ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್‌ನಲ್ಲಿ ಕೃಷಿ ಕಾಲೇಜು: ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ

ಸಂಸದ ಡಿ.ಕೆ.ಸುರೇಶ್‌ ಮನವಿ: ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ
Last Updated 29 ನವೆಂಬರ್ 2020, 1:44 IST
ಅಕ್ಷರ ಗಾತ್ರ

ಕುಣಿಗಲ್: ನಾಡಿನ ರೈತರು ಸಮಗ್ರ ಮತ್ತು ಸಾವಯವ ಕೃಷಿ ನೀತಿ ಅಳವಡಿಸಿಕೊಂಡು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸಂಜೆ ₹87 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕೃಷಿಕನ ಬದುಕಿನ ಸಂಕಷ್ಟ ಅರಿತು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಾಡಿನ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೆ.ಆರ್. ಪೇಟೆಯ ರೈತ ಮಹಿಳೆ ಲಕ್ಷ್ಮಿದೇವಮ್ಮ ಅವರ ಸಾಧನೆಯನ್ನು ಶ್ಲಾಘಿಸಿದರು.

ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡಿರುವ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಎಂದರು.

ನೀರಿನ ಸೌಕರ್ಯ ಇರುವ ಮಂಡ್ಯ ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಮಾತ್ರ ಬೆಳೆದು ನಿರೀಕ್ಷಿತ ಇಳುವರಿ ದೊರೆಯದೆ 2014-15 ಸಾಲಿನಲ್ಲಿ 9 ರೈತರು ಆತ್ಮಹತ್ಯ ಮಾಡಿಕೊಂಡಿದ್ದಾರೆ. ನೀರಿನ ಕೊರತೆ ಇರುವ ಕೋಲಾರದಲ್ಲಿ 5 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದಲ್ಲಿ ಒಂದು ಎಕರೆಯಲ್ಲಿ ಬಹುವಿಧದ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ವಿವರಿಸಿದರು. ‌

ಸಂಸದ ಡಿ.ಕೆ.ಸುರೇಶ್ ಅವರ ಮನವಿಗೆ ಸ್ಪಂದಿಸಿ, ತಾಲ್ಲೂಕಿನಲ್ಲಿ ಕೃಷಿ ಕಾಲೇಜು ಪ್ರಾರಂಭಕ್ಕೆ ಗಮನ ಹರಿಸಲಾಗುವುದು. ರೈತರ ಮಕ್ಕಳಿಗೆ ಶೇ50ರ ಮೀಸಲಾತಿ ನೀಡುವುದಾಗಿ ತಿಳಿಸಿದರು.

ಜಿಲ್ಲೆಯ ರೈತರಿಗೆ ಈಗಾಗಲೇ ₹ 4.60 ಕೋಟಿ ಸಹಾಯಧನ ನೀಡಲಾಗಿದೆ. ಬಾಕಿ ಇರುವ ₹ 2 ಕೋಟಿಯ ಜತೆಗೆ ಮತ್ತು ₹2 ಕೋಟಿ ನೀಡಲಾಗುವುದು ಎಂದರು.

ಅಗತ್ಯ ನಿವೇಶನ ನೀಡಿದರೆ ತಾಲ್ಲೂಕಿನ ಕಸಬಾ, ಹುತ್ರಿದುರ್ಗ ಮತ್ತು ಕೊತ್ತಗೆರೆಗಳಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮತೆಗೆದುಕೊಳ್ಳಲಾಗುವುದು ಎಂದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರೈತರ ಜಮೀನು ದಾಖಲೆಗಳ ಸಮಸ್ಯೆಯಿಂದಾಗಿ ಪರಿಹಾರ ಮತ್ತು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲದ ಕಾರಣ ಪರ್ಯಾಯ ವ್ಯವಸ್ಥೆ ಬಗ್ಗೆ ಗಮನ ಹರಿಸಲು ಮನವಿ ಮಾಡಿದರು. ಯುವಶಕ್ತಿಗೆ ಕೃಷಿ ವಿಚಾರವಾಗಿ ಅರಿವು ಮೂಡಿಸುವಂತೆ ಕೃಷಿ ಸಚಿವರಿಗೆ ಮನವಿ ಮಾಡಿದರು.

ಶಾಸಕ ಡಾ.ರಂಗನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಪುರಸಭೆ ಅಧ್ಯಕ್ಷ ನಾಗೇಂದ್ರ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪಾಪಣ್ಣ,ರಾಜ್ಯ ಪ್ರತಿನಿದಿ ಅನಸೂಯಮ್ಮ, ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ್ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT