ತುಮಕೂರು: ನಗರ ಪೊಲೀಸ್ ಠಾಣೆ ಸಮೀಪದ ಗುಂಚಿ ವೃತ್ತದ ಬಳಿ, ಎಂ.ಜಿ.ರಸ್ತೆಯಲ್ಲಿರುವ ಎರಡು 2 ಚಿನ್ನಾಭರಣ ಅಂಗಡಿಗಳಲ್ಲಿ ಶುಕ್ರವಾರ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ. ಬೀಗ ಒಡೆದ ಕಳ್ಳರು ಒಳ ಹೋಗಲು ಪ್ರಯತ್ನಿಸಿದ್ದಾರೆ.
ಸುನಿಲ್ ಗಿರವಿ ಅಂಗಡಿ ಮತ್ತು ರಾಜೇಂದ್ರ ಮಳಿಗೆಗಳ ಬೀಗ ಒಡೆಯಲಾಗಿದೆ. ಶನಿವಾರ ಬೆಳಿಗ್ಗೆ ಮಳಿಗೆ ಮಾಲೀಕರು ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಬೀಗ ಒಡೆದ ನಂತರ ಒಳ ನುಗ್ಗಲು ಆಗದೆ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರನ್ನಾದರೂ ಕಂಡು ಅರ್ಧಕ್ಕೆ ಬಿಟ್ಟು ಹೋಗಿರಬಹುದು’ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರ ಠಾಣೆ ಹತ್ತಿರದಲ್ಲೇ ಇರುವ ಮಳಿಗೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವುದು ನಗರದ ಜನರನ್ನು ಭಯಭೀತರನ್ನಾಗಿಸಿದೆ.