ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ನಡೆಸದಿದ್ದರೆ ಅಮಾನತು ರದ್ದು

ಅಮಾನತುಗೊಂಡ ಸರ್ಕಾರಿ ನೌಕರನಿಗೆ ಮತ್ತೆ ಅದೇ ಹುದ್ದೆ ಇಲ್ಲ
Last Updated 25 ನವೆಂಬರ್ 2020, 21:34 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರರು ಶಿಸ್ತು ಕ್ರಮಗಳಿಗೆ ಸಂಬಂಧಿಸಿ ಅಮಾನತುಕೊಂಡ ಪ್ರಕರಣಗಳಲ್ಲಿ ಆರು ತಿಂಗಳ ಒಳಗೆ ಇಲಾಖಾ ವಿಚಾರಣೆ ಆರಂಭಿಸದಿದ್ದರೆ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸದಿದ್ದರೆ ಅಂಥ ನೌಕರನ ಅಮಾನತು ರದ್ದುಗೊಳಿಸುವ ಅಥವಾ ಮುಂದುವರಿಸುವ ಬಗ್ಗೆ ಸಕ್ಷಮ ಪ್ರಾಧಿಕಾರ ತಕ್ಷಣ ತೀರ್ಮಾನಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರನನ್ನು ಕರ್ತವ್ಯದಿಂದ ದೀರ್ಘಾವಧಿವರೆಗೆ ಅನಗತ್ಯವಾಗಿ ಅಮಾನತಿನಲ್ಲಿ ಮುಂದುವರಿಸಿದರೆ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಉಂಟಾಗುತ್ತಿದೆ. ಅಲ್ಲದೆ, ನೌಕರನಿಗೆ ಕಿರುಕುಳ ಉಂಟಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.

ಆರು ತಿಂಗಳ ಒಳಗೆ ಅಮಾನತು ಅವಧಿ ಮುಂದುವರಿಸಲು ಆದೇಶಿಸದೇ ಇದ್ದರೆ ಅಮಾನತು ರದ್ದಾಗಲಿದೆ. ಅಮಾನತು ಆದೇಶ ರದ್ದುಗೊಂಡ ತಕ್ಷಣ ಸ್ಥಳ ನಿಯುಕ್ತಿಗೊಳಿಸುವಂತೆ ನೇಮಕಾತಿ ಪ್ರಾಧಿಕಾರಕ್ಕೆ ನೌಕರ ಕೋರಬೇಕು. ಕೋರದೇ ಇದ್ದರೆ ಅಮಾನತು ಆದೇಶ ರದ್ದಾದ ದಿನದಿಂದ ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಅಮಾನತು ತೆರವುಗೊಂಡ ಬಳಿಕ ನೌಕರನನ್ನು ಯಾವ ಹುದ್ದೆಯಲ್ಲಿ ಅಮಾನತುಗೊಳಿಸಲಾಗಿತ್ತೊ ಅದೇ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಆದೇಶದಲ್ಲಿದೆ.

ಭ್ರಷ್ಟಾಚಾರ ತಡೆ ಕಾಯ್ದೆ ಅಥವಾ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣದಡಿ ಅಮಾನತುಗೊಂಡಿದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಯ ಸಕ್ಷಮ ಪ್ರಾಧಿಕಾರಿಯು ಅಮಾನತು ಅವಧಿ ವಿಸ್ತರಿಸುವಂತೆ ಕೋರಿದರೆ ಮಾತ್ರ ಅವಧಿ ವಿಸ್ತರಿಸಬಹುದು. ಇಲ್ಲದಿದ್ದರೆ ಅಂಥ ಸಂದರ್ಭಗಳಲ್ಲೂ ಅಮಾನತು ಸ್ವಯಂಚಾಲಿತವಾಗಿ ರದ್ದಾಗಲಿದೆ. ಆರು ತಿಂಗಳ ಒಳಗೆ ಇಲಾಖಾ ವಿಚಾರಣೆಯನ್ನು ಆರಂಭಿಸಿದ್ದರೆ ಅಥವಾ ದೋಷಾರೋಪಟ್ಟಿ ಹೊರಡಿಸಿದ್ದರೆ, ಆರು ತಿಂಗಳ ಒಳಗಾಗಿಯೇ ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳುವ ಬಗ್ಗೆ ಸಕ್ಷಮ ಪ್ರಾಧಿಕಾರ ತೀರ್ಮಾನ ತೆಗೆದುಕೊಳ್ಳಬಹುದು ಎಂದೂ ಆದೇಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT