ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ನೀರಾವರಿ ಯೋಜನೆಗೆ ₹180 ಕೋಟಿ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ
Last Updated 13 ಸೆಪ್ಟೆಂಬರ್ 2021, 4:23 IST
ಅಕ್ಷರ ಗಾತ್ರ

ತಿಪಟೂರು: ಹೇಮಾವತಿ, ಎತ್ತಿನಹೊಳೆ ಯೋಜನೆಗಳ ಮೂಲಕ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ರೂಪುಗೊಳಿಸಲು ₹180 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ತಾಲ್ಲೂಕಿನ ಶಿವರ ಗ್ರಾಮದಲ್ಲಿ ಭಾನುವಾರ ಹೇಮಾವತಿ ನಾಲೆಯಿಂದ ಶಿವರ ಕೆರೆ, ಗೌಡನಕಟ್ಟೆ ಕೆರೆ, ಕರಿಕೆರೆ ಕೆರೆ, ಮಾದಿಹಳ್ಳಿ ಕೆರೆ, ಭೈರನಾಯಕನಹಳ್ಳಿ ಕೆರೆಗಳಿಗೆ ನೀರು ಹರಿಸುವ ಹಾಗೂ ಹೊಸದಾಗಿ ಪೈಪ್‌ಲೈನ್, ಪಂಪ್‌ಹೌಸ್ ಮೋಟಾರ್ ಅಳವಡಿಕೆಗೆ ₹36.50 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ನೀರಿನ ಕೊರತೆಯಿದ್ದು, ತಿಪಟೂರು, ಚಿಕ್ಕನಾಯಕನಹಳ್ಳಿ, ಕೋಲಾರ ಭಾಗಗಳಲ್ಲಿ ಹೆಚ್ಚಿನ ಕೊರತೆಯಿದೆ. ಎಲ್ಲ ಕಡೆಗಳಿಗೂ ಇರುವ ನೀರನ್ನು ಹಂಚಿಕೊಂಡರೆ ಮಾತ್ರವೇ ಎಲ್ಲರಿಗೂ ಅನುಕೂಲವಾಗಲಿದೆ. ಈ ಬಾರಿ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗಾಗಿ ಅನುದಾನ ಬಿಡುಗಡೆ ಮಾಡಿದ್ದು, ಹೇಮಾವತಿಯ 293 ಎಂಸಿಎಫ್‍ಟಿ ನೀರು ಹಾಗೂ ಎತ್ತಿನ ಹೊಳೆಯಿಂದ ಬರುವ ನೀರನ್ನು ನೂರಕ್ಕೂ ಹೆಚ್ಚು ಕೆರೆಗಳಿಗೆ ಬಿಡಲಾಗುವುದು. ಯೋಜನೆಯಲ್ಲಿ ಬರುವ ಎಲ್ಲ ಕೆರೆಗಳಿಗೂ ಕೆರೆಯ ಶೇ 60ರಷ್ಟು ನೀರನ್ನು ತುಂಬಿಸಲು ಯತ್ನಿಸಲಾಗುವುದು. ಕೆರೆಯಲ್ಲಿ ಹಲವು ವರ್ಷ ನೀರು ನಿಂತರೆ ಮಾತ್ರವೇ ಅಂತರ್ಜಲವು ವೃದ್ಧಿಯಾಗಲಿದೆ ಎಂದರು.

ಹೊನ್ನವಳ್ಳಿ ಏತ ನೀರಾವರಿಯ ಯೋಜನೆಯನ್ನು ಮಾಡಿರುವ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಹಾಹಾಕಾರ ಎದುರಾಗಿಲ್ಲ. ಬಿಟ್ಟಿರುವಂತಹ ನೀರಿನಿಂದ ಅಂತರ್ಜಲ ವೃದ್ಧಿಯಾಗಿದೆ. ಸತತವಾಗಿ 4-5 ವರ್ಷಗಳ ಕೆರೆಗೆ ನೀರು ಬಂದರೆ ಮಾತ್ರ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಅಧ್ಯಕ್ಷ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, 20-30 ವರ್ಷಗಳ ನಿರಂತರ ಹೋರಾಟದ ಫಲದಿಂದ ಇಂದು ಶಿವರ ಕೆರೆಗೆ ನೀರು ಬಂದಿದೆ. ಒಂದೇ ಬಾರಿಗೆ ಎಲ್ಲಾ ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲವಾದ್ದರಿಂದ ಹಂತ ಹಂತವಾಗಿ ಕಾಮಗಾರಿಗಳ ನಡೆಯುತ್ತಿರುವುದು ಸಂತಸದ ಸಂಗತಿ. ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ಹಲವು ಭಾಗಗಳಿಗೆ ನೀರಾವರಿ ಸೌಕರ್ಯ ದೊರೆತಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್, ಮಾಜಿ ತಾ.ಪಂ.ಸದಸ್ಯ ಗುರುಸಿದ್ಧಯ್ಯ, ಮಂಜು ಬೇಲೂರನಹಳ್ಳಿ, ಉಮಾಶಂಕರ್, ಶಶಿಧರ್, ತೇಜು ಶಿವರ, ಮಂಜುನಾಥ್, ಉಮೇಶ್, ಚಂದ್ರಯ್ಯ, ಸಿದ್ದರಾಮಣ್ಣ, ಷಡಕ್ಷರಿ ಬನ್ನಿಹಳ್ಳಿ, ಬಸವರಾಜು, ಷಣ್ಮುಖಯ್ಯ, ಷಣ್ಮುಖ, ದೇವರಾಜು, ಸಿದ್ದಲಿಂಗಮೂರ್ತಿ ಮಾದಿಹಳ್ಳಿ, ಚಿಕ್ಕೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT