ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಾಗಿಲು ತೆಗೆಯದ 'ಅಂಧರ' ವಿಭಾಗ

Published 30 ಮೇ 2023, 18:29 IST
Last Updated 30 ಮೇ 2023, 18:29 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯವು ನಿರ್ವಹಣೆಯಿಲ್ಲದೆ ಗಬ್ಬು ವಾಸನೆ ಬೀರುತ್ತಿದೆ. ಶೌಚಾಲಯಕ್ಕೆ ಬೀಗ ಹಾಕಿದ್ದು, ವಿದ್ಯಾರ್ಥಿಗಳಿಗೆ ಬಯಲೇ ದಿಕ್ಕು ಎಂಬಂತಾಗಿದೆ.

ನಗರದ ಬಿಜಿಎಸ್‌ ವೃತ್ತದ ಬಳಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹29.94 ಕೋಟಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಕಾಮಗಾರಿಗಳು ನಡೆಯುತ್ತಿರುವಾಗಲೇ ತರಾತುರಿಯಲ್ಲಿ ಉದ್ಘಾಟಿಸಲಾಯಿತು. ಉದ್ಘಾಟನೆಯಾದ ಒಂದು ತಿಂಗಳು ನಂತರ ಓದುಗರ ಪ್ರವೇಶಕ್ಕೆ ಅನುವು ಮಾಡಲಾಯಿತು.

ನಿತ್ಯ ನೂರಾರು ವಿದ್ಯಾರ್ಥಿಗಳು, ಸ್ಪರ್ಧಾಕಾಂಕ್ಷಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಇದುವರೆಗೂ ಕಲ್ಪಿಸಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಗ್ರಂಥಾಲಯದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಓದುಗರು, ವಿದ್ಯಾರ್ಥಿಗಳು ಗ್ರಂಥಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಮಾಡಿದ್ದು, ಈ ವಿಭಾಗ ಇಡೀ ಗ್ರಂಥಾಲಯಕ್ಕೆ ಮೆರುಗು ತಂದಿದೆ. ಮಕ್ಕಳ ಪುಸ್ತಕ, ಆಟದ ಸಾಮಗ್ರಿ ಸಂಗ್ರಹಿಸಲಾಗಿದೆ. ‘ಆಟದ ಜೊತೆಗೆ ಪಾಠ’ ಎಂಬ ಕಲ್ಪನೆಯಲ್ಲಿ ವಿಭಾಗ ಆರಂಭಿಸಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಚೆಂದದ ಚಿಣ್ಣರ ವಿಭಾಗ ಮಕ್ಕಳಿಲ್ಲದೆ ಖಾಲಿಯಾಗಿದೆ. ಇಲ್ಲಿ ಮಕ್ಕಳ ಕಲಿಕೆ, ಆಟೋಟಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಕ್ಕಳು ಮತ್ತು ಪೋಷಕರಿಗೆ ಅಗತ್ಯ ಮಾಹಿತಿ ನೀಡುವಲ್ಲಿ ಗ್ರಂಥಾಲಯ ಇಲಾಖೆ ಹಿಂದೆ ಬಿದ್ದಂತೆ ಕಾಣುತ್ತಿದೆ.

ಗ್ರಂಥಾಲಯದಲ್ಲಿ ಅಂಧರಿಗಾಗಿ ಮೀಸಲಿಟ್ಟಿರುವ ಪ್ರತ್ಯೇಕ ವಿಭಾಗಕ್ಕೆ ಇದುವರೆಗೆ ಚಾಲನೆ ನೀಡಿಲ್ಲ. ಅಂಧರ ಕಲಿಕೆಗೆ ಪೂರಕವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಬಗ್ಗೆಯೂ ಅರ್ಹರಿಗೆ ಮಾಹಿತಿ ತಿಳಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳಿಂದ ಆಗಿಲ್ಲ. ಹಲವರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಶುರು ಮಾಡಿರುವ ವಿಭಾಗಕ್ಕೆ ಪ್ರಸ್ತುತ ಬೀಗ ಹಾಕಲಾಗಿದೆ.

ಡಿಜಿಟಲ್‌ ಗ್ರಂಥಾಲಯಕ್ಕೆ ಕಂಪ್ಯೂಟರ್‌ ಸ್ಥಳಾಂತರ ಮಾಡುವ ಕೆಲಸವಾಗಿಲ್ಲ. ಉದ್ಘಾಟನೆಯಾಗಿ ಮೂರು ತಿಂಗಳು ಕಳೆದರೂ ಇದುವರೆಗೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹಳೆಯ ಕಟ್ಟಡದಲ್ಲಿರುವ ಪುಸ್ತಕಗಳನ್ನು ಹೊಸ ಕಟ್ಟಡದಲ್ಲಿ ಸೇರಿಸುವ ಕಾರ್ಯವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ಓದುಗರಿಗೆ ಸಮಸ್ಯೆಯಾಗಿದೆ. ಯಾವ ಪುಸ್ತಕ ಎಲ್ಲಿ ಹುಡುಕಬೇಕು ಎಂಬುದೇ ತಿಳಿಯದಾಗಿದೆ.

ಗ್ರಂಥಾಲಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ. ಸರಿಯಾದ ನಿರ್ವಹಣೆ ಇಲ್ಲ. ಇಲ್ಲಿಗೆ ಬಂದವರು ಮೂಲ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ ಎಂದು ವಿದ್ಯಾರ್ಥಿ ವಿನಯ್‌ ಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಅಂಧರ ವಿಭಾಗ ಮುಚ್ಚಿರುವುದು
ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಅಂಧರ ವಿಭಾಗ ಮುಚ್ಚಿರುವುದು
ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿನ ಚಿಣ್ಣರ ವಿಭಾಗ
ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿನ ಚಿಣ್ಣರ ವಿಭಾಗ
ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಶೌಚಾಲಯಕ್ಕೆ ಬೀಗ ಹಾಕಿರುವುದು
ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಶೌಚಾಲಯಕ್ಕೆ ಬೀಗ ಹಾಕಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT