ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬೆದರು ಬೊಂಬೆಯಾದ ‘ಕಾಲಿಂಗ್‌ ಬಾಕ್ಸ್‌’

ಮೈಲಾರಿ ಲಿಂಗಪ್ಪ
Published 23 ಮಾರ್ಚ್ 2024, 6:09 IST
Last Updated 23 ಮಾರ್ಚ್ 2024, 6:09 IST
ಅಕ್ಷರ ಗಾತ್ರ

ತುಮಕೂರು: ತುರ್ತು ಸಮಯದಲ್ಲಿ ಜನರ ರಕ್ಷಣೆಗಾಗಿ ಸ್ಮಾರ್ಟ್‌ ಸಿಟಿ ಯೋಜನೆಯಿಂದ ಪರಿಚಯಿಸಿದ್ದ ‘ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌’ (ಇಸಿಬಿ) ಬಳಕೆ ತೀರಾ ಕಡಿಮೆಯಾಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರೂಪಿಸಿದ್ದ ‘ಸ್ಮಾರ್ಟ್‌’ ಯೋಜನೆ ಹಳ್ಳ ಹಿಡಿದಿದೆ.

ನಗರದ ಬಿಜಿಎಸ್‌ ವೃತ್ತ, ಎಸ್‌.ಎಸ್‌.ವೃತ್ತ, ಶಿರಾ ಗೇಟ್‌ ಸೇರಿದಂತೆ ಪ್ರಮುಖ 41 ಸ್ಥಳಗಳಲ್ಲಿ 2020ರ ಮಾರ್ಚ್‌ನಲ್ಲಿ ಇಸಿಬಿ ಪೆಟ್ಟಿಗೆ ಅಳವಡಿಸಲಾಗಿದೆ. ಸುಮಾರು ನಾಲ್ಕು ವರ್ಷ ಕಳೆದರೂ ಇದುವರೆಗೆ ಕೇವಲ 700 ಜನರು ಮಾತ್ರ ಇದನ್ನು ಬಳಕೆ ಮಾಡಿಕೊಂಡಿದ್ದು, ಕಾಲಿಂಗ್‌ ಬಾಕ್ಸ್‌ ‘ಬೆದರು ಬೊಂಬೆ’ಯಂತಾಗಿವೆ.

ಅಪಘಾತವಾದ ತಕ್ಷಣಕ್ಕೆ ಆಂಬುಲೆನ್ಸ್‌, ಆರೋಗ್ಯ ಸೇವೆ ಪಡೆಯಲು ಇದು ನೆರವಾಗಲಿದೆ. ಪೊಲೀಸ್ ಸೇವೆ, ಕಳ್ಳತನ, ಆರೋಗ್ಯ ಸಮಸ್ಯೆ, ಸಂಚಾರ ನಿಯಮ ಉಲ್ಲಂಘನೆ ಇತರೆ ಯಾವುದೇ ತುರ್ತು ಸಂದರ್ಭದಲ್ಲಿ ಕಾಲಿಂಗ್‌ ಬಾಕ್ಸ್‌ ಉಪಯೋಗಿಸಬಹುದು. ಪೆಟ್ಟಿಗೆಯಲ್ಲಿರುವ ಕೆಂಪು ಗುಂಡಿ ಒತ್ತಿ ಕರೆ ಮಾಡಿದರೆ, ಕೂಡಲೇ ಸ್ಮಾರ್ಟ್‌ ಸಿಟಿಯ ಕಮಾಂಡ್ ಮತ್ತು ಕಂಟ್ರೋಲ್‌ ಸೆಂಟರ್‌ಗೆ ವಿಡಿಯೊ ಕರೆ ಹೋಗುತ್ತದೆ.

ನಂತರ ಅಲ್ಲಿನ ಸಿಬ್ಬಂದಿ ಪರಿಶೀಲಿಸಿ, ಅಗತ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳುತ್ತಾರೆ. ಹತ್ತಿರದ ಪೊಲೀಸ್‌ ಠಾಣೆಗೆ, ಆಂಬುಲೆನ್ಸ್‌ ಚಾಲಕರಿಗೆ ಮಾಹಿತಿ ನೀಡುತ್ತಾರೆ. ಘಟನೆ ನಡೆದ ತಕ್ಷಣಕ್ಕೆ ಸ್ಪಂದಿಸಲು ಇದೊಂದು ಉತ್ತಮ ಕ್ರಮವಾಗಿದೆ. ಆದರೆ, ಮಾಹಿತಿಯ ಕೊರತೆಯಿಂದ ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಇಂತಹ ಬಾಕ್ಸ್‌ಗಳನ್ನು ಅಳವಡಿಸಿರುವ ಬಗ್ಗೆ ಸಾಕಷ್ಟು ಸಂಖ್ಯೆಯ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ.

ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಬಗ್ಗೆ ನಗರದ ಸಾರ್ವಜನಿಕರು ಪ್ರಾರಂಭದಿಂದಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕಳಪೆ ಕೆಲಸಗಳು ಆಗುತ್ತಿವೆ, ಬೇಡದ ಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರೂಪಿಸಿದ್ದ ಯೋಜನೆ ಪ್ರಚಾರದ ಕೊರತೆಯಿಂದ ಜನರನ್ನು ತಲುಪುತ್ತಿಲ್ಲ.

‘ತುಂಬಾ ಜನರು ಸಿಗ್ನಲ್‌ಗಳಲ್ಲಿ ನಿಂತಾಗ ಆಶ್ಚರ್ಯದಿಂದ ಪೆಟ್ಟಿಗೆಗಳನ್ನು ನೋಡುತ್ತಾರೆ. ಯಾವ ರೀತಿ ಬಳಸಬೇಕು ಎಂಬುವುದೇ ಜನರಿಗೆ ಗೊತ್ತಿಲ್ಲ’ ಎಂದು ನಗರದ ನಿವಾಸಿ ಚಂದ್ರರಾಜ್‌ ಪ್ರತಿಕ್ರಿಯೆ ನೀಡಿದರು.

ಸಹಾಯವಾಣಿಗೆ 12 ಸಾವಿರ ಕರೆ

‘ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌’ಗೆ ಜನರಿಂದ ಸ್ಪಂದನೆ ಸಿಗದಿದ್ದರೂ ಪಾಲಿಕೆಯಿಂದ ಆರಂಭಿಸಿರುವ ತುರ್ತು ಸಹಾಯವಾಣಿಗೆ ಹೆಚ್ಚಿನ ಕರೆಗಳು ಬಂದಿವೆ. ಜಿಲ್ಲಾ ಪೊಲೀಸ್‌ ಕಚೇರಿಯ ಆವರಣದಲ್ಲಿರುವ ‘ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್’ನಲ್ಲಿ ಸಹಾಯವಾಣಿ ತೆರೆಯಲಾಗಿದೆ.

ಪ್ರತಿ ದಿನ 50ಕ್ಕೂ ಹೆಚ್ಚು ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕಮಾಂಡ್‌ ಸೆಂಟರ್‌ನ ಸಿಬ್ಬಂದಿ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. 2021ರ ಮಾರ್ಚ್‌ನಲ್ಲಿ ಸಹಾಯವಾಣಿ ಆರಂಭಿಸಲಾಯಿತು. ಇದುವರೆಗೆ 12 ಸಾವಿರಕ್ಕೂ ಹೆಚ್ಚು ಕರೆಗಳು ಬಂದಿವೆ. ಅಪಘಾತವಾದಾಗ ಯುಜಿಡಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದಾಗ ಸಹಾಯವಾಣಿಯ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರುತ್ತಿದ್ದಾರೆ.

ಜನರು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಸುಖಾ ಸುಮ್ಮನೆ ಕರೆ ಮಾಡಿ ಸಿಬ್ಬಂದಿಗೆ ತೊಂದರೆ ಕೊಡುವಂತಹ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ‘ರಸ್ತೆಯಲ್ಲಿ ನಾಯಿ ಸತ್ತಿದೆ ಕೊಳೆತು ನಾರುತ್ತಿದ್ದರೂ ತೆಗಿಸಿಲ್ಲ. ಮನೆಯ ಪಕ್ಕದಲ್ಲಿಯೇ ಕಸ ಹಾಕಿ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳುತ್ತಿಲ್ಲ’ ಎಂಬ ಸಣ್ಣಪುಟ್ಟ ವಿಚಾರಗಳಿಗೂ ಕೆಲವರು ಆಗಾಗ ಕರೆ ಮಾಡುತ್ತಾರೆ’ ಎಂದು ಕಮಾಂಡ್‌ ಸೆಂಟರ್‌ನ ಅಧಿಕಾರಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.

ತುರ್ತು ವೇಳೆ ಸಂಪರ್ಕಿಸಿ

ನಗರದ ಜನತೆಗೆ ತುರ್ತು ಸಮಯದಲ್ಲಿ ಸ್ಪಂದಿಸುವ ಉದ್ದೇಶದಿಂದ 155304 0816-2213400 ಸಹಾಯವಾಣಿ ಆರಂಭಿಸಲಾಗಿದೆ. ಅಪಘಾತ ನಡೆದ ಸಮಯದಲ್ಲಿ ಸೇವೆ ಪಡೆಯಲು ಯುಜಿಡಿ ನೀರು ಸರಬರಾಜು ತೆರಿಗೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಸಹಾಯವಾಣಿ ಸಂಪರ್ಕಿಸಬಹುದು. ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನ ಸಿಬ್ಬಂದಿ ಸಾರ್ವಜನಿಕರಿಗೆ ಸ್ಪಂದಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT