ಗುರುವಾರ , ಮಾರ್ಚ್ 30, 2023
22 °C
ಲಂಬಾಣಿ ಸಮುದಾಯದಲ್ಲಿ ದೀಪಾವಳಿ ವಿಶೇಷ ಆಚರಣೆ

ತಿಪಟೂರು: ತಾಂಡಾಗಳಲ್ಲಿ ತಂಗಟೆ ಘಮಲು

ಎಚ್.ಬಿ.ಸುಪ್ರತೀಕ್ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ದೀಪಾವಳಿಯು ಲಂಬಾಣಿಗರಿಗೆ ಹೊಸ ವರ್ಷದ ಸಂಭ್ರಮ. ಹೊಸ ಬಾಳಿಗೆ ಹೊಸ ಅಧ್ಯಾಯದಂತೆ ಪ್ರತಿಯೊಂದರಲ್ಲಿಯೂ ಹೊಸತನವನ್ನು ಹಾಗೂ ಸುಖಕರ ಜೀವನವನ್ನು ನಡೆಸಲು ಮುನ್ನಡಿಯನ್ನು ಈ ಹಬ್ಬದ ಮೂಲಕ ಇಡುತ್ತಾರೆ.

ತಾಲ್ಲೂಕಿನ ಕೊಬ್ಬರಿ ದೊಡ್ಡಯ್ಯನಪಾಳ್ಯ, ಮಾಚುಕಟ್ಟೆ ತಾಂಡ್ಯ, ಎಚ್.ಭೈರಾಪುರ, ಬಳುವನೆರಲು ತಾಂಡ್ಯಗಳಲ್ಲಿ ವಿಜೃಂಭಣೆಯಿಂದ ದೀಪಾವಳಿ ಆಚರಿಸಲಾಗುತ್ತದೆ..

ಮೇರಾ ಆಚರಣೆ ಲಂಬಾಣಿಗಳ ಬಹುಮುಖ್ಯ ಪದ್ಧತಿ. ಹಬ್ಬದ ದಿನದಂದು ಪ್ರತಿಯೊಬ್ಬರ ಮನೆಗಳಿಗೆ ತೆರಳಿ ಬಾಳು ಬಂಗಾರವಾಗಲಿ ಎಂದು ತಂಗಡಿ ಹೂವನ್ನು ನೀಡಿ ಹಾರೈಸುತ್ತಾರೆ. ಕಳೆದ ದೀಪಾವಳಿಯಿಂದ ಇಲ್ಲಿಯವರೆವಿಗೂ ನಡೆದಿರುವ ಸಮಾಜದ ಆಗು-ಹೋಗುಗಳನ್ನು ಸಮುದಾಯದ ಎಲ್ಲರ ಮುಂದೆ ವಾರ್ಷಿಕ ವರದಿ ಮಂಡಿಸುತ್ತಾರೆ. ಹೊಸ ವರ್ಷದಂದು ಹೊಸ ಪುಸ್ತಕವನ್ನಿಟ್ಟು ಹೊಸ ಅಧ್ಯಾಯ ಪ್ರಾರಂಭಿಸಲು ಎಲ್ಲರೂ ಕಾತರದಿಂದ ಈ ದಿನವನ್ನು ಸಂಭ್ರಮಿಸುತ್ತಾರೆ.

ಈ ಹಬ್ಬದಂದು ಸಮುದಾಯದ ಸದಸ್ಯರ ಜೊತೆಗೂಡಿ ಪ್ರತಿ ಮನೆಗೂ ಪೂಜಾ ಸಾಮಗ್ರಿಗಳೊಂದಿಗೆ ತೆರಳಿ ಮನೆಗಳಲ್ಲಿ ಪೂಜೆ ನಿರ್ವಹಿಸುತ್ತಾರೆ. ಸಾಂಪ್ರದಾಯಿಕ ಆಟಗಳಾದ ಲಗೋರಿ ಆಡುತ್ತಾರೆ. ಈ ಆಟದ ವಿಶೇಷತೆಯೆಂದರೆ ಈ ಆಟಕ್ಕೆ ಬಳಸುವ ಚೆಂಡನ್ನು ಕಲಾತ್ಮಕವಾಗಿ ಅವರೇ ಸಿದ್ಧಪಡಿಸುತ್ತಾರೆ. ನಂತರ ಬೆಲ್ಲದಿಂದ ತಯಾರಿಸಿದ ಸಿಹಿಯ ಅನ್ನವನ್ನಿಟ್ಟು ಪೂಜಿಸಿ ಸಮುದಾಯದ ಸದಸ್ಯರ ಮುಂದೆ ಸಂಭ್ರಮದಿಂದ ಆಟವಾಡುತ್ತಾರೆ. ಆಟಮುಗಿದ ನಂತರ ಎಲ್ಲರೂ ಸಾಮೂಹಿಕ ಲಂಬಾಣಿ ನೃತ್ಯವನ್ನು ಮಾಡುತ್ತಾರೆ.

ಬಲಿಪಾಡ್ಯಮಿಯಂದು ಚಿಕ್ಕಮಕ್ಕಳು ವಿಶೇಷವಾಗಿ ಯುವತಿಯರು ಕಸೂತಿಯಿಂದ ಕೂಡಿದ ತಾವೇ ಸಿದ್ಧಪಡಿಸಿದ ರಂಗುರಂಗಿನ ಗಾಜಿನಿಂದ ತಯಾರಿಸಿದ ಉಡುಪುಗಳನ್ನು ಧರಿಸಿ, ಬಿದರಿನ ಬುಟ್ಟಿಗಳನ್ನು ತೆಗೆದುಕೊಂಡು ವಲ್ಲಣದ ಹೂ, ಅಣ್ಣಿ, ಹೊನ್ನಂಬರಿ, ತಂಗಡಿ ಹೂಗಳನ್ನು ತರಲು ಕಾಡುಗಳಿಗೆ ತೆರಳುತ್ತಾರೆ. ಬುಟ್ಟಿ ತುಂಬಾ ಹೂಗಳನ್ನು ಸಂಗ್ರಹಿಸಿದ ನಂತರ ಹಿಂತಿರುಗುವಾಗ ದಾರಿಯುದ್ದಕ್ಕೂ ಹಾಡುಗಳನ್ನು ಹೇಳುತ್ತಾ ಲಯಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ. 

ಮಹಿಳೆಯರು ಪ್ರತಿ ಮನೆಯ ಮುಂದೆ ವೃತ್ತಾಕಾರ ಮಾಡಿ ದೀಪ ಬೆಳಗಿಸಿ ಎಲ್ಲರ ಬಾಳು ಬೆಳಕಾಗಲಿ ಎಂದು ಕುಣಿದು ಹಾಡಿನ ಮೂಲಕ ಪ್ರಾರ್ಥಿಸುತ್ತಾರೆ. ಈ ಹಬ್ಬದ ಮಾರನೆಯ ದಿನ ಯುವತಿಯರು ದೀಪಗಳನ್ನು ಮನೆಮನೆಗೆ ಕೊಂಡ್ಯೊಯ್ದು ಮೇರಾ ಆಚರಿಸುತ್ತಾರೆ. ಅಂದರೆ ಮಹಿಳೆಯರು ದೀಪಗಳನ್ನು ಹಿಡಿದು ಹಿರಿಯರಿಗೆ ಆರತಿಯನ್ನು ನೃತ್ಯದ ಮೂಲಕವೇ ಬೆಳಗುತ್ತಾರೆ. ಈ ಸಂದರ್ಭದಲ್ಲಿ ಮನೆಯವರಿಂದ ಉಡುಗೊರೆಗಳನ್ನು ಪಡೆಯುತ್ತಾರೆ. ಹಬ್ಬದ ದಿನದಂದು ಮನೆಯ ತುಂಬೆಲ್ಲಾ ತಂಗಟೆ ಹೂವು ಚೆಲ್ಲುವುದರ ಮೂಲಕ ಮನೆಯು ಸಂಪತ್ತಿನಿಂದ ತುಂಬಿ ತುಳಕಲಿ ಎಂದು ಸಾಂಕೇತಿಕವಾಗಿ ಆಚರಿಸುವ ಪದ್ಧತಿ ಇದೆ.

ಹಬ್ಬದ ದಿನದಂದು ಸಮುದಾಯದ ಎಲ್ಲರೂ ದೇವಸ್ಥಾನದ ಬಳಿ ಒಂದೆಡೆ ಸೇರುತ್ತಾರೆ. ದೇವರಲ್ಲಿ ತಮ್ಮ ಕಷ್ಟಗಳನ್ನು ದೂರಮಾಡುವ ಬಗ್ಗೆ ಮೊರೆಯಿಡುತ್ತಾರೆ. ಸಮುದಾಯದ ಅವಿವಾಹಿತ ಯುವತಿಯರು ಕಾಂಚಳಿ, ಚಾಂಟಿಯಾ, ಕೋತಳಿ ಮುಂತಾದ ಸಾಂಪ್ರದಾಯಿಕ ವೇಷಭೂಷಣಗಳನ್ನು ತೊಟ್ಟು ಹಬ್ಬದ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ.

ಲಂಬಾಣಿಗರಿಗೆ ದೀಪಾವಳಿ ಹಬ್ಬ ಪ್ರಾರಂಭವಾಗುವುದೇ ಅಮವಾಸ್ಯೆಯಂದು. ಈ ದಿನವನ್ನು ಕಾಳಿಮಾಸ್ ಎನ್ನುತ್ತಾರೆ. ಅಂದು ಕುರಿಯನ್ನು ದೇವರಿಗೆ ಬಲಿ ನೀಡುತ್ತಾರೆ. ಅಮವಾಸ್ಯೆಯ ಮರುದಿನ ವರ ಪೂಜೆಗೆ ಅಕ್ಕಿ ಮತ್ತು ಬೆಲ್ಲದಿಂದ ಮಾಡಿದ ಸಿಹಿಯನ್ನು ನೈವೇದ್ಯ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.