ಶನಿವಾರ, ಸೆಪ್ಟೆಂಬರ್ 18, 2021
24 °C

ಕಲೆಗೆ ಚರಿತ್ರೆಯಲ್ಲಿ ಸಿಗದ ಸ್ಥಾನ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜನರ ಬದುಕನ್ನು ಸಮೃದ್ಧಗೊಳಿಸಿರುವ ಕಲೆ, ಸಂಗೀತ, ರಂಗ ಗೀತೆಗಳು ಚರಿತ್ರೆಯ ಆವರಣದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲವಾಗಿವೆ. ಆದರೆ ಬದುಕಿನಲ್ಲಿ ಅಪಾರ ಬದಲಾವಣೆಗಳನ್ನು ತಂದಿವೆ ಎಂದು ಸಾಹಿತಿ ಡಾ.ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.

ರಂಗಕೀರ್ತನ ಸಂಪದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ವರ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲೆ, ಸಂಗೀತ, ಜಾನಪದ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು, ದೈಹಿಕ, ಮಾನಸಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಚರಿತ್ರೆ
ಯಲ್ಲಿ ಅಧಿಕಾರದ ಜತೆಗೆ ಇರುವ ಸಾಹಿತ್ಯ ಹೆಚ್ಚು ಪ್ರಾಶಸ್ತ್ಯವನ್ನು ಆಕ್ರಮಿಸಿ
ಕೊಂಡಿದೆ. ಚರಿತ್ರೆಯಲ್ಲೂ ಕಲಾ ಪ್ರಕಾರಗಳಿಗೆ ಪಾಲು ಸಿಗುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕಥಾ ಕೀರ್ತನ ಕ್ಷೇತ್ರವು ಇತರೆ ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚಿನ ಶೋತೃಗಳನ್ನು ಹೊಂದಿದೆ. ಏಕಕಾಲಕ್ಕೆ, ಸಂಗೀತ, ಸಾಹಿತ್ಯ, ನಟನೆ, ರಾಗ, ತಾಳದ ಮೂಲಕ ಪ್ರೇಕ್ಷಕರನ್ನು ಹಿಡಿದಿಡಬೇಕಾಗುತ್ತದೆ. ಕೋವಿಡ್‌ನಿಂದ ತೆರೆಯ ಮರೆಗೆ ಸರಿದಿದ್ದ ಕಲೆಗಳು ಮತ್ತೊಮ್ಮೆ ಜನರ ಮುಂದೆ ಬಂದು ಮನುಷ್ಯನ ದುಗುಡ, ದುಮ್ಮಾನಗಳಿಗೆ ಅಂತ್ಯ ಹಾಡಬೇಕಾಗಿದೆ ಎಂದರು.

ರಂಗಕೀರ್ತನ ಸಂಪದ ಅಧ್ಯಕ್ಷ ಹರಿಕಥೆ ವಿದ್ವಾನ್ ಲಕ್ಷ್ಮಣದಾಸ್, ‘ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಸಾಂಸ್ಕೃತಿಕ ಲೋಕ ಅಜ್ಞಾತವಾಸ ಅನುಭವಿಸಿದೆ. ಮುಂದಿನ ದಿನಗಳಲ್ಲಿ ಹಿಂದಿನ ಗತವೈಭವ ಪಡೆಯು ವಂತಾಗಲಿ’ ಎಂದು ನುಡಿದರು.

ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲು ಸಿದ್ದರಾಜು, ‘ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಮೂಲಕ ಎಲ್ಲಾ ಕಲಾ ಪ್ರಕಾರಗಳನ್ನು ಒಂದು ವೇದಿಕೆಗೆ ತರುವ ಪ್ರಯತ್ನ ಇದಾಗಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ಸಾಹಿತ್ಯ, ಸಾಂಸ್ಕೃತಿಕ ಲೋಕ ಎಲ್ಲಿ ಬಡವಾಗಿರುತ್ತದೆಯೋ ಅಲ್ಲಿ ಕ್ರೌರ್ಯ, ವಿಧ್ವಂಸಕ ಕೃತ್ಯಗಳು ಹೆಚ್ಚಾಗುತ್ತವೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಟಕಗಳು, ಪ್ರದರ್ಶನ ಕಲೆಗಳು ಜನರಲ್ಲಿ ಜಾಗೃತಿ ಮೂಡಿಸಿ, ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ್ದವು’ ಎಂದು ನೆನಪಿಸಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಲೇಖಕಿ ಬಿ.ಸಿ.ಶೈಲಾ ನಾಗರಾಜು ಮಾತನಾಡಿದರು. ಸಾಹಿತಿ ಮುರುಳಿ ಕೃಷ್ಣಪ್ಪ, ನಾಟಕಮನೆ ಮಹಾಲಿಂಗು, ಕಲಾವಿದ ಕೆಂಕೆರೆ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಶಂಕರ ಭಾರತೀಪುರ ಅವರ ತಂಡದಿಂದ ಸುಗಮ ಸಂಗೀತ, ಶೀಲಾನಾಯ್ಡು ಅವರಿಂದ ಕಥಾ ಸಂಕೀರ್ತನೆ, ಕಾವ್ಯ ತಂಡದಿಂದ ಜಾನಪದ ಗೀತೆಗಳ ಗಾಯನ ನಡೆಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.