ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ: ‘ಪ್ರಧಾನಿ ಅಭಿನಂದನೆಗೆ ಅರ್ಹರೆ?’: ಶಾಸಕ ಡಾ.ಜಿ.ಪರಮೇಶ್ವರ

Last Updated 21 ನವೆಂಬರ್ 2021, 6:05 IST
ಅಕ್ಷರ ಗಾತ್ರ

ತುಮಕೂರು: ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಮಯದಲ್ಲಿ 750ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಹೇಳಬೇಕೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.

ನಗರದ ಗಾಜಿನ ಮನೆಯಲ್ಲಿ ಭಾನುವಾರ ನಡೆಯಲಿರುವ ಕಾಂಗ್ರೆಸ್ ಪಕ್ಷದ ಜನಜಾಗೃತಿ ಅಭಿಯಾನದ ಸಿದ್ಧತೆಗಳನ್ನು ಶನಿವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳೆ, ಚಳಿ, ಗಾಳಿಯಲ್ಲಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರೈತರನ್ನು ಅಯ್ಯೋ ಎನ್ನಿಸಿದ ಸರ್ಕಾರ ಅಭಿನಂದನೆಗೆ ಅರ್ಹವಲ್ಲ. ಒಂದು ವರ್ಷದಿಂದ ಧರಣಿ ಕುಳಿತಿದ್ದರೂ ಕನಿಷ್ಠ ಸೌಜನ್ಯಕ್ಕೂ ಭೇಟಿಯಾಗಿ ಮಾತುಕತೆ ನಡೆಸಲಿಲ್ಲ. ಈಗ ವಾಪಸ್ ಪಡೆಯುವುದಾಗಿ ಹೇಳಿರುವುದಕ್ಕೆ ಮೋದಿ ಅವರನ್ನು ಅಭಿನಂದಿಸಿದರೆ, ಹೋರಾಟನಿರತ ರೈತರಿಗೆ ಮಾಡಿದ ಅಪಮಾನವಾಗುತ್ತದೆ ಎಂದರು.

ರೈತರ ಪ್ರತಿಭಟನೆ ವಿಶ್ವದ ಗಮನ ಸೆಳೆದಿತ್ತು. ಹಲವು ರಾಷ್ಟ್ರಗಳು ಈ ಬಗ್ಗೆ ಮಾತನಾಡಿದ್ದವು. ಆದರೂ ಸ್ಪಂದಿಸಲಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆ ಸೋಲು, ಮುಂಬರುವ ಐದು ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದಾಗಿ ಹೇಳುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು. ರೈತರ ಪ್ರಮುಖ ಬೇಡಿಕೆಯಾಗಿರುವ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿ, ವಿದ್ಯುತ್ ಖಾಸಗೀಕರಣ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿದರು.

‘ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು’ ಎಂದು ಬಿಜೆಪಿ ಕೇಳುತ್ತಿರುವ ಪ್ರಶ್ನೆಗೆ ಜನಜಾಗೃತಿ ಅಭಿಯಾನದಲ್ಲಿ ಉತ್ತರ ನೀಡಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ಎಂ.ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಇತರ ಮುಖಂಡರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಎಸ್.ಷಫಿ ಅಹ್ಮದ್, ರಫೀಕ್‍ ಅಹ್ಮದ್, ಆರ್.ರಾಮಕೃಷ್ಣ, ಮುರಳೀಧರ ಹಾಲಪ್ಪ, ಎಚ್.ಸಿ.ಹನುಮಂತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT