್ನು ಸೆಳೆದು ಬಿಜೆಪಿ ಅಧಿಕಾರಕ್ಕೆ ಬಂದಿದೆಯೇ ಹೊರತು, ಜನಾದೇಶದಿಂದ ಅಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲೂ ಇದೇ ತಂತ್ರಗಾರಿಕೆ ಬಳಸಿದ್ದಾರೆ ಎಂದು ದೂರಿದರು.

ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಸುಬೇಂದು ಅಧಿಕಾರಿ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್, ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಸಿದ್ಧರಾಮಯ್ಯ ಅವರ ಆಪ್ತ ಸಹಾಯಕ ಸೇರಿ ತಮ್ಮನ್ನು ವಿರೋಧಿಸಿದವರನ್ನು ಹಣಿಯಲು ಪೆಗಾಸಸ್ ಬೇಹುಗಾರಿಕೆ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂದರು.

ಬೇಹುಗಾರಿಕೆ ಕೃತ್ಯದಿಂದ ಪ್ರಪಂಚದೆದುರು ಭಾರತ ತಲೆ ತಗ್ಗಿಸುವಂತೆ ಮಾಡಿದ ಈ ಸರ್ಕಾರವನ್ನು ವಜಾಗೊಳಿಸಬೇಕು. ಕೇಂದ್ರ ಸರ್ಕಾರವನ್ನು ರಾಷ್ಟ್ರಪತಿ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಪ್ರಮುಖರಾದ ವಿಶ್ವನಾಥ್ ಕಾಶಿ, ನಾಗರಾಜ್, ಎನ್.ಡಿ. ಪ್ರವೀಣ್ ಕುಮಾರ್, ಚಂದನ್, ಆಕಾಶ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT