ಬುಧವಾರ, ಜನವರಿ 27, 2021
16 °C
ರಾಜನಳ್ಳಿ ಮಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕಳವಳ

ಬಲಾಢ್ಯರ ಮಧ್ಯೆ ನಲುಗಿದ ವಾಲ್ಮೀಕಿ ಸಮುದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬಲಾಢ್ಯ ಜಾತಿಗಳ ಮಧ್ಯೆ ವಾಲ್ಮೀಕಿ ಸಮುದಾಯದಂತಹ ಸಣ್ಣ, ದುರ್ಬಲ ಜಾತಿಗಳು ನಲುಗಿ ಹೋಗುತ್ತಿವೆ ಎಂದು ರಾಜನಳ್ಳಿ ಮಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಸೋಮವಾರ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಆಯೋಜಿಸಿದ್ದ ಜನಜಾಗೃತಿ ಸಭೆ, ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಸುಮಾರು 10 ಕೋಟಿ ವಾಲ್ಮೀಕಿ ಜನರು ಇದ್ದಾರೆ. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಇದೆ. ಮೂಲ ವೃತ್ತಿ ಬೇಟೆಯಾಡುವುದು. ಸ್ವಾತಂತ್ರ್ಯಾ ನಂತರ ಬೇಟೆ ನಿಷೇಧಿಸಲಾಯಿತು. ಈ ನೆಲದ ಕಾನೂನು ಗೌರವಿಸಿ, ಮೂಲ ಕಸುಬು ಬಿಡಲಾಯಿತು. ಅಂತಹ ಸಮುದಾಯ ಇಂದಿಗೂ ಸಂಕಷ್ಟದಲ್ಲಿದೆ ಎಂದರು.

ಶ್ರೇಣಿಕೃತ ಸಮಾಜದಲ್ಲಿ ಜಾತಿ ಸೂಚಕ ಕಸುಬುಗಳು ಈಗಲೂ ಇವೆ. ಆದರೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮುದಾಯಕ್ಕೆ  ಕುಲಕಸುಬು ಎಂಬುದೇ ಇಲ್ಲ. ಸಮಾಜದ ಮುಖ್ಯವಾಹಿನಿಗೆ ಬರಲು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದೇವೆ. ರಾಜ್ಯ,   ಕೇಂದ್ರ ಸರ್ಕಾರಗಳು ತಾರತಮ್ಯ ಮಾಡುತ್ತಿವೆ ಎಂದು ದೂರಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಪ್ರತಿ ವರ್ಷ ₹ 28 ಸಾವಿರ ಕೋಟಿ ನೀಡಲಾಗುತ್ತಿದೆ. ಆದರೆ ಈ ಹಣ ಪರಿಶಿಷ್ಟರನ್ನು ತಲುಪದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಇಚ್ಚಾಶಕ್ತಿಯ ಕೊರತೆ, ದುರ್ಬಲ ಸಂಘಟನೆ ಪರಿಣಾಮ ಸಂವಿಧಾನದ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿಷಾದಿಸಿದರು. 

ವಾಲ್ಮೀಕಿ ಮಹಾ ತಪಸ್ವಿಯಾಗಿದ್ದರು. ಬೇಡರ ಕಣ್ಣಪ್ಪ, ಏಕಲವ್ಯ ನಮ್ಮ ಸಮಾಜದ ಪುರಾಣ ಪ್ರಸಿದ್ಧ ವ್ಯಕ್ತಿಗಳು. ಪಾಳೆಗಾರರಾಗಿ ಮೆರೆದು ನಾಡಿನ ರಕ್ಷಣೆಗಾಗಿ ನಿಂತವರು. ಇಂತಹ ಸಮಾಜದ ಜನರು ಇಂದು ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 7.5 ಮೀಸಲಾತಿ ಹೆಚ್ಚಿಸಬೇಕು. ನಾಗಮೋಹನದಾಸ್ ಆಯೋಗ ನೀಡಿರುವ ವರದಿ ಶೀಘ್ರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ವಾಲ್ಮೀಕಿ ಸೇವಾ ಸಮಿತಿ ರಚಿಸಲಾಯಿತು. ವಿವಿಧ ನಿಗಮ, ಮಂಡಳಿಗಳ ಸದಸ್ಯರನ್ನು ಸನ್ಮಾನಿಸಲಾಯಿತು. ವಾಲ್ಮೀಕಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ವಾಲ್ಮೀಕಿ ಸಮಾಜದ ಮುಖಂಡರಾದ ಎಚ್.ಆರ್.ಹನುಮಂತಪ್ಪ, ಬಿ.ಎಸ್.ನಾಗರಾಜ್, ಲೋಕೇಶ್, ಲಕ್ಷ್ಮಣ್, ಸುರೇಶ್, ವನಜಾಕ್ಷಮ್ಮ, ಶಿವಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು