ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಅಸಮರ್ಪಕ ನಿರ್ವಹಣೆ, ವಿದ್ಯುತ್ ಬಿಲ್ ಪಾವತಿ ಮಾಡಲಾಗದೆ ಸ್ಥಗಿತವಾಗಿದ್ದ ಶುದ್ಧ ಕುಡಿಯುವ ನೀರು ಘಟಕಗಳು

21 ನೀರಿನ ಘಟಕ ಪಾಲಿಕೆ ಸುಪರ್ದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ವಿವಿಧ ಬಡಾವಣೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ಮಿಸಿದ್ದ 12 ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ 21 ಘಟಕಗಳನ್ನು ಮಹಾನಗರ ಪಾಲಿಕೆಯು ಬುಧವಾರ ತನ್ನ ಸುಪರ್ದಿಗೆ ಪಡೆಯಿತು.

ಪಾಲಿಕೆ ಆಯುಕ್ತ ಟಿ.ಭೂಬಾಲನ್ ನೇತೃತ್ವದ ತಂಡಗಳು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ಮಿಸಿದ 12 ಘಟಕ, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ಮಿಸಿದ 2, ಶಾಸಕರ ಅನುದಾನದಲ್ಲಿ ನಿರ್ಮಿಸಿದ 1, ಸಂಸದರ ನಿಧಿಯಡಿ ನಿರ್ಮಿಸಿದ 5, ಮಹಾನಗರ ಪಾಲಿಕೆ ನಿರ್ಮಿಸಿದ 2 ಘಟಕಗಳನ್ನು ಹಸ್ತಾಂತರಿಸಿಕೊಂಡಿತು.

ಶಿರಾ ಗೇಟ್‌ನಲ್ಲಿರುವ ಶುದ್ಧ ಕುಡಿಯವ ನೀರಿನ ಘಟಕ, ಪುಟ್ಟಸ್ವಾಮಯ್ಯ ಪಾಳ್ಯ, ಭೀಮಸಂದ್ರ ಹಳೇ ಗ್ರಾಮ ರಸ್ತೆಯ ಶುದ್ಧ ಕುಡಿಯುವ ನೀರಿನ ಘಟಕ, ದಿಬ್ಬೂರು ಬಸ್ ನಿಲ್ದಾಣದ ಹತ್ತಿರದ ಘಟಕ, ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿನ ಘಟಕ, ಮೆಳೆಕೋಟೆಯಲ್ಲಿನ ಘಟಕಗಳನ್ನು ಸುಪರ್ದಿಗೆ ಪಡೆಯಿತು.

ಕುರಿಪಾಳ್ಯ ಮುಖ್ಯ ರಸ್ತೆಯ ಶುದ್ಧ ಕುಡಿಯುವ ನೀರಿನ ಘಟಕ, ಜಗಜ್ಯೋತಿ ರಸ್ತೆಯಲ್ಲಿನ ಘಟಕ, ಎನ್.ಆರ್.ಕಾಲೊನಿ ಸರ್ಕಾರಿ ಶಾಲೆ, ಹನುಮಂತಪುರ ಪಾರ್ಕ್‌ನಲ್ಲಿನ ಘಟಕ, ಭಾರತಿನಗರದಲ್ಲಿನ ಘಟಕ, ಅರಳಿಮರದ ಸಮೀಪದ ಸತ್ಯಮಂಗಲ ಪಾಳ್ಯದಲ್ಲಿನ ಘಟಕ, ಜಗನ್ನಾಥಪುರದಲ್ಲಿನ ಘಟಕ, 24ನೇ ವಾರ್ಡಿನ ಸರ್ಕಾರಿ ಉರ್ದು ಶಾಲೆ ಹತ್ತಿರದ ಘಟಕ, ಚನ್ನಪ್ಪನ ಪಾಳ್ಯದಲ್ಲಿನ ಘಟಕಗಳನ್ನು ಸುಪರ್ದಿಗೆ ಪಡೆಯಿತು.

29ನೇ ವಾರ್ಡಿನ ಮರಳೂರು ದಿನ್ನೆ 1ನೇ ಕ್ರಾಸ್‌ನಲ್ಲಿರುವ ನೀರಿನ ಟ್ಯಾಂಕ್ ಹತ್ತಿರ ಘಟಕ, ಎಚ್ಎಂಎಸ್ ಕಾಲೇಜು ಪಂಪ್‌ ಹೌಸ್ ಹತ್ತಿರದ ಘಟಕ, ಶೆಟ್ಟಿಹಳ್ಳಿ ದೇವಸ್ಥಾನ ಹಿಂಭಾಗದ ಘಟಕ, 33ನೇ ವಾರ್ಡಿನ ನೀರಿನ ಟ್ಯಾಂಕ್ ಹತ್ತಿರದ ಘಟಕ, ಕ್ಯಾತ್ಸಂದ್ರ ಶಾಲೆ ಆವರಣದಲ್ಲಿನ ಘಟಕ, ದೇವರಾಯಪಟ್ಟಣದ ಅಂಬೇಡ್ಕರ್ ಭವನ ಹತ್ತಿರದ ಘಟಕವನ್ನು ಅಧಿಕಾರಿಗಳ ತಂಡವು ಸುಪರ್ದಿಗೆ ಪಡೆಯಿತು.

ಈ ಘಟಕ ಸುಪರ್ದಿಗೆ ಪಡೆದಿಲ್ಲ: ‘ವಾರ್ಡ್ 17ರ ಸರಸ್ವತಿಪುರಂನಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಕೆಪಿಟಿಸಿಎಲ್ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಡಿ ನಿರ್ಮಿಸಿರುವುದರಿಂದ ಸ್ಥಳಾಂತರ ಮಾಡಿಕೊಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಪಾಲಿಕೆ ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುಪರ್ದಿಗೆ ಪಡೆಯಲು ಕಾರಣಗಳೇನು?: ಶುದ್ಧ ನೀರಿನ ಘಟಕಗಳಲ್ಲಿ ಕೆಲವು ಘಟಕಗಳಿಂದ ಬೆಸ್ಕಾಂ ಇಲಾಖೆಗೆ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಬೆಸ್ಕಾಂ ಇಲಾಖೆಯು ಶುದ್ಧ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಸಾರ್ವಜನಿಕರಿಗೆ ತೊಂದರೆ ಆಗಿತ್ತು.

 ಘಟಕಗಳನ್ನು ಕೆಲ ಖಾಸಗಿ ವ್ಯಕ್ತಿಗಳು ಸ್ವಂತ ಲಾಭಕ್ಕಾಗಿ ಬಳಕೆ ಮಾಡಿಕೊಂಡು ಬಿಲ್ ಪಾವತಿಸಿರುವುದಿಲ್ಲ ಎಂಬುದು ಪಾಲಿಕೆ ಗಮನಕ್ಕೆ ಬಂದಿತ್ತು.  ಈ ಘಟಕಗಳನ್ನು ನಿರ್ಮಿಸಿದ ಏಜೆನ್ಸಿಗಳು ಪಾಲಿಕೆಗೆ ಹಸ್ತಾಂತರ ಮಾಡಿಲ್ಲ. ಆದರೆ, ವಿದ್ಯುತ್ ಬಿಲ್ ಮಾತ್ರ ಆಯುಕ್ತರ ಹೆಸರಿಗೆ ನೀಡುತ್ತಿತ್ತು. ಈ ವಿದ್ಯುತ್ ಬಿಲ್ ಮಹಾನಗರ ಪಾಲಿಕೆಗೆ ಹೊರೆಯಾಗುತ್ತಿರುವುದು ಪಾಲಿಕೆಗೆ ಕಂಡು ಬಂದಿತ್ತು.‌

ನಗರ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳನ್ನು ವಿವಿಧ ಇಲಾಖೆಗಳು ನಿರ್ಮಿಸಿದ್ದು, ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ನಿಗದಿಪಡಿಸದೆ ಇದ್ದುದರಿಂದ ಘಟಕಗಳ ನಿರ್ವಹಣೆಯಲ್ಲಿ ಅವ್ಯವಹಾರ, ತಾರತಮ್ಯ ಮಾಡುವುದು ಮತ್ತು ಚುನಾವಣಾ ಸಮಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿದ್ದವು.

ಮುಖ್ಯಮಂತ್ರಿ ಕಚೇರಿಯಿಂದ, ಲೋಕಾಯುಕ್ತರ ಕಚೇರಿಯಿಂದ ವಿವರಣೆ ಕೇಳಿ ಪಾಲಿಕೆಗೆ ಈ ಬಗ್ಗೆ ಪತ್ರ ಬಂದಿದ್ದವು. ರಾಜ್ಯ ಪಾಲರ ಕಚೇರಿಗೂ ಈ ಬಗ್ಗೆ ದೂರು ಸಾರ್ವಜನಿಕರಿಂದ ಹೋಗಿದ್ದರಿಂದ ರಾಜ್ಯಪಾಲರ ಕಚೇರಿಯೂ ವರದಿ ಕೇಳಿತ್ತು.

ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಂಬಂಧಪಡದ ಕೆಲ ವ್ಯಕ್ತಿಗಳು ಸ್ವಂತ ಲಾಭಕ್ಕಾಗಿ ಅನಧಿಕೃತವಾಗಿ ತಮ್ಮ ಸುಪರ್ದಿಗೆ ಪಡೆದು ಮನಸ್ಸಿಗೆ ಬಂದಂತೆ ಕುಡಿಯುವ ನೀರಿಗೆ ದರ ನಿಗದಿಪಡಿಸಿಕೊಂಡಿದ್ದರು. ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿರುವುದು ಪಾಲಿಕೆಗೆ ಕಂಡು ಬಂದಿತ್ತು.‘ಪ್ರಜಾವಾಣಿ’ಯು ಈಚೆಗೆ ಈ ಕುರಿತು ವರದಿ ಪ್ರಕಟಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.