ಸೋಮವಾರ, ಮಾರ್ಚ್ 30, 2020
19 °C

ಕುತೂಹಲ ಕೆರಳಿಸಿದ ಹೊಸನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಾಸಪ್ಪಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರ ಚುನಾವಣೆ ಇಂದು ನಡೆಯಲಿದೆ.

ಒಟ್ಟು 12 ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ 6, ಕಾಂಗ್ರೆಸ್ 5 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರವಾಗಿ ಗೆದ್ದು ಬಿಜೆಪಿಯಲ್ಲಿರುವ ಆಲುವಳ್ಳಿ ವೀರೇಶ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಕೆ.ವಿ.ಸುಬ್ರಹ್ಮಣ್ಯ ಸಹ ಬಿಜೆಪಿಯ ಇನ್ನೊಬ್ಬ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬಿ.ಜಿ.ಚಂದ್ರಮೌಳಿ ಪ್ರಬಲ ಆಕಾಂಕ್ಷಿ.

ಬಿಜೆಪಿಯ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅಧಿಕಾರ ಸ್ಥಾಪಿಸುವಲ್ಲಿ ಉತ್ಸುಕರಾಗಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಗೆದ್ದು ಬಂದಿದ್ದ ವಾಸಪ್ಪ ಗೌಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್, ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಅಧಿಕಾರ ಹಿಡಿದಿತ್ತು. ಅಂದು ಒಬ್ಬರು ಪಕ್ಷೇತರರೂ ಸೇರಿ 7 ಸದಸ್ಯರನ್ನು ಹೊಂದಿದ್ದ ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ವಾಗ್ದಾನದ ಒಪ್ಪಂದದಂತೆ ವಾಸಪ್ಪಗೌಡ ರಾಜೀನಾಮೆ ಕೊಡದೇ ಸತಾಯಿಸಿದ್ದು, ಇದೀಗ ಒಂದು ವರ್ಷ ಅವಧಿ ಇರುವಾಗ ರಾಜೀನಾಮೆ ಸಲ್ಲಿಸಿದ್ದಾರೆ.

ಇಷ್ಟರವರೆಗೂ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ವಾಸಪ್ಪ ಗೌಡ ಮತ್ತೆ ಬಿಜೆಪಿಗೆ ಮರಳಿ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ. ಮೈಸೂರಿನ ಹೋಟೆಲ್‌ ಒಂದರಲ್ಲಿ ಕಾಂಗ್ರೆಸ್ ಸದಸ್ಯರ ಜತೆ ತಂಗಿದ್ದ ವಾಸಪ್ಪ ಗೌಡ, ಬಿಜೆಪಿ ಮುಖಂಡರೊಂದಿಗೆ ‘ಎಸ್ಕೇಪ್‌’ ಆಗುತ್ತಿರುವ ಸಿ.ಸಿ.ಟಿ.ವಿ ದೃಶ್ಯ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಬಿಸಿತುಪ್ಪವಾದ ಆಣೆ ಪ್ರಮಾಣ: ಇತ್ತ ಬಿಜೆಪಿ ಸದಸ್ಯರಿಬ್ಬರು ಆಣೆ ಪ್ರಮಾಣದ ಭೀತಿಯಲ್ಲಿ ಇದ್ದು, ಮಾತಿನಂತೆ ಕಾಂಗ್ರೆಸ್‌ನ ಚಂದ್ರಮೌಳಿ ಅವರನ್ನು ಬೆಂಬಲಿಸಬೇಕಾಗಿದೆ. ಆದರೆ ಪಕ್ಷದ ಆಣತಿ ಮೀರಲು ಮನಸ್ಸಿಲ್ಲದೇ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ.

ತಾಲ್ಲೂಕು ಪಂಚಾಯಿತಿ ಚುನಾವಣೆಯ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಇವರು ನಂತರ ತಾಲ್ಲೂಕು ಪಂಚಾಯಿತಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಗ್ರಾಮ ಪಂಚಾಯಿತಿಗೆ ರಾಜೀನಾಮೆ ಕೊಡದೇ ತಾಲ್ಲೂಕು ಪಂಚಾಯಿತಿಯಲ್ಲೂ ಸದಸ್ಯ ಸ್ಥಾನ ಹೊಂದಿ ಅನರ್ಹತೆಯ ಭೀತಿ ಎದುರಿಸಿದ್ದರು. ಆಗ ಕಾಂಗ್ರೆಸ್‌ನ ಚಂದ್ರಮೌಳಿ ಅವರಿಗೆ ‘ನೀವು ಅಧ್ಯಕ್ಷರಾಗುವ ವೇಳೆ ನಿಮಗೆ ಮತ ನೀಡುತ್ತೇವೆ’ ಎಂದು ಸಿಂಗದೂರು ದೇಗುಲದಲ್ಲಿ ಆಣೆ ಪ್ರಮಾಣ ಮಾಡಿದ್ದರು ಎನ್ನಲಾಗಿದೆ. ಈ ಸದಸ್ಯರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು