ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಂಕಿ ಪಾರ್ಕ್ ಬೇಕು, ನಮ್ಮೂರ ಬಳಿ ಬೇಡವೇ ಬೇಡ!

Last Updated 13 ನವೆಂಬರ್ 2020, 1:06 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ರೈತರನ್ನು ಕಾಡುತ್ತಿರುವ ಮಂಗಗಳ ಉಪಟಳ ನಿಯಂತ್ರಣಕ್ಕೆ ‘ಮಂಕಿ ಪಾರ್ಕ್‌’ ಪರಿಹಾರ ಎಂದು ಸರ್ಕಾರ, ರೈತರು ಪ್ರತಿಪಾದಿಸುತ್ತಿದ್ದಾರೆ. ಯಾವ ರೈತರು, ಜನಪ್ರತಿನಿಧಿಗಳನ್ನು ಕೇಳಿದರೂ ತಕ್ಷಣ ಆಗಬೇಕು ಎನ್ನುವ ಪ್ರತಿಕ್ರಿಯೆ ಬರುತ್ತದೆ. ಆದರೆ, ‘ಅದು ನಮ್ಮೂರ ಸುತ್ತಮುತ್ತ ಬೇಡವೇ ಬೇಡ’ ಎನ್ನುವುದೇ ಎಲ್ಲರ ನಿಲುವು!

ನಮ್ಮೂರು, ನಮ್ಮ ಪ್ರದೇಶದ ಬಳಿ ಬೇಡ ಎನ್ನುವ ನಿಲುವಿಗೆ ಪ್ರತಿ ಗ್ರಾಮಸ್ಥರು ಅಂಟಿಕೊಂಡ ಪರಿಣಾಮ ಸ್ಥಳ ನಿಗದಿ ಮಾಡಲು ಸಾಧ್ಯವಾಗದೇ ಅರಣ್ಯ ಇಲಾಖೆ, ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತಿವೆ. ಸರ್ಕಾರ ನಿಗದಿ ಮಾಡಿದ ಹಣವೂ ಮಂಕಿ ಪಾರ್ಕ್ ಪ್ರಯೋಗಕ್ಕೆ ಮುನ್ನವೇ ಮರಳಿ ಸರ್ಕಾರದ ಖಜಾನೆ ಸೇರುತ್ತಿದೆ.

ಮಂಗಗಳ ಉಪಟಳದಿಂದ ಪ್ರತಿ ವರ್ಷ ಜಿಲ್ಲೆಯಲ್ಲಿ ಬೆಳೆಗಳು ಹಾಳಾಗುತ್ತಿವೆ. ಮಂಗಗಳು ಶೇ10ರಷ್ಟು ತಿಂದರೆ, ಶೇ 90ರಷ್ಟು ಹಾಳು ಮಾಡುತ್ತವೆ. ಅಡಿಕೆ, ತೆಂಗು, ಬಾಳೆ, ಭತ್ತ, ಕಾಫಿ, ಹಣ್ಣಿನ ಬೆಳೆ, ತರಕಾರಿ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ಹೀಗಾಗಿ ಮಂಗಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಮಲೆನಾಡಿಗರು ಬೀದಿಗಿಳಿದಿದ್ದರು.

ಸಾಮೂಹಿಕ ಅಂತ್ಯಕ್ಕೆ ದೊರಕದ ಜನ ಬೆಂಬಲ

ಮಂಗಗಳ ಉಪಟಳ ಉಲ್ಬಣಗೊಂಡಾಗ ಅವುಗಳ ಸಾಮೂಹಿಕ ಹತ್ಯೆ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಹಿಮಾಚಲಪ್ರದೇಶದಲ್ಲಿ ಮಂಗಗಳ ಉಪಟಳದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ 2016ರಲ್ಲಿ ಸಾಮೂಹಿಕ ಸಂಹಾರಕ್ಕೆ ಅವಕಾಶ ನೀಡಲಾಗಿತ್ತು. ಇಲ್ಲೂ ಅಂತಹ ನಿಯಮ ರೂಪಿಸಬೇಕು ಎಂಬುದು ಹಲವರ ಕೋರಿಕೆ. ಆದರೆ, ಮಂಗಗಳು ಶ್ರೀರಾಮನ ಬಂಟ ಹನುಮಂತನ ಅಪರಾವತಾರ ಎಂಬ ನಂಬಿಕೆ ಸ್ಥಳೀಯರಲ್ಲಿ ಇರುವ ಕಾರಣ ಸಂಹಾರ ಪ್ರಸ್ತಾವಕ್ಕೆ ಜನ ಬೆಂಬಲ ದೊರಕಿರಲಿಲ್ಲ.

ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಎನ್ನುವ ಒತ್ತಾಯವೂ ಕೇಳಿಬಂದಿತ್ತು. ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅಭಿಯಾನ ರೂಪಿಸಿದರೆ ಭವಿಷ್ಯದಲ್ಲಿ ಅವುಗಳ ಸಂತತಿಯೇ ನಾಶವಾಗುತ್ತದೆ. ಹಾಗಾಗಿ, ‘ಮಂಕಿ ಪಾರ್ಕ್‌’ ನಿರ್ಮಾಣವೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿತ್ತು.

ಮಂಗಗಳಿಗೆ ಪ್ರತ್ಯೇಕ ಪ್ರದೇಶ ಗುರುತಿಸಬೇಕು. ಅಲ್ಲಿ ವಿವಿಧ ಜಾತಿಯ ಹಣ್ಣುಹಂಪಲು, ಸಸ್ಯಗಳನ್ನು ಬೆಳೆಸಬೇಕು. ನೀರು, ಆಹಾರ ಒಂದೇ ಕಡೆ ಸಿಕ್ಕರೆ ಅವು ಬೇರೆ ಪ್ರದೇಶಗಳಿಗೆ ವಲಸೆ ಬರುವುದಿಲ್ಲ. ಬೆಳೆ ನಾಶ ಮಾಡುವುದಿಲ್ಲ. ಇಂತಹ ಪ್ರಯೋಗ ಭಾರತದ ಕೆಲವೆಡೆ ಯಶಸ್ವಿಯಾಗಿದೆ. ಹೀಗಾಗಿ ‘ಮಂಕಿ ಪಾರ್ಕ್‌’ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ ಬಜೆಟ್‌ನಲ್ಲಿ ಅದಕ್ಕಾಗಿ ₹ 20 ಕೋಟಿ ಮೀಸಲಿಟ್ಟಿತ್ತು.

ನಿಟ್ಟೂರು–ನಾಗೋಡಿ ಅರಣ್ಯ ವಿವಾದ

ಹೊಸನಗರ ತಾಲ್ಲೂಕು ನಿಟ್ಟೂರು–ನಾಗೋಡಿ ಸರ್ವೆ ನಂಬರ್ 305ರಲ್ಲಿನ 400 ಎಕರೆ ಅರಣ್ಯದಲ್ಲಿ ‘ಮಂಕಿ ಪಾರ್ಕ್’ ಸ್ಥಾಪಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಅಲ್ಲಿನ ಭೂ ಮಾಫಿಯಾ,ಬಗರ್‌ಹುಕುಂ ಸಾಗುವಳಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ತಲಕಳಲೆ ದ್ವೀಪ ಆಯ್ದುಕೊಂಡು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.

ಶರಾವತಿಕಣಿವೆಯತಲಕಳಲೆಜಲಾಶಯದಎರಡು ನಡುಗಡ್ಡೆಗಳಲ್ಲಿ ‘ಮಂಕಿ ಪಾರ್ಕ್’ಸ್ಥಾಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿತ್ತು. ಜೋಗ ಜಲಪಾತ ತಪ್ಪಲಿನ ಕಾರ್ಗಲ್‌ ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿ ಶರಾವತಿ ವಿದ್ಯುದಾಗರಕ್ಕೆ ನೀರು ಪೂರೈಸಲು ಸಮತೋಲಿತ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಒಳಗೆ ಮೂರು ಕಿ.ಮೀ. ಅಂತರದಲ್ಲಿ 10ರಿಂದ 15 ಹೆಕ್ಟೇರ್ ವಿಸ್ತಾರದ ದಟ್ಟ ಕಾನನವಿರುವ ಎರಡು ನಡುಗಡ್ಡೆಗಳಿವೆ. ಸೆರೆಹಿಡಿದ ಮಂಗಗಳನ್ನು ಅಲ್ಲಿಗೆ ಬಿಡಲು ನಿರ್ಧರಿಸಲಾಗಿತ್ತು.

ದ್ವೀಪದಲ್ಲಿ ಪಾರ್ಕ್ ನಿರ್ಮಾಣ ವೆಚ್ಚದಾಯಕ. ಅಲ್ಲಿ ಭಾರಿ ಸಂಖ್ಯೆಯ ಮೊಸಳೆಗಳಿದ್ದು, ಮಂಗಗಳ ಸಂತತಿಯನ್ನೇ ನಾಶ ಮಾಡಬಹುದು ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆಯೂ ಮಂಕಿಪಾರ್ಕ್‌ ಆರಂಭದ ಸಿದ್ಧತೆಗಳು ನಡೆದೇ ಇದ್ದವು.

ಸೆರೆಹಿಡಿದ ಮಂಗಗಳನ್ನು ಮಂಕಿ ಪಾರ್ಕ್‌ಗೆ ಬಿಡುವ ಮೊದಲು ಅವುಗಳಿಗೆಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿತ್ತು. ವನ್ಯಜೀವಿ ವೈದ್ಯರಿಗೆ ತರಬೇತಿ ನೀಡಿತ್ತು. ತಲಾ 30 ಮಂಗಗಳನ್ನು ಏಕಕಾಲಕ್ಕೆ ಸಾಗಿಸಬಹುದಾದ ಮೂರು ಬೋನ್‌ಗಳನ್ನು ಸಿದ್ಧಪಡಿಸಲಾಗಿತ್ತು. ಅರಣ್ಯ ಸಿಬ್ಬಂದಿ ವ್ಯಾನ್‌ಗಳಲ್ಲಿ ತುಂಬಿಕೊಂಡು ಜಲಾಶಯ ತಲುಪಿದ ನಂತರ ಅಲ್ಲಿಂದ ಬೋಟ್‌ ಮೂಲಕ ನಡುಗಡ್ಡೆಗೆ ಸಾಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಮೊದಲ ಹಂತದ ಈ ಪ್ರಾಯೋಗಿಕ ಯೋಜನೆಯಲ್ಲಿ 500 ಮಂಗಗಳನ್ನು ಸಂರಕ್ಷಿಸುವ ಗುರಿಇತ್ತು.ಕಾಲಕಾಲಕ್ಕೆ ಸಿಗುವ ಹಣ್ಣು ಹಂಪಲುಗಳನ್ನು ನಿತ್ಯವೂ ಅವುಗಳಿಗೆ ಪೂರೈಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಸೆರೆ ಹಿಡಿದ ಮಂಗಗಳನ್ನು ನಡುಗಡ್ಡೆಗಳಿಗೆ ಬಿಡಲು ಆ ಪ್ರದೇಶ ಹಿನ್ನೀರಿನ ಸುತ್ತಮುತ್ತಲ ಜನರು ಆಕ್ಷೇಪ ಎತ್ತಿದರು. ಆಗ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ, ತಮ್ಮ ವ್ಯಾಪ್ತಿಯಲ್ಲಿ ಬೇಡವೇ ಬೇಡ ಎಂದು ತಡೆಯಾದರು. ನಂತರ ಯಾವ ಪ್ರದೇಶ ಹುಡುಕಿದರೂ, ಅಲ್ಲಿನ ಜನರು, ಜನ ಪ್ರತಿಧಿಗಳು ಆಕ್ಷೇಪ ಎತ್ತುತ್ತಿದ್ದಾರೆ. ಮಂಕಿಪಾರ್ಕ್ ನಮ್ಮಲ್ಲಿ ಬೇಡ ಎನ್ನುತ್ತಿದ್ದಾರೆ. ಮಂಕಿಪಾರ್ಕ್ ಬೇಕು. ಆದರೆ, ನಮ್ಮಲ್ಲಿ ಮಾತ್ರ ಬೇಡವೇ ಬೇಡ ಎನ್ನುವ ಧೋರಣೆಯಿಂದ ಈ ಪ್ರಾಯೋಗಿಕ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮಲೆನಾಡಿನ ಈ ಭಾಗಗಳಲ್ಲಿ ಮಂಗಗಳ ಉಪಟಳ ತೀವ್ರ ಸ್ವರೂಪ ಪಡೆದಿದೆ. ರೈತರ ಮನೆಗಳ ಮೇಲೆ ನಿರಂತರ ಆಕ್ರಮಣ ಮಾಡುವ ಮನೋಭಾವ ಬೆಳೆಸಿಕೊಂಡಿವೆ. ಅವುಗಳ ಲೂಟಿಗೆ ಶಾಶ್ವತ ಮಾರ್ಗೋಪಾಯ ಅವಶ್ಯ. ಪಟಾಕಿ, ಹುಸಿ ಈಡು, ಬೆಂಕಿ ಹಾಕುವುದು, ಮಂಗಗಳನ್ನು ಹಿಡಿಯವುದು ಹೀಗೆ ಯಾವುದಕ್ಕೂ ಅವು ಬಗ್ಗದಿರುವಾಗ ‘ಮಂಕಿ ಪಾರ್ಕ್‌’ ಪರಿಕಲ್ಪನೆಮೂಡಿತ್ತು.

‘ಬೇರೆ ದಾರಿ ಇಲ್ಲವಾದಾಗ ಅವುಗಳಿಗೆ ಪಾರ್ಕ್‌ ನಿರ್ಮಾಣವೊಂದೆ ಅಂತಿಮ ಆಯ್ಕೆ. ಇದೊಂದು ಪರಿಕ್ಷಾರ್ಥ ಕ್ರಮ. ಯೋಜನೆ ಯಶಸ್ವಿಯಾದಲ್ಲಿ ಪೂರ್ಣ ಪ್ರಮಾಣದ ಜಾರಿಗೆ ಚಿಂತನೆ ನಡೆಸಬಹುದು. 100 ಎಕರೆ ಪ್ರದೇಶದಲ್ಲಿ ಈ ಪಾರ್ಕ್‌ ಯಶಸ್ವಿಯಾದಲ್ಲಿ ನಂತರ ಗೊಂಡಾರಣ್ಯಕ್ಕೆ ಸ್ಥಳಾಂತರ ಮಾಡಲಾಗುವುದು’ ಎನ್ನುವುದು ಮಂಕಿಪಾರ್ಕ್‌ ಪರ ವಾದಿಸುತ್ತಿರುವ ರೈತರು, ಜನಪ್ರತಿನಿಧಿಗಳ ನಿಲುವು.

‘ಮಂಗಗಳನ್ನು ಒಂದೆಡೆ ಕೂಡಿಡುವ ಪರಿಕಲ್ಪನೆಯೇ ನಗೆಪಾಟಲು. ಮಂಗಗಳನ್ನು ಹಿಡಿಯುುದು ಅಷ್ಟು ಸುಲಭವಲ್ಲ. ವಿಪರೀತ ಹಣ ಖರ್ಚು ಮಾಡಿ ಹಿಡಿದರೂ ಅವುಗಳನ್ನು ಒಂದೆಡೆ ಕೂಡಿಟ್ಟುಕೊಳ್ಳುವುದು ಅಸಾಧ್ಯ. ಎಲ್ಲ ಮಂಗಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸುವುದೂ ಸಾಹಸ ಕೆಲಸವಾದೀತು’ ಎನ್ನುವುದು ಪರಿಸರ ಪ್ರೇಮಿಗಳ ವಾದ.

ವಾದ–ಪ್ರತಿಪಾದಗಳು ನಡೆದಿರುವಾಗಲೇ ಒಂದು ಯೋಜನೆ ದಟ್ಟ ಕಾನನಗಳಿರುವ ಮಲೆನಾಡಿನಲ್ಲಿ ಸ್ಥಳ ಸಿಗದೇ ಆರಂಭಕ್ಕೂ ಮೊದಲೇ ನಿರ್ಗಮಿಸುತ್ತಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT