ಸೋಮವಾರ, ಆಗಸ್ಟ್ 15, 2022
22 °C

PV Web Exclusive | ತುಂಗಾ ಪಾನ... ಜೋಪಾನ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ತುಂಗಾ ಪಾನ, ಗಂಗಾ ಸ್ನಾನ’ ಎನ್ನುವುದು ಪುರಾತನ ನಾಣ್ನುಡಿ. ಜನಜನಿತವಾದ ಈ ಮಾತಿನಂತೆ ಇಂದು ಉತ್ತರ ಭಾರತದ ಗಂಗಾ ನದಿ ಸ್ನಾನಕ್ಕೆ, ದಕ್ಷಿಣ ಭಾರತದ ತುಂಗಾ ನದಿ ಕುಡಿಯಲು ಯೋಗ್ಯವಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಚುನಾವಣಾ ಪ್ರಚಾರದ ವೇಳೆ ಶಿವಮೊಗ್ಗಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತುಂಗಾ ನದಿಯ ಪ್ರಸ್ತಾಪ ಮಾಡಿದ್ದರು.‘ಗಂಗಾ ಸ್ನಾನ, ತುಂಗಾ ಪಾನ ಎಂಬ ನಾಣ್ನುಡಿ ಇದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ತುಂಗಾ ನದಿಯ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿತ್ತು. ಕಾಂಗ್ರೆಸ್ ಅವಧಿಯಲ್ಲಿ ಅದು ನನೆಗುದಿಗೆ ಬಿದ್ದಿದೆ’ ಎಂದು ಟೀಕಿಸಿದ್ದರು.

ರಾಜಕೀಯ ಆರೋಪ–ಪ್ರತ್ಯಾರೋಪ ಏನೇ ಇರಲಿ, ತೀರ್ಥಹಳ್ಳಿ ರಸ್ತೆಯ ಹರಕೆರೆಯಿಂದ ಹೊನ್ನಾಳಿ ರಸ್ತೆಯ ಗೋಂದಿ ಚಟ್ನಹಳ್ಳಿವರೆಗಿನ ನಗರದ ವ್ಯಾಪ್ತಿಯ ನದಿಪಾತ್ರದಲ್ಲಿ ಒಂದು ಸುತ್ತು ಹಾಕಿದರೆ ಸಾಕು ನದಿಯ ನೀರು ಕುಡಿಯಲು ಇರಲಿ, ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂಬ ಸತ್ಯ ಅರಿವಿಗೆ ಬರುತ್ತದೆ.

ನಗರ ಪಾಲಿಕೆ ವ್ಯಾಪ್ತಿಯ ಅರ್ಧಕ್ಕಿಂತ ಹೆಚ್ಚು ಬಡಾವಣೆಗಳ ಶೌಚದ ಕಲ್ಮಶವೂ ಸೇರಿ ಎಲ್ಲ ಮೋರಿ, ಚರಂಡಿ, ಯುಜಿಡಿ, ರಾಜಕಾಲುವೆಗಳ ನೀರು ನೇರವಾಗಿ ಪವಿತ್ರ ನದಿಯ ಒಡಲು ಸೇರುತ್ತದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಕಾರಣ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಬೇಸಿಗೆಯಲ್ಲಿ ನದಿ ಬಳಿ ಸುಳಿಯಲೂ ಸಾಧ್ಯವಾಗುವುದಿಲ್ಲ. ಅಷ್ಟೊಂದು ಮಲಿನವಾಗಿದೆ ತುಂಗೆಯ ಒಡಲು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ ನದಿ ಹುಟ್ಟುತ್ತದೆ. ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುವ ತುಂಗಾ ನದಿ ಶಿವಮೊಗ್ಗ ನಾಗರಿಕತೆಯ ತೊಟ್ಟಿಲೂ ಹೌದು. ಮಲೆನಾಡಿನ ಮಡಿಲಲ್ಲೇ ಹುಟ್ಟಿ ಹರಿಯುವ ತುಂಗೆಗೆ ಗಾಜನೂರು ಬಳಿ ಜಲಾಶಯ ನಿರ್ಮಿಸಲಾಗಿದೆ. ಶಿವಮೊಗ್ಗದ ಬಳಿ ಬರುವವರೆಗೂ ತುಂಗೆ ಪರಿಶುದ್ಧವಾಗಿಯೇ ಹರಿಯುತ್ತಾಳೆ. ಅಲ್ಲಿಂದ 147 ಕಿ.ಮೀ ದೂರ ಕ್ರಮಿಸಿ, ಶಿವಮೊಗ್ಗ ತಾಲ್ಲೂಕು ಕೂಡಲಿ ಬಳಿ ಭದ್ರಾ ನದಿಯೊಂದಿಗೆ ಸಂಗಮವಾಗುತ್ತದೆ. ಇಲ್ಲಿಂದ ಮುಂದೆ ತುಂಗಭದ್ರೆಯರು ಮಿಳಿತವಾಗಿ ಹೊಸಪೇಟೆಯತ್ತ ಹರಿಯುತ್ತಾರೆ.

ಗಾಜನೂರಿನಿಂದ ಶಿವಮೊಗ್ಗ ನಗರಕ್ಕೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಗಾಜನೂರಿನ ಜಲಾಶಯದಿಂದ ನೇರವಾಗಿ ಸರಬರಾಜಾಗುವ ಕಾರಣ ಶುದ್ಧ ನೀರು ಎಲ್ಲ ಮನೆಗಳನ್ನು ತಲುಪುತ್ತದೆ. ಆದರೆ, ಶಿವಮೊಗ್ಗದಿಂದ ಮುಂದೆ ಇರುವ ನದಿಪಾತ್ರದ ಗ್ರಾಮಗಳು, ನಗರ, ಪಟ್ಟಣಗಳು ಬಳಸುವ ನೀರು ಮಾತ್ರ ಅಶುದ್ಧ. ನಗರದ ಸಂಪೂರ್ಣ ತ್ಯಾಜ್ಯ, ಚರಂಡಿ ನೀರನ್ನು ನೇರವಾಗಿ ರಾಮಣ್ಣ ಶೆಟ್ಟಿ ಪಾರ್ಕ್‌ನ ಹಿಂಭಾಗ, ಗುಂಡಪ್ಪ ಶೆಡ್‌ ಬಳಿ ನದಿಗೆ ಬಿಡಲಾಗುತ್ತಿದೆ. ಇನ್ನು ತೀರ್ಥಹಳ್ಳಿ ರಸ್ತೆಯ ಆಸ್ಪತ್ರೆಗಳ ರಾಸಾಯನಿಕಯುಕ್ತ, ಕಲುಷಿತ ನೀರನ್ನೂ ಪೈಪ್‌ ಮೂಲಕ ನದಿಗೆ ಬಿಡಲಾಗುತ್ತಿದೆ. ಇದರ ಪರಿಣಾಮ ನದಿ ನೀರು ಮಲಿನವಾಗಿದೆ. ಜಲಚರಗಳು ಸಾವು ಕಾಣುತ್ತಿವೆ.

ಹಲವು ಗ್ರಾಮಗಳ ಜನರು ಈ ನದಿ ನೀರನ್ನು ದಿನನಿತ್ಯದ ಕಾರ್ಯಗಳಿಗೆ ಬಳಸುತ್ತಾರೆ. ಇದರಿಂದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಬೇಸಿಗೆ ಸಮಯದಲ್ಲಿ ನದಿಯಲ್ಲಿ ನೀರು ಬತ್ತಿರುತ್ತದೆ. ಅಲ್ಪಸ್ವಲ್ಪ ಇರುವ ನೀರು ಹರಿಯುವುದಿಲ್ಲ. ಈ ನೀರಿನಲ್ಲೇ ನದಿ ದಡದಲ್ಲಿರುವ ದೇವಸ್ಥಾನಗಳ ದೇವರ ಪೂಜೆಗೆ ನೀರು ತೆಗೆದುಕೊಂಡು ಹೋಗುತ್ತಾರೆ.

ಕಲ್ಮಶ ನೀರು ಸಂಸ್ಕರಣ ಘಟಕದ ಕೊರತೆ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯುಜಿಡಿ ಸೇರಿ ನಗರದ ಕಲ್ಮಶ ನೀರನ್ನು ನೇರವಾಗಿ ನದಿಗೆ ಹರಿಸುವಂತಿಲ್ಲ. ಸಂಸ್ಕರಣ ಘಟಕದದಲ್ಲಿ ಸಂಸ್ಕರಿಸಿದ ನಂತರ ನಿಗದಿತ ಪ್ರಮಾಣದ ಶುದ್ಧತೆ ಖಾತ್ರಿ ಮಾಡಿಕೊಂಡೇ ನದಿಗೆ ಹರಿಸಬೇಕು. ಹೊನ್ನಾಳಿ ರಸ್ತೆಯ ತ್ಯಾವರೆಚಟ್ನಹಳ್ಳಿ ಬಳಿ ಇರುವ ₹ 115 ಕೋಟಿ ವೆಚ್ಚದ ಘಟಕವು ಹೊಸ ಬಡಾವಣೆಗಳ ಶೇ 50ರಷ್ಟು ಕಲ್ಮಶ ನೀರನ್ನು ಶುದ್ಧೀಕರಿಸುತ್ತಿದೆ. ಗುರುಪುರ, ಪುರಲೆಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಘಟಕ ಇನ್ನೂ ಪೂರ್ಣಗೊಂಡಿಲ್ಲ.

ಕಲ್ಮಶಕ್ಕೆ ನದಿಯ ಪ್ರತೀಕಾರ?: ಸವಾಯಿಪಾಳ್ಯ, ಕುರುಬರ ಪಾಳ್ಯ, ಕುಂಬಾರಗುಂಡಿ, ಸೀಗೆಹಟ್ಟಿ, ಮಂಡಕ್ಕಿ ಬಟ್ಟಿ, ಮದಾರಿ ಪಾಳ್ಯ, ಬಿ.ಬಿ. ರಸ್ತೆ, ಮಲ್ಲೇಶ್ವರ ನಗರ, ಗುಂಡಪ್ಪಶೆಡ್, ಪಂಚವಟಿ ಕಾಲೊನಿ, ಎಂ.ಕೆ.ಕೆ. ರಸ್ತೆ, ಗಾಂಧಿಬಜಾರ್, ಪೆನ್ಷನ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ, ಕೋಟೆ ರಸ್ತೆಯ ಯುಜಿಡಿ ತ್ಯಾಜ್ಯಗಳು ನೇರವಾಗಿ ನದಿಯ ಒಡಲು ಸೇರುತ್ತವೆ. ಈ ತ್ಯಾಜ್ಯ ನದಿ ಒಡಲು ಸೇರುವ ಜಾಗದಿಂದಲೇ ನದಿ ನೀರು ಹಿಮ್ಮುಖವಾಗಿ ಹರಿದು ಬಡಾವಣೆಗಳಿಗೆ ನುಗ್ಗುತ್ತದೆ. ಸಾಮಾನ್ಯ ಮಳೆಗಾಲದ ದಿನಗಳಲ್ಲಿ ಈ ಕಾಲುವೆಗಳಿಗಿಂತ ಕೆಳಮಟ್ಟದಲ್ಲೇ ನದಿ ಹರಿಯುತ್ತದೆ. ಹಾಗಾಗಿ, ಕಲ್ಮಶವೆಲ್ಲಾ ನದಿ ಒಡಲು ಸೇರುತ್ತದೆ. ಗಾಜನೂರು ಜಲಾಶಯ ಭರ್ತಿಯಾದ ನಂತರ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಎತ್ತರದಲ್ಲಿ ಹರಿದು ಈ ಕಾಲುವೆಗಳ ಮೂಲಕವೇ ಜನ ವಸತಿ ಪ್ರದೇಶಕ್ಕೆ ನುಗ್ಗುತ್ತದೆ. ಇದು ಒಂದು ರೀತಿ ತನ್ನೊಡಲಿಗೆ ಹಾಕುವ ಕಲ್ಮಶದ ವಿರುದ್ಧ ನದಿ ಪ್ರತೀಕಾರ ತೆಗೆದುಕೊಂಡಂತೆ ಭಾಸವಾಗುತ್ತದೆ.

ಚಿಕ್ಕದಾಗಿರುವ ನದಿಪಾತ್ರ: ನದಿಯ ಉತ್ತರ ತಟದಲ್ಲಿ ತಡೆಗೋಡೆ, ಪಾದಚಾರಿ ಮಾರ್ಗ ನಿರ್ಮಿಸುವಾಗ ನದಿಯ ಜಾಗವನ್ನೇ ಬಳಕೆ ಮಾಡಲಾಗಿದೆ. 2.6 ಕಿ.ಮೀ. ದೂರದವರೆಗೂ ಸುಮಾರು 25ರಿಂದ 30 ಅಡಿ ನದಿ ಜಾಗ ಒತ್ತುವರಿ ಮಾಡಲಾಗಿದೆ. ಇದರಿಂದ ನಗರದ ಉದ್ದಕ್ಕೂ ಇರುವ ನದಿಪಾತ್ರ ಚಿಕ್ಕದಾಗಿದೆ.

ಕಸದ ತೊಟ್ಟಿಯಾದ ಪಾದಚಾರಿ ಮಾರ್ಗ: ನದಿ ದಂಡೆಯ ಉದ್ದಕ್ಕೂ ತಡೆಗೋಡೆ ನಿರ್ಮಿಸಿದ ನಂತರ ಉಳಿದ ವಿಶಾಲವಾದ ಜಾಗದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಈ ಪಾದಚಾರಿ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ನೂರಾರು ಜನರು ವಾಯುವಿಹಾರ ಮಾಡುತ್ತಾರೆ. ಆರಂಭದಲ್ಲಿ ಉತ್ತಮ ವಾತಾವರಣ ಇದ್ದ ಈ ಮಾರ್ಗದಲ್ಲಿ ಈಚೆಗೆ ರಾಶಿ ರಾಶಿ ಕಸ ತಂದು ಸುರಿಯಲಾಗುತ್ತಿದೆ. ನದಿ ತೀರದ ಬಹುತೇಕ ಮನೆಗಳು ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಹಳೆ ಮನೆ ಕೆಡವಿ ಹೊಸ ಮನೆ ಕಟ್ಟುವವರು ಆ ಮನೆಯ ಎಲ್ಲ ತ್ಯಾಜ್ಯಗಳನ್ನು ತಂದು ನದಿ ತೀರದಲ್ಲೇ ಸುರಿಯುತ್ತಿದ್ದಾರೆ.

ಯುಜಿಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ತುಂಗಾ ನದಿಗೆ ಬಿಡುವ ಕಲ್ಮಶಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರತಿ ಸಭೆಯಲ್ಲೂ ಪ್ರಸ್ತಾಪಿಸುತ್ತಾರೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ತುಂಗಾ ನದಿ ತೀರಕ್ಕೆ ಗುಜರಾತ್ ಸಬರಮತಿ ಮಾದರಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಆದರೆ, ಐದು ವರ್ಷಗಳಾದರೂ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು