ಬುಧವಾರ, ಏಪ್ರಿಲ್ 21, 2021
23 °C
ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಎಚ್.ಜಿ.ಪ್ರೌಢಶಾಲೆ ಮಿಂಚು

ಸಿಂದಗಿ: 13 ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನ

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ಪಟ್ಟಣದ ಎಚ್.ಜಿ.ಬಾಲಕರ ಪ್ರೌಢಶಾಲೆ ತನ್ನದೇ ವಿಶೇಷತೆಗಳನ್ನು ಹೊಂದಿದೆ. ಅದರಲ್ಲಿ ಕ್ರೀಡಾ ಸಾಧನೆಯೂ ಮುಖ್ಯವಾದುದು.

ಕ್ರೀಡೆಯಲ್ಲಿ ವಾಲಿಬಾಲ್ ಆಟಕ್ಕೆ ಇಡೀ ಜಿಲ್ಲೆಯಲ್ಲಿಯೇ ಹೆಸರು ಮಾಡಿದೆ. ಕ್ರೀಡಾ ಆಸಕ್ತಿ ಹೊಂದಿರುವ ಅದೆಷ್ಟೋ ವಿದ್ಯಾರ್ಥಿಗಳು ಇದೇ ಪ್ರೌಢಶಾಲೆಗೆ ಪ್ರವೇಶ ಪಡೆದುಕೊಳ್ಳುವುದು ಸಾಮಾನ್ಯ.

ಈ ಪ್ರೌಢಶಾಲೆ 1994ರ ಪೂರ್ವದಲ್ಲಿ ಹಾಕಿ ಕ್ರೀಡೆಯಲ್ಲಿ ಮುಂಚೂಣಿಯಲ್ಲಿತ್ತು. ಅಂತೆಯೇ 1995ರಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮಡಿಕೇರಿಯಲ್ಲಿ ಜರುಗಿದ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಆಟವಾಡಿ ಹೆಸರು ಮಾಡಿದ್ದಾರೆ.

ನಂತರದ ಅವಧಿಯಲ್ಲಿ ವಾಲಿಬಾಲ್ ಟೂರ್ನಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. 2006–07ರಿಂದ ಇಲ್ಲಿಯವರೆಗೆ ಅಂದರೆ ಸತತ 13 ವರ್ಷ ಈ ಶಾಲೆಯ ತಂಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುತ್ತ ಬಂದಿದೆ. ಅಷ್ಟೇ ಅಲ್ಲ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಮಿಂಚಿದ್ದಾರೆ.

2017–18ನೇ ಸಾಲಿನಲ್ಲಿ ರಾಜ್ಯಮಟ್ಟದ ವಾಲಿಬಾಲ್ ತಂಡದಲ್ಲಿ ಇದೇ ಶಾಲೆಯ ಶಕೀಲ ಬಡಿಗೇರ, ಮಲಿಕ್ ಶೇಖ್, ಹುಸೇನಿ ಖಾನಾಪುರ, ಆಸೀಫ್ ಕರ್ಜಗಿ, ಸಮೀರ ಶೇಖ್ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ.

2017-18ರಲ್ಲಿ ಆಂಧ್ರಪ್ರದೇಶದಲ್ಲಿ ಜರುಗಿದ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಶಕೀಲ ಬಡಿಗೇರ, ಸಮೀರ ಶೇಖ್ ಆಯ್ಕೆಗೊಂಡು ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ನಬಿಸಾಬ ಜಮಾದಾರ ಮತ್ತು ಶಕೀಲ ಬಡಿಗೇರ ಇವರು 2018-19ರಲ್ಲಿ ರಾಜ್ಯಮಟ್ಟದ ಗುಂಡು ಎಸೆತ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ.

‘ಶಾಲೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕ್ರೀಡಾ ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ದಿನಂಪ್ರತಿ ಬೆಳಿಗ್ಗೆ ಮತ್ತು ಸಂಜೆ ರಾಷ್ಟ್ರಮಟ್ಟದ ವಾಲಿಬಾಲ್ ತರಬೇತುದಾರರಾದ ಎಸ್.ಎ.ಜಹಗೀರದಾರ ಇವರಿಂದ ವಿಶೇಷ ತರಬೇತಿ ಕೊಡಿಸಲಾಗುತ್ತಿದೆ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತಿದ್ದಾರೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಸಂಗೂ ಬಿರಾದಾರ ಹೇಳಿದರು.

‘63ನೇ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ನಮ್ಮ ಶಾಲೆಯ ಶಮೀರ್ ಶೇಖ್, ಶಕೀಲ ಬಡಿಗೇರ ಅತ್ಯುತ್ತಮ ಆಟ ಪ್ರದರ್ಶಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಸಂಸ್ಥೆಯೇ ಭರಿಸುತ್ತದೆ. ಶಿಕ್ಷಣ ಇಲಾಖೆಯಿಂದ ನೀಡುವ ಕ್ರೀಡಾ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು’ ಎಂದು ಶಾಲೆಯ ಉಪಪ್ರಾಚಾರ್ಯರಾದ ನೀಲಮ್ಮ ಆಲಗೂರ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು