ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅರ್ಧ ಹೆಲ್ಮೆಟ್‌ಗೆ ಪೊಲೀಸರಿಂದ ಅರ್ಧಚಂದ್ರ!

ದಿಢೀರ್ ಕಾರ್ಯಾಚರಣೆ: ರಾಶಿ ರಾಶಿ ಹೆಲ್ಮೆಟ್ ಸಂಗ್ರಹ, ಸವಾರರ ಆಕ್ರೋಶ
Published 25 ಜುಲೈ 2023, 13:40 IST
Last Updated 25 ಜುಲೈ 2023, 13:40 IST
ಅಕ್ಷರ ಗಾತ್ರ

ಪೊಲೀಸರ ಕಾರ್ಯಾಚರಣೆ: 741 ಅರ್ಧ ಹೆಲ್ಮೆಟ್‌ಗಳು

ಶಿವಮೊಗ್ಗ: ವಾಹನ ಸವಾರರೇ ಎಚ್ಚರ. ಇನ್ನು ಸ್ಕೂಟರ್, ಬೈಕ್ ಚಲಾಯಿಸುವಾಗ ತಲೆಯ ಅರ್ಧ ಭಾಗ ಮುಚ್ಚುವ ಹೆಲ್ಮೆಟ್ ಧರಿಸುವಂತಿಲ್ಲ. ಹೆಲ್ಮೆಟ್ ಧರಿಸುವ ನಿಯಮಾವಳಿ ಬಿಗಿಗೊಳಿಸಿರುವ ಸಂಚಾರ ಪೊಲೀಸರು, ಮಂಗಳವಾರದಿಂದ ಅರ್ಧ ಹೆಲ್ಮೆಟ್ ಧರಿಸುವುದರ ವಿರುದ್ಧ ಕ್ರಮ ಆರಂಭಿಸಿದರು.

ಅರ್ಧ ಹೆಲ್ಮೆಟ್ ಧರಿಸಿದ್ದ ಸವಾರರನ್ನು ತಡೆದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅರ್ಧ ಹೆಲ್ಮೆಟ್ ಧರಿಸುವಂತಿಲ್ಲ. ಒಂದು ವೇಳೆ ಧರಿಸಿದಲ್ಲಿ ದಂಡ ಬೀಳುವುದು ಖಚಿತ ಎಂದು ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಅವರಿಂದ ಅರ್ಧ ಹೆಲ್ಮೆಟ್ ಕಿತ್ತುಕೊಂಡು ಮುಂದೆ ಪೂರ್ಣ ಪ್ರಮಾಣದ ಹೆಲ್ಮೆಟ್ ಹಾಕಿಕೊಂಡು ಬರುವಂತೆ ಸೂಚಿಸಿ ಬೀಳ್ಕೊಟ್ಟರು.

ಕಾರ್ಯಾಚರಣೆಯ ಪರಿಣಾಮವಾಗಿ ಮಧ್ಯಾಹ್ನದ ವೇಳೆಗೆ ರಾಶಿ ರಾಶಿ ಅರ್ಧ ಹೆಲ್ಮೆಟ್‌ಗಳನ್ನು ಗುಡ್ಡೆ ಹಾಕಲಾಗಿತ್ತು. ನಂತರ ಮಿನಿ ಲಾರಿ ತಂದು ಅದರಲ್ಲಿ ಹಾಕಿ ಕಳುಹಿಸಿದರು. ಅರ್ಧ ಹೆಲ್ಮೆಟ್‌ ವಿರುದ್ಧ ಬಸ್ ನಿಲ್ದಾಣ ವೃತ್ತ, ಶಿವಪ್ಪನಾಯಕ ವೃತ್ತ ಮೊದಲಾದ ಕಡೆ ಕಾರ್ಯಾಚರಣೆ ನಡೆಸಲಾಯಿತು.

ಬಣ್ಣ ಬಣ್ಣದ, ವಿವಿಧ ವಿನ್ಯಾಸದ ದುಬಾರಿ ದರ ಕೊಟ್ಟು ಅರ್ಧ ಹೆಲ್ಮೆಟ್ ಖರೀದಿಸಿದ್ದ ವಾಹನ ಸವಾರರು, ಪೊಲೀಸರ ಈ ದಿಢೀರ್ ಕಾರ್ಯಾಚರಣೆಯ ಫಲವಾಗಿ ಅವುಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದ್ದರಿಂದ ಆಕ್ರೋಶಕ್ಕೆ ಒಳಗಾದರು.

ಕೆಲವರು ಸಂಚಾರ ಪೊಲೀಸರಿಗೆ ಶಾಪ ಹಾಕಿದ ಘಟನೆಯೂ ನಡೆಯಿತು. ‘ಮಳೆ ಬರುತ್ತಿದೆ. ಹೀಗೆ ಹೆಲ್ಮೆಟ್ ಕಿತ್ತುಕೊಂಡರೆ ಹೇಗೆ? ಕೊನೇ ಪಕ್ಷ ಖರೀದಿಸುತ್ತೇವೆ ಎಂದರೂ ಕೂಡ ಬಿಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರ್ಧ ಹೆಲ್ಮೆಟ್ ಮಾರುವ ಅಂಗಡಿಗಳನ್ನು ಮೊದಲು ಬಂದ್ ಮಾಡಿ ಮತ್ತು ಸಾರ್ವಜನಿಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿ ಮೊದಲು ಅರಿವು ಮೂಡಿಸಿ ಬಳಿಕ ಈ ರೀತಿಯ ಕ್ರಮ ಕೈಗೊಳ್ಳಿ. ಕಾನೂನಿಗೆ ನಮ್ಮ ವಿರೋಧವಿಲ್ಲ. ಆದರೆ ಮನಸ್ಸಿಗೆ ಬಂದಾಗ ಸಂಚಾರಿ ಪೊಲೀಸರು ಅನುಷ್ಠಾನ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT