ಸೋಮೇಶ್ವರ‌ಸ್ವಾಮಿ ಜಾತ್ರಾ ಮಹೋತ್ಸವ

7
ಐತಿಹಾಸಿಕ ದೇಗುಲದ ಭೂಮಿ ಉಳಿಸಿಕೊಳ್ಳಲು ಮುಜರಾಯಿ ಇಲಾಖೆ ಮುಂದಾಗಲಿ

ಸೋಮೇಶ್ವರ‌ಸ್ವಾಮಿ ಜಾತ್ರಾ ಮಹೋತ್ಸವ

Published:
Updated:
Prajavani

ಮಾಗಡಿ: ಸೋಮೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಫೆ.12ರಂದು ಮಧ್ಯಾಹ್ನ 12.10ರಿಂದ 1.10ರವರೆಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಮಾಗಡಿ ಐಸಿರಿ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಬೆಳಿಗ್ಗೆ ರುದ್ರಹೋಮ, ಅಷ್ಠಾವದಾನ ಸೇವೆ, ಸಂಗೀತೋತ್ಸವ ಸೇವೆ, ಕಲಾಸೇವೆ, ರುದ್ರಾಭಿಷೇಕ ನಡೆಯಲಿದೆ ಎಂದು ಪ್ರಧಾನ ಅರ್ಚಕ ಆಗಮಿಕ ವಿದ್ವಾನ್‌ ಕೆ.ಎನ್‌.ಗೋಪಾಲ ದೀಕ್ಷಿತ್‌ ತಿಳಿಸಿದರು.

ಶಾಸಕ ಎ.ಮಂಜುನಾಥ ಪತ್ನಿ ಸಮೇತ ರಥಕ್ಕೆ ಪೂಜೆ ಸಲ್ಲಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ಅ.ದೇವೇಗೌಡ, ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ, ತಹಶೀಲ್ದಾರ್ ಎನ್.ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ, ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಸೋಮೇಶ್ವರಸ್ವಾಮಿ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಎಂ.ಜಿ.ಗೋಪಾಲ ಈಡಿಗ ಇತರರು ರಥಕ್ಕೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಹಿನ್ನೆಲೆ: ಈ ದೇವಾಲಯದ ಅದ್ಭುತ ಶಿಲ್ಪಕಲಾಕೃತಿಗಳು, ಉಬ್ಬುಚಿತ್ರಗಳ ಸೌಂದರ್ಯ ಕೋಪಿಷ್ಠ ಮನಸ್ಸು ಶಾಂತಗೊಳಿಸುತ್ತದೆ.‌ ವಿಜಯನಗರ ಸಾಮ್ರಾಜ್ಯದ ಗಡಿಯಾಗಿದ್ದ ಮಹಾಗಡಿಯೇ ಮಾಗಡಿ. ಈ ಮಾಗಡಿಯಲ್ಲಿ ಕ್ರಿ.ಶ.1712ರಲ್ಲಿ ಮುಮ್ಮಡಿ ಕೆಂಪೇಗೌಡ ಹನುಮಾಪುರದ ಶಿಲ್ಪಿ ಮುನಿಯ‌ ಭೋವಿ ಮತ್ತು ತಂಡದ ಶಿಲ್ಪಿಗಳಿಂದ ಸ್ಥಳೀಯವಾಗಿ ದೊರೆಯುತ್ತಿದ್ದ ಕೆಂಪುಮಿಶ್ರಿತ ಕಲ್ಲು ಬಳಸಿ ಈ ದೇವಾಲಯ ನಿರ್ಮಿಸಿದ್ದಾರೆ. ದ್ರಾವಿಡ ಶೈಲಿಯಲ್ಲಿ ಈ ದೇಗುಲ ಬೆಟ್ಟದ ಮೇಲೆ ನಿರ್ಮಾಣವಾಗಿದೆ.

ಗಗನಧಾರ್ಯರ ಪ್ರೇರಣೆಯಿಂದಾಗಿ ಮುಮ್ಮಡಿ ಕೆಂಪೇಗೌಡ ಲಿಂಗಧಾರಣೆ ಮಾಡಿಸಿಕೊಂಡು ಈ ಭಾಗದಲ್ಲಿ 66 ವಿರಕ್ತ ಮಠಗಳನ್ನು, ಗೋಪುರಗಳನ್ನು ನಿರ್ಮಿಸಿದ ಬಗ್ಗೆ ಚಾರಿತ್ರಿಕ ದಾಖಲೆಗಳಿವೆ. ದೇವಾಲಯದ ಪೌಳಿಯೊಳಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕೆಂಪೇಗೌಡರ ಹಜಾರಗಳಿವೆ. ಪರಶುರಾಮ, ಸತ್ಯನಾರಾಯಣಸ್ವಾಮಿ, ಭ್ರಮರಾಂಬಿಕಾ ದೇಗುಲಗಳಿವೆ. ಹಂಪೆಯಲ್ಲಿನ ವಿರೂಪಾಕ್ಷ ದೇಗುಲದ ಮುಂದೆ ಇರುವಂತಹ ನೃತ್ಯ ಮಂಟಪವಿದೆ. ಪೌಳಿ ಗೋಡೆ ನಾಲ್ಕು ದಿಕ್ಕಿನಲ್ಲಿ ಮತ್ತು ಹಜಾರದ ಮೇಲೆ ಚಿತ್ರಾಲಂಕೃತ ಗೋಪುರಗಳಿವೆ. ದಕ್ಷಿಣ ದ್ವಾರ ಮೇಲಿದ್ದ ರಾಯಗೋಪುರ ಶಿಥಿಲವಾಗಿರುವ ಕಾರಣ ಇತ್ತೀಚೆಗೆ ಪ್ರಾಚ್ಯವಸ್ತು ಇಲಾಖೆ ವತಿಯಿಂದ ನೂತನ ರಾಯಗೋಪುರ ನಿರ್ಮಿಸಲಾಗಿದೆ. ಆದರೆ, ಕಳಸ ಸ್ಥಾಪನೆಯಾಗಿಲ್ಲ. ದೇವಾಲಯ ಬೃಹತ್‌ ಬಂಡೆ‌ ಮೇಲೆ ನಿರ್ಮಾಣಗೊಂಡಿದ್ದು ನೋಡಲು ನಯನ ಮನೋಹರವಾಗಿದೆ. ದೇವಾಲಯದ ನೈಋತ್ಯ ದಿಕ್ಕಿನಲ್ಲಿರುವ ಬೆಟ್ಟದ ಮೇಲೆ ಮುಮ್ಮಡಿ ಕೆಂಪೇಗೌಡರ ಕಾವಲು ಗೋಪುರ ಮತ್ತು ಚಕ್ರದ ಬಸವಣ್ಣ ನಂದಿ ಇದೆ.

ಬೆಟ್ಟದ ಕೆಳಗೆ ಇದ್ದ ಕಲಾತ್ಮಕ ಕಲ್ಯಾಣಿ ಮತ್ತು ಅರೆಶಂಕರ ಮಠ ಶಿಥಿಲಗೊಂಡಿದೆ. ಹಿಂದೆ ಜಾತ್ರಾ ಸಮಯದಲ್ಲಿ ಇದೇ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದಾಗ ಉತ್ಸವಮೂರ್ತಿ ಮುಳುಗಿತ್ತು. ಆಗಿನಿಂದ ರಾಸುಗಳ ಜಾತ್ರೆ ನಿಲ್ಲಿಸಲಾಗಿದೆ ಎಂದು ಆಗಮಿಕ ವಿದ್ವಾನ್ ಕೆ.ಎನ್ ಗೋಪಾಲ ದೀಕ್ಷಿತ್ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !