ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಥಿಲ ಶಾಲೆ: ಕ್ರಿಯಾಯೋಜನೆ ಸಲ್ಲಿಕೆ

ಶಾಲೆಯ ಸ್ಥಿತಿ ತೆರೆದಿಟ್ಟ ‘ಶಿಥಿಲ ಶಾಲೆ’ ಸರಣಿ, ಎಚ್ಚೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು
Published 29 ಜೂನ್ 2024, 6:09 IST
Last Updated 29 ಜೂನ್ 2024, 6:09 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಕೋರಿ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಿಂದ ಕ್ರಿಯಾಯೋಜನೆ ಸಿದ್ಧಪಡಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ.

ಶಾಲೆಗಳ ಸ್ಥಿತಿಗತಿ ಕುರಿತು ‘ಪ್ರಜಾವಾಣಿ’ಯಲ್ಲಿ ಜೂನ್‌ 19ರಿಂದ 28ರ ವರೆಗೆ ‘ಶಿಥಿಲ ಶಾಲೆ’ ಸರಣಿ ಪ್ರಕಟವಾಗಿತ್ತು. ವರದಿ ಪ್ರಕಟಗೊಂಡ ನಂತರ ಎರಡೂ ಶೈಕ್ಷಣಿಕ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕ್ರಿಯಾ ಯೋಜನೆ ತಯಾರಿಸಿ ಜೂನ್‌ 28ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಖಾಂತರ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ತಲುಪಿಸಿದ್ದಾರೆ.

‘ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆ’ ಶೀರ್ಷಿಕೆಯಡಿ ಜೂನ್‌ 19ರಂದು ನಗರದ ಅಂತರಸನಹಳ್ಳಿ ಸರ್ಕಾರಿ ಶಾಲೆಯ ಕುರಿತು ವರದಿ ಪ್ರಕಟವಾಗಿತ್ತು. ವರದಿ ನಂತರ ಎಚ್ಚೆತ್ತುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದ್ದರು. ಈಗ ಸ್ಥಳಾಂತರ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.

ಶಾಲೆಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಕ್ರಿಯಾಯೋಜನೆ ಸಲ್ಲಿಕೆಗೆ ಸೂಚಿಸಿದ್ದರು. ಎರಡೂ ಜಿಲ್ಲೆಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡು, ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದರು. ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ.

‘ಶಿಥಿಲ ಶಾಲೆಗಳ ಬಗ್ಗೆ ಇಲಾಖೆಯ ಗಮನಕ್ಕೂ ತರಲಾಗಿದೆ. ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ನಂತರ ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅಗತ್ಯ ಮಾಹಿತಿ ತರಿಸಿಕೊಳ್ಳಲಾಗಿದೆ. ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇದೇ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ ಆಗಬಹುದು ಎಂಬ ಭರವಸೆ ಇದೆ’ ಎಂದು ತುಮಕೂರು ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪ್ರಭಾರ) ಮಂಜುನಾಥ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT