ತುಮಕೂರು: ವಿಶ್ವ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಶುಕ್ರವಾರ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಬಿಜಿಎಸ್ ವೃತ್ತದಲ್ಲಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಚಂದ್ರಶೇಖರ್ ಚಾಲನೆ ನೀಡಿದರು. ಡಾ.ರೇಖಾ, ಆರೋಗ್ಯ ಸಮಿತಿ ಸದಸ್ಯ ಎಂ.ಗೋಪಿ, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, 1882 ಮಾರ್ಚ್ 24ರಂದು ವಿಜ್ಞಾನಿ ರಾಬರ್ಟ್ ಕಾಕ್ ಕ್ಷಯ ರೋಗ ಕಂಡು ಹಿಡಿದರು. ಅಂದಿನಿಂದಲೂ ವಿಶ್ವ ಕ್ಷಯ ರೋಗ ದಿನವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ಈ ಬಾರಿ ‘ಕ್ಷಯ ರೋಗವನ್ನು ಕೊನೆಗಾಣಿಸಬಹುದು’ ಎಂಬ ಘೋಷ ವಾಕ್ಯದಡಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಶ್ವಾಸಕೋಶ ಮಾತ್ರವಲ್ಲ. ಕಣ್ಣು, ಕಿವಿ ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹರಡುತ್ತದೆ. ಸರಿಯಾದ ಚಿಕಿತ್ಸೆ ಪಡೆದು ಗುಣಪಡಿಸಿ ಕೊಳ್ಳಬಹುದು ಎಂದು ಸಲಹೆ ಮಾಡಿದರು.
ಕ್ಷಯರೋಗ ಅಧಿಕಾರಿ ಡಾ.ಸನತ್‍ಕುಮಾರ್, ‘ಜಿಲ್ಲೆಯಲ್ಲಿ ಶೇ 45ರಷ್ಟು ಕ್ಷಯ ರೋಗಿಗಳ ಸಂಖ್ಯೆ ಇಳಿಮುಖ ಆಗಿರುವುದರಿಂದ ಕೇಂದ್ರ ಸರ್ಕಾರ ಬೆಳ್ಳಿ ಪದಕ ನೀಡಿದೆ. ಕ್ಷಯ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ದೀರ್ಘಾವಧಿ ಕೆಮ್ಮು, ಕಡಿಮೆ ತೂಕ ಇದ್ದರೆ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.