ಸೋಮವಾರ, ಮೇ 23, 2022
26 °C
ಸೊರಬ: 10ನೇ ವಾರ್ಡ್‌ನಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ

ಮಳೆಗಾಲದಲ್ಲೂ ನೀರಿಗೆ ಹಾಹಾಕಾರ

ರಾಘವೇಂದ್ರ ಟಿ. Updated:

ಅಕ್ಷರ ಗಾತ್ರ : | |

Prajavani

ಸೊರಬ: ತಾಲ್ಲೂಕಿನಲ್ಲಿ ಒಂದು ವಾರದಿಂದ ಮುಂಗಾರು ಚುರುಕುಗೊಂಡಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಪಟ್ಟಣದ 10ನೇ ವಾರ್ಡ್‌ ನಿವಾಸಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಮಾತ್ರ ತಪ್ಪಿಲ್ಲ.

ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮಾರ್ಕೆಟ್ ರಸ್ತೆ, ಜಂಗಿನಕೊಪ್ಪ ಸೇತುವೆ, ಹಳೆ ಪೋಸ್ಟ್ ಆಫೀಸ್, ಮಸೀದಿ ರಸ್ತೆ, ಹೆಣ್ಣು ಮಕ್ಕಳ ಪ್ರೌಢಶಾಲೆ ವ್ಯಾಪ್ತಿಯ ಪ್ರದೇಶಗಳು 10ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತವೆ. ಪಟ್ಟಣ ವ್ಯಾಪ್ತಿಯ 12 ವಾರ್ಡ್‌ಗಳಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದ ವ್ಯಾಪ್ತಿಯು ವಿಸ್ತಾರಗೊಂಡಿದೆ.

ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿರುವುದರಿಂದ ಜನರಲ್ಲಿ ಹೊಸ ನಿರೀಕ್ಷೆ ಮೂಡಿರುವ ಹೊತ್ತಿನಲ್ಲಿ ಮೂಲ ಸೌಕರ್ಯಗಳನ್ನು ಆಡಳಿತ ಈಡೇರಿಸುವಲ್ಲಿ ಎಡುವುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ಮೂರು ತಿಂಗಳ ಹಿಂದಷ್ಟೇ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಪಟ್ಟಣಕ್ಕೆ ಜನಸಂಖ್ಯೆ ಆಧಾರಿತವಾಗಿ ಹಳೇಸೊರಬ, ಕೊಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳು ಸೇರ್ಪಡೆಗೊಂಡಿವೆ. ಪಟ್ಟಣದ ವಿಸ್ತೀರ್ಣ ದೊಡ್ಡದಾಗಿದ್ದು, ಜನರು ಮೂಲ ಅವಶ್ಯಕತೆಗಳಿಗಾಗಿ ಸಮಸ್ಯೆ ಎದುರಿಸುವ ಆತಂಕ ತಪ್ಪಿಲ್ಲ. ಸಂಬಂಧಪಟ್ಟ ಆಡಳಿತ ಕುಡಿಯುವ ನೀರಿಗೆ ಶಾಶ್ವತ ಯೋಜನೆ ರೂಪಿಸಿಲ್ಲ.

ಇದರಿಂದ ಪ್ರತಿ ವರ್ಷ ಒಂದಲ್ಲ ಒಂದು ವಾರ್ಡ್‌ನಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುತೇಕ ವಾರ್ಡ್‌ಗಳಿಗೆ ಚಂದ್ರಗುತ್ತಿ ಸಮೀಪ ಹರಿಯುತ್ತಿರುವ ತಾಲ್ಲೂಕಿನ ಜೀವನದಿ ವರದಾದಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ಮಳೆ ಪ್ರಮಾಣ ಕಡಿಮೆ ಆಗುತ್ತಿರುವ ಕಾರಣ ಕೆಲ ವರ್ಷಗಳಿಂದ ನದಿಯ ಒಡಲು ಮಾರ್ಚ್ ವೇಳೆಗೆ ಬರಿದಾಗುತ್ತಿದೆ. ಹೀಗಾಗಿ, ಬಿರು ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವುದರಿಂದ ಪುರಸಭೆ ಆಡಳಿತ ಕೊಳವೆಬಾವಿ ನೀರನ್ನು ಆಶ್ರಯಿಸಿದೆ.

ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋದರೆ ಅಥವಾ ಮೋಟಾರ್ ಕೆಟ್ಟರೆ ಜನರಿಗೆ ಕುಡಿಯುವ ನೀರು ಪೂರೈಸಲು ಬದಲಿ ವ್ಯವಸ್ಥೆ ಕಲ್ಪಿಸಿಕೊಂಡಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

‘10ನೇ ವಾರ್ಡ್‌ನಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಈ ವಾರ್ಡ್‌ನಲ್ಲಿ ವಾರದಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದ ಮೇಲೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿರುವುದರಿಂದ ಬಟ್ಟೆ ಮತ್ತಿತರ ಸ್ವಚ್ಛತೆಗೂ ನೀರನ್ನು ಬಳಸಲಾಗುತ್ತಿಲ್ಲ. ಕೊಡದ ನೀರನ್ನು ಕುಡಿಯಲು ಕೂಡ ಯೋಚಿಸಿ ಕುಡಿಯಬೇಕಿದೆ’ ಎನ್ನುತ್ತಾರೆ ಖದೀರ್ ಅಹಮದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು