ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತಿರಸ್ಕರಿಸಿದ ಪಟ್ಟಣದ ಮತದಾರರು

ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದು ಬೀಗಿದ್ದ ಬಿಜೆಪಿಗೆ ಸೋಲು
Last Updated 1 ಮೇ 2021, 7:33 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ಆಡಳಿತ ಬಿಜೆಪಿ ಕೈ ತಪ್ಪಿರುವುದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರಿ ಚರ್ಚೆಗೆ ಆಸ್ಪದ ನೀಡಿದೆ. ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿನ ಉತ್ಸಾಹದಲ್ಲಿದ್ದ ಬಿಜೆಪಿಗೆ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ನಿರಾಸೆ ಮೂಡಿಸಿದೆ.

13 ವಾರ್ಡ್‌ಗಳಿಗೂ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ಕೇವಲ 6 ಸ್ಥಾನ ಪಡೆದಿದೆ. ಕಾಂಗ್ರೆಸ್ ಗೆದ್ದ ವಾರ್ಡ್‌ಗಳಲ್ಲಿ ಬಿಜೆಪಿ ಹೆಚ್ಚಿನ ಮತಗಳ ಅಂತರದಿಂದ ಪರಾಭವಗೊಂಡಿರುವುದು ಬಿಜೆಪಿ ಯನ್ನು ಜನರು ತಿರಸ್ಕರಿಸುತ್ತಿದ್ದಾರೆ ಎಂಬ ಸೂಚನೆ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ.

ವಾರ್ಡ್ ಮೀಸಲಾತಿ ನಿಗದಿ ಕುರಿತು ನ್ಯಾಯಾಲಯದಲ್ಲಿ ಆಕ್ಷೇಪಣೆ, ದಾವೆ ದಾಖಲಾದ ಕಾರಣ ಚುನಾವಣೆಯನ್ನು ಸುಮಾರು 3 ವರ್ಷಗಳ ಕಾಲ ಮುಂದೂಡಲಾಗಿತ್ತು. ಚುನಾವಣೆ ಆರಂಭಕ್ಕೂ ಮುನ್ನ ರಾಜ್ಯ ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ನಡುವೆ ಗೊಂದಲ ಸೃಷ್ಟಿಯಾಗಿದ್ದರೂ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ.

ಚುನಾವಣೆಯನ್ನು ಪ್ರತಿಷ್ಠೆ ಯಾಗಿಸಿದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಅವರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಪರವಾಗಿ ಕಿಮ್ಮನೆ ರತ್ನಾಕರ, ಆರ್.ಎಂ. ಮಂಜುನಾಥಗೌಡ ಜಂಟಿ ಯಾಗಿ ಮನೆ ಮನೆ ಪ್ರಚಾರ ನಡೆಸಿ ಚುನಾವಣಾ ಕಾವು ಹೆಚ್ಚುವಂತೆ ಮಾಡಿದ್ದರು.

‘ಬಿಜೆಪಿಯ ದುರಾಡಳಿತಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಶಾಸಕರ ಅಧಿಕಾರ ದುರುಪಯೋಗವನ್ನು ಜನರು ಮನಗಂಡಿದ್ದಾರೆ. ನಾನು ಶಾಸಕ, ಸಚಿವನಾಗಿ ಮಾಡಿದ ಕೆಲಸಗಳನ್ನು ಗಮನಿಸಿ ಕಾಂಗ್ರೆಸ್‌ಗೆ ಮತ
ನೀಡುವ ಮೂಲಕ ಬೆಂಬಲಿಸಿದ್ದಾರೆ’ ಎಂದು ಕಿಮ್ಮನೆ ರತ್ನಾಕರ ಅವರು ತಿಳಿಸಿದ್ದಾರೆ.

‘ಫಲಿತಾಂಶ ಅಚ್ಚರಿ ಮೂಡಿಸಿದೆ. ಮತದಾರರ ತೀರ್ಪನ್ನು ಗೌರವಿಸುತ್ತೇನೆ. ಪಟ್ಟಣದಲ್ಲಿ ಉತ್ತಮ ಕೆಲಸವನ್ನು ಮಾಡಲಾಗಿದೆ. ಬಿಜೆಪಿ ಹೆಚ್ಚು ಮತಗಳಿಸಿದೆ. ಸ್ಥಾನಗಳು ಬಂದಿಲ್ಲ. ಕೊರೊನಾ ಕಾರಣ ಬಹಳಷ್ಟು ಮತದಾರರು ಮತ ಚಲಾಯಿಸಲು ಸಾಧ್ಯವಾಗಿಲ್ಲ’ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

‘ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು ಮತದಾರರ ವಿಶ್ವಾಸ ಪಡೆಯಲು ಸಾಧ್ಯವಾಯಿತು. ಬಿಜೆಪಿಯ 23 ವರ್ಷದ ದುರಾಡಳಿತವನ್ನು ಪಟ್ಟಣದ ಜನರು ಮನಗಂಡಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಆರ್.ಎಂ.ಮಂಜುನಾಥಗೌಡ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT