ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಾದಕ ದ್ರವ್ಯದ ಆರೋಪಿಗಳಿಗಿಲ್ಲ ಜಾಮೀನು

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಎ. ಮುಸ್ತಾಫ್ ಹುಸೇನ್ ಎಚ್ಚರಿಕೆ
Last Updated 6 ಅಕ್ಟೋಬರ್ 2021, 6:24 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾದಕ ವಸ್ತುಗಳ ಸೇವನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡರೆ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಕುಟುಂಬ, ಸಮಾಜದಲ್ಲೂ ಕೆಟ್ಟ ಹೆಸರು ಉಳಿಯುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಎಸ್.ಎ. ಮುಸ್ತಾಫ್ ಹುಸೇನ್ ಎಚ್ಚರಿಸಿದರು.

ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪೊಲೀಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾದಕ ವಸ್ತು ಜಾಲ ತಡೆಗೆ ಕಠಿಣ ಕಾಯ್ದೆ ರೂಪಿಸಲಾಗಿದೆ. ಜೀವನದಲ್ಲಿ ಒಮ್ಮೆ ಅಪರಾಧದ ಕಪ್ಪುಚುಕ್ಕೆ ಬಂದರೆ ಬದುಕು, ಭವಿಷ್ಯ ಹಾಳಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲೂ ಮಾದಕವ್ಯಸನಿಗಳ ಪ್ರಮಾಣ ಹೆಚ್ಚುತ್ತಿದೆ. ಈ ಚಟಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಒಮ್ಮೆ ಚಟಕ್ಕೆ ದಾಸರಾದರೆ ಹೊರಗೆ ಬರುವುದು ಕಷ್ಟ. ಮೊದಲು ಉಚಿತವಾಗಿ ನೀಡಿ, ಆಕರ್ಷಿಸುತ್ತಾರೆ. ನಂತರ ಸುಲಿಗೆ ಮಾಡುತ್ತಾರೆ’ ಎಂದು ವಿವರಿಸಿದರು.

ಅ.2ರಿಂದ ನ.14ರವರೆಗೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿ ಸಲಾಗುವುದು. ಕರಪತ್ರ ಹಂಚಿಕೆ, ಜಾಥಾಗಳ ಮೂಲಕ ಜನ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ‘ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದುಶ್ಚಟಗಳ ಮೊರೆಹೋಗಬಾರದು. ಮಾದಕ ವ್ಯಸನಿಗಳಾದರೆ ಇಡೀ ಕುಟುಂಬ ಸಂಕಷ್ಟಕ್ಕೀಡಾಗುತ್ತದೆ. ನಿಮ್ಮ ಸುತ್ತಮುತ್ತಲೂ ಯಾವುದೇ ಮಾದಕ ವಸ್ತುಗಳು, ಗಾಂಜಾ ಮಾರಾಟ, ಸಾಗಣೆ ಕಂಡುಬಂದರೆ ತಕ್ಷಣ ಪ್ರಾಂಶುಪಾಲರಿಗೆ ಅಥವಾ ಪೊಲೀಸರಿಗೆ ದೂರು ನೀಡಬೇಕು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ‘15ರಿಂದ 20 ವರ್ಷದ ಒಳಗಿನ ಮಕ್ಕಳಲ್ಲಿ ಗಾಂಜಾ ಚಟಕ್ಕೆ ಒಳಗಾಗುತ್ತಿದ್ದಾರೆ. ಮೊದಲು ಸಿಗರೇಟ್ ಸೇದಲು ಪ್ರೇರೇಪಿಸುತ್ತಾರೆ. ನಂತರ ಚಟ ಗಾಂಜಾ ಸೇವನೆಗೆ ಬದಲಾಗುತ್ತದೆ. ಆಗ ಹಣಕ್ಕಾಗಿ ಮೊಬೈಲ್ ಕಳವು ಮತ್ತಿತರ ಅಪರಾಧ ಕೃತ್ಯಗಳಿಗೆ ಕೈಹಾಕುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ನ್ಯಾಯಾಧೀಶರಾದ ಕೆ.ಎನ್. ಸರಸ್ವತಿ, ಕೃಪಾ ಸಿ.ಎಲ್, ಜಿಲ್ಲಾಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT