ಮಂಗಳೂರು: ಗೃಹರಕ್ಷಕ ದಳದಲ್ಲಿದ್ದ ವ್ಯಕ್ತಿಯೊಬ್ಬ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡು ಮಹಿಳೆಯೊಬ್ಬರಿಂದ ಹಣ ಕಿತ್ತುಕೊಂಡ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಶಿವರಾಜ್ ದೇವಾಡಿಗನ್ನು ಪೊಲೀಸರು ಬಂಧಿಸಿದ್ದಾರೆ.
‘ಕಾವೂರು ಈಶ್ವರನಗರದ ಶಿವರಾಜ್ ದೇವಾಡಿಗ ಎಂಬಾತ ಬೆದರಿಕೆ ಒಡ್ಡಿ ₹ 38 ಸಾವಿರ ಕಿತ್ತುಕೊಂಡಿದ್ದಾನೆ’ ಎಂದು ಆರೋಪಿಸಿ ಸವಿತಾ ಎಂಬುವರು ಕಾವೂರು ಠಾಣೆಗೆ ದೂರು ನೀಡಿದ್ದರು.
‘ಮಸಾಜ್ ಪಾರ್ಲರ್ ನಡೆಸುತ್ತಿರುವ ಸವಿತಾ ಅವರಿಂದ ಆರೋಪಿಯು ಹಣ ಹಾಗೂ ಚಿನ್ನವನ್ನು ಪಡೆದ ಬಗ್ಗೆ ದೂರು ಬಂದಿತ್ತು. ಹಳೆಯ ಪ್ರಕರಣವೊಂದನ್ನು ಇತ್ಯರ್ಥ ಪಡಿಸುವ ನೆಪದಲ್ಲಿ ಆರೋಪಿ ಹಣ ಪಡೆದಿದ್ದ. ಹಣ ನೀಡದಿದ್ದರೆ ಮಹಿಳೆಯ ಮನೆಗೂ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಶಿವರಾಜ್ ಅಗ್ನಿಶಾಮಕ ದಳದಲ್ಲಿ ಗೃಹರಕ್ಷಕನಾಗಿ ಕರ್ತವ್ಯ ನಿರ್ವಹಿಸಿದ್ದ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ಟ್ವೀಟ್ ಮಾಡಿದ್ದಾರೆ.
‘ವಾರದ ಕವಾಯತಿನಲ್ಲಿ ಸರಿಯಾಗಿ ಭಾಗವಹಿಸದ ಶಿವರಾಜ್‌ಗೆ ನೋಟಿಸ್ ನೀಡಲಾಗಿತ್ತು. ಗೃಹರಕ್ಷಕದಳದಲ್ಲಿ ಸ್ವಯಂಸೇವಕನಾಗಿ ಮುಂದುವರಿಯುವ ಅರ್ಹತೆ ಹೊಂದಿಲ್ಲದ ಕಾರಣ ಆತನನ್ನು ಅಮಾನತು ಮಾಡಲಾಗಿತ್ತು. ಎಫ್‌ಐಆರ್ ಪ್ರತಿ ಕೈಸೇರಿದ ತಕ್ಷಣವೇ ಆತನನ್ನು ವಜಾ ಮಾಡುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ಕಮಾಂಡಂಟ್ ಡಾ.ಮುರಳಿ ಮೋಹನ ಚೋಂತಾರು ತಿಳಿಸಿದ್ದಾರೆ.
ಪೊಲೀಸರ ಸೋಗಿನಲ್ಲಿ ಯಾರಾದರೂ ಬೆದರಿಕೆ ಒಡ್ಡಿದರೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.