ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಚಿದ ಮಲೆನಾಡಿನ ಸಜ್ಜನಿಕೆಯ ರಾಜಕಾರಣದ ಪ್ರಬಲ ಕೊಂಡಿ ತಿಮ್ಮಪ್ಪ ಹೆಗಡೆ

ಮೌಲ್ಯಾಧಾರಿತ ರಾಜಕಾರಣಿ ಎಲ್.ಟಿ. ತಿಮ್ಮಪ್ಪ ಹೆಗಡೆ ನಿರ್ಗಮನ
Last Updated 18 ಜನವರಿ 2023, 11:41 IST
ಅಕ್ಷರ ಗಾತ್ರ

ಸಾಗರ: ಹದಿನೈದು ವರ್ಷಗಳ ಹಿಂದಿನ ಘಟನೆಯಿದು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಉಪನ್ಯಾಸಕರೊಬ್ಬರು ತಮ್ಮದೇ ಸಹದ್ಯೋಗಿಯೊಬ್ಬರ ಪಿತೂರಿಯಿಂದ ಇಲಾಖಾ ವಿಚಾರಣೆ ಎದುರಿಸುವಂತಾಗಿತ್ತು. ಆ ಉಪನ್ಯಾಸಕರು ಅಂದು ಅಧಿಕಾರದಲ್ಲಿದ್ದವರ ಬಳಿ ಹೋದರೆ ಸ್ಪಂದನೆ ಸಿಕ್ಕಿರಲಿಲ್ಲ. ಆಗ ಅವರು ತೆರಳಿದ್ದು ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಬಳಿ.

ಸಾಗರದಿಂದ ಆ ಉಪನ್ಯಾಸಕರ ಪರವಾಗಿ 10ರಿಂದ 15 ಬಾರಿ ಬೆಂಗಳೂರಿಗೆ ತೆರಳಿ ಕೊನೆಗೂ ಅವರಿಗೆ ನ್ಯಾಯ ಒದಗಿಸಿಕೊಟ್ಟವರು ತಿಮ್ಮಪ್ಪ ಹೆಗಡೆ. ಈ ಕೆಲಸಕ್ಕೆ ಉಪನ್ಯಾಸಕರಿಂದ ಬಸ್ ಪ್ರಯಾಣದ ಖರ್ಚನ್ನು ಸಹ ಅವರು ಪಡೆದಿರಲಿಲ್ಲ. ಇದು ಎಲ್.ಟಿ. ಅವರು ಸಾರ್ವಜನಿಕ ಬದುಕಿನಲ್ಲಿ ನಡೆದುಕೊಂಡ ಮಾದರಿ ನಡೆಯ ಒಂದು ಉದಾಹರಣೆಯಷ್ಟೆ.

ಸಾಗರ ಪ್ರಾಂತ್ಯದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಹಕಾರ ಕ್ಷೇತ್ರದ ಒಂದೂಕಾಲು ಶತಮಾನದ ಇತಿಹಾಸದೊಂದಿಗೆ ಎಲ್.ಟಿ. ಅವರ ಹೆಸರು ತಳುಕು ಹಾಕಿಕೊಂಡಿದೆ. ರಾಜಕೀಯವೆಂದರೆ ಕೇವಲ ಅಧಿಕಾರ ಅನುಭವಿಸುವುದಲ್ಲ, ಅದರ ಜೊತೆಗೆ ತಾನು ಪ್ರತಿನಿಧಿಸುವ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು ಎಂಬ ಸಂಕಲ್ಪ ಎಲ್.ಟಿ. ಅವರಲ್ಲಿತ್ತು.

1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುವ ಮೂಲಕ ಶಾಸಕರಾಗಿ ಎಲ್.ಟಿ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1983ರಲ್ಲಿ ಕರ್ನಾಟಕ ಕ್ರಾಂತಿರಂಗದ ಅಭ್ಯರ್ಥಿ ಕೆ.ಜಿ. ಶಿವಪ್ಪ ಅವರನ್ನು ಸೋಲಿಸಿ ಪುನರಾಯ್ಕೆಯಾಗಿದ್ದರು.

1999ರಲ್ಲಿ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಗೋಡು ವಿರುದ್ಧ ಎಲ್.ಟಿ. ಸೋಲು ಅನುಭವಿಸಿದ್ದರು. 2005ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಲೂ ಎಲ್.ಟಿ. ಸೋಲು ಅನುಭವಿಸಬೇಕಾಯಿತು.

ಆದಾಗ್ಯೂ ರಾಜಕಾರಣದಲ್ಲಿ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ ಗುಣ ಎಲ್.ಟಿ. ಅವರದ್ದಾಗಿತ್ತು. ದೀರ್ಘಕಾಲ ರಾಜಕಾರಣದಲ್ಲಿದ್ದರೂ ಯಾವುದೇ ‘ಕಳಂಕ’ ಎದುರಿಸದೆ ಕೈ, ಬಾಯಿ ಸ್ವಚ್ಛವಿರುವ ರಾಜಕಾರಣಿ ಎಂದೇ ಹೆಸರು ಪಡೆದಿದ್ದರು.

ರಾಜಕೀಯ ಹಾಗೂ ಸಂಘ–ಸಂಸ್ಥೆಗಳ ಕ್ಷೇತ್ರದ ಬಿಡುವಿಲ್ಲದ ಕೆಲಸದ ನಡುವೆಯೂ ಎಲ್.ಟಿ. ತಮ್ಮ ಧಾರ್ಮಿಕತೆಯನ್ನು ಬಿಟ್ಟಿರಲಿಲ್ಲ. ಶಾಸಕರಾಗಿದ್ದಾಗಲೂ ಏಕಾದಶಿ ವ್ರತವನ್ನು ಆಚರಿಸುತ್ತಿದ್ದ ಅವರು ಅಂದು ಯಾರೊಂದಿಗೂ ಮಾತನಾಡದೇ ಮೌನವಾಗಿರುತ್ತಿದ್ದರು. ಬೆಂಗಳೂರಿನಲ್ಲೇ ಇರುವ ಸಂದರ್ಭ ಬಂದರೆ ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಸ್ವತಃ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು ಎಂಬುದನ್ನು ಅವರ ಸಮೀಪವರ್ತಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಸಾಗರ ಕಾಂಗ್ರೆಸ್‌ನ ಶಕ್ತಿ ಕೇಂದ್ರವಾಗಿರುವ ಗಾಂಧಿ ಮಂದಿರ ಕಟ್ಟಡ ನಿರ್ಮಿಸುವಲ್ಲಿ 50ರ ದಶಕದಲ್ಲಿ ಎಲ್.ಟಿ. ಪ್ರಮುಖ ಪಾತ್ರ ವಹಿಸಿದ್ದಾರೆ. 1964ರಲ್ಲಿ ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ನೆರವಾಗುವ ದೃಷ್ಟಿಯಿಂದ ಆರಂಭವಾದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಮೂಲ ಕಟ್ಟಡ ನಿರ್ಮಾಣವಾಗುವ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ವ್ಯಕ್ತಿ ಎಲ್.ಟಿ.

ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ ಮಠದ ಮೂಲ ಕಟ್ಟಡ ನಿರ್ಮಾಣವಾಗುವಲ್ಲೂ ಎಲ್.ಟಿ. ಅವರ ಕೊಡುಗೆ ಗಣನೀಯವಾಗಿದೆ. 1974ರಲ್ಲಿ ಕ್ಯಾಂಪ್ಕೋ ಸಂಸ್ಥೆ ಆರಂಭವಾಗುವಲ್ಲೂ
ಎಲ್.ಟಿ. ಅವರ ದೂರದೃಷ್ಟಿ ಕೆಲಸ ಮಾಡಿದೆ.

ಅಡಿಕೆ ಬೆಳೆಗಾರರ ಹಿತದ ಕುರಿತು ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಿದ್ದ ಎಲ್.ಟಿ. ಅಡಿಕೆ, ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘ, ತೋಟಗಾರ್ಸ್ ಸಂಸ್ಥೆ, ಮ್ಯಾಮ್ಕೋಸ್ ಹೀಗೆ ಅಡಿಕೆಯನ್ನೇ ಪ್ರಧಾನವಾಗಿಟ್ಟುಕೊಂಡು ವಹಿವಾಟು ನಡೆಸುವ ಸಂಸ್ಥೆಗಳ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

2002ನೇ ಸಾಲಿನಲ್ಲಿ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ತೀರ್ಪು
ಕೆಲವು ರಾಜ್ಯಗಳ ಹೈಕೋರ್ಟ್‌ನಿಂದ ಬಂದಾಗ ಅದರ ವಿರುದ್ಧ ಸಹಕಾರ ಸಂಘಟನೆಗಳನ್ನು ಒಗ್ಗೂಡಿಸಿ
ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲು ಕಾರಣರಾದವರ ಪೈಕಿ ಎಲ್.ಟಿ. ಮುಂಚೂಣಿಯಲ್ಲಿದ್ದರು.

ತಾವೇ ಕಟ್ಟಿದ ಸಂಸ್ಥೆಗಳು ಅಡ್ಡ ಹಾದಿ ಹಿಡಿದು ಅವನತಿಯತ್ತ ಸಾಗಿದಾಗ ತೀವ್ರ ನೊಂದುಕೊಂಡು ಮತ್ತೆ ಅವುಗಳ ಪುನಶ್ಚೇತನಕ್ಕೆ ದಾರಿ ಹುಡುಕುವ ಮನೋಭಾವ ಎಲ್.ಟಿ. ಅವರಲ್ಲಿತ್ತು. ಹಾಗೆಂದು ಇದೇ ಸಂದರ್ಭವನ್ನು ಬಳಸಿಕೊಂಡು ಮತ್ತೆ ಆ ಸಂಸ್ಥೆಯಲ್ಲಿ ಅಧಿಕಾರಕ್ಕೆ ಏರುವ ಹವಣಿಕೆಯನ್ನು ಯಾವತ್ತೂ ತೋರಲಿಲ್ಲ.

ಭೂ ಸುಧಾರಣಾ ಕಾಯ್ದೆ ಜಾರಿಯಾದಾಗ ತಾವು ಸ್ವತಃ ಮೇಲ್ವರ್ಗಕ್ಕೆ ಸೇರಿದವರಾಗಿದ್ದರೂ ಭೂ ಸುಧಾರಣಾ ಮಂಡಳಿಯ ಸದಸ್ಯರಾಗಿ ‘ಜಾತಿ ಪಕ್ಷಪಾತ’ ಮಾಡದೇ ಅರ್ಹ ಗೇಣಿದಾರರಿಗೆ ಭೂಮಿಯ ಹಕ್ಕು ದೊರಕುವಂತೆ ಮಾಡಿದ್ದು ಎಲ್.ಟಿ.
ಅವರ ಹೆಗ್ಗಳಿಕೆಯಾಗಿದೆ.

ತಮ್ಮ ಬದುಕಿನ ಕೊನೆಯವರೆಗೂ ಗ್ರಂಥಗಳನ್ನು ಓದುವ ಹವ್ಯಾಸ
ಹೊಂದಿದ್ದ ಎಲ್.ಟಿ. ಅವರ ಮನೆಯಲ್ಲಿ ದೊಡ್ಡ ಗ್ರಂಥಾಲಯವೇ ಇದೆ. ಲೌಕಿಕ ಮತ್ತು ಅಲೌಕಿಕದ ನಡುವೆ ಸಮನ್ವಯತೆ ಸಾಧಿಸುತ್ತ ರಾಜಕಾರಣದಲ್ಲಿ
ಮೌಲ್ಯಗಳನ್ನು ಉಳಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟವರು
ಎಲ್.ಟಿ. ಅವರ ನಿರ್ಗಮನದೊಂದಿಗೆ ಮಲೆನಾಡು ಭಾಗದ ಸಜ್ಜನಿಕೆಯ ರಾಜಕಾರಣದ ಪ್ರಮುಖ
ಕೊಂಡಿಯೊಂದು ಕಳಚಿದಂತಾಗಿದೆ.

.............

ಸರಳತೆ, ಸಜ್ಜನಿಕೆಯ ಮನೋಭಾವದ ಎಲ್.ಟಿ. ತಿಮ್ಮಪ್ಪ ಹೆಗಡೆ ಅತ್ಯಂತ ಪ್ರಭಾವಿ ವ್ಯಕ್ತಿತ್ವ ಹೊಂದಿದ್ದರು. ರಾಜಕಾರಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಅವರು ನೀಡಿರುವ ಕೊಡುಗೆಯನ್ನು ಮರೆಯುವಂತಿಲ್ಲ.

– ಕಾಗೋಡು ತಿಮ್ಮಪ್ಪ, ಮಾಜಿ ಸಚಿವರು

...............

ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬುದಕ್ಕೆ ಎಲ್.ಟಿ. ಅವರ ಜೀವನ ಮಾದರಿಯಾಗಿದೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅವರ ಕಾರ್ಯವೈಖರಿ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದೆ.

–ಎಚ್. ಹಾಲಪ್ಪ ಹರತಾಳು, ಶಾಸಕರು, ಸಾಗರ

ಮಲೆನಾಡು ಪ್ರದೇಶದ ಜನಮಾನಸದಲ್ಲಿ ಸದಾ ಉಳಿಯುವ ಕೆಲವೇ ರಾಜಕಾರಣಿಗಳ ಪೈಕಿ ಎಲ್.ಟಿ. ಕೂಡ ಒಬ್ಬರಾಗಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅವರು ಕೊಟ್ಟಿರುವ ಒತ್ತನ್ನು ಮರೆಯುವಂತಿಲ್ಲ.

–ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕರು, ಸಾಗರ

ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕರಾಗಿ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸದಾ ಶ್ರಮಿಸಿದ ಮೇರು ವ್ಯಕ್ತಿತ್ವ ಎಲ್.ಟಿ. ಅವರದ್ದು. ಕಾಂಗ್ರೆಸ್ ಪಕ್ಷದ ಸಂಘಟನೆಗೂ ಅವರು ನೀಡಿರುವ ಕೊಡುಗೆ ಅಪಾರ.

–ಬಿ.ಆರ್. ಜಯಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT