ಗುರುವಾರ , ಜೂನ್ 17, 2021
21 °C

ಕುಣಿಗಲ್: ಬಾಳೆಗಿಲ್ಲ ಬೇಡಿಕೆ, ಹೂವಿಗಿಲ್ಲ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದವರಲ್ಲಿ ಮಾವು ಬೆಳೆದವರು ನೋವಿಲ್ಲದೆ ಮಾರಾಟ ವ್ಯವಸ್ಥೆಯಾಗಿದೆ. ಆದರೆ ಬಾಳೆ, ತರಕಾರಿ, ಸೊಪ್ಪು ಬೆಳೆದವರು ಸಂಕಷ್ಟ ಪಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 1,862 ಜನರು 1,650 ಹೆಕ್ಟೇರ್‌ನಲ್ಲಿ ಮಾವು (ಬಾದಾಮಿ, ರಸಪುರಿ, ಸೇಂದೂರಾ) ಬೆಳೆದಿದ್ದಾರೆ. ಪಟ್ಟಣ ಸೇರಿದಂತೆ ಅಂಚೆಪಾಳ್ಯ ಬಳಿ 6 ಮಂಡಿಗಳನ್ನು ಪ್ರಾರಂಭಿಸಲಾಗಿದೆ. ವ್ಯಾಪಾರಿಗಳು ತೋಟಗಳಿಂದ ಖರೀದಿಸಿ, ಮಂಡಿಗಳಲ್ಲಿ ಸಂಗ್ರಹಿಸಿ ಹೊರರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದಾರೆ.

ಸಗಟು ದರಗಳಂತೆ ಬಾದಾಮಿ ₹40, ರಸಪುರಿ ₹15, ಸೆಂಧೂರಾ ₹15ಕ್ಕೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಬಾದಾಮಿ ₹80, ರಸಪುರಿ ₹40, ಸೆಂಧೂರಾ ₹25ಕ್ಕೆ ಮಾರಾಟವಾಗುತ್ತಿದೆ. ಹಣ್ಣು ತರಕಾರಿ ಸಾಗಾಟಕ್ಕೆ ಯಾವುದೇ ತೊಂದರೆಯಾಗಿಲ್ಲ.

ಬಾಳೆ ಮತ್ತು ಹೂವು ಬೆಳೆದವರಿಗೆ ಸಂಕಷ್ಟ ಎದುರಾಗಿದೆ. ತಾಲ್ಲೂಕಿನಲ್ಲಿ 400 ಹೂವು ಮತ್ತು ಬಾಳೆ ಬೆಳೆಗಾರರು 100 ಹೆಕ್ಟೇರ್‌ನಲ್ಲಿ ಬೆಳೆ ಬೆಳೆದಿದ್ದಾರೆ. ಮಾರಾಟದ ಸಮರ್ಪಕ ವ್ಯವಸ್ಥೆ ದೊರೆಯದಿರುವುದು ಸಂಕಷ್ಟಕ್ಕೀಡುಮಾಡಿದೆ. ಯುಗಾದಿ ಸಮಯದಲ್ಲಿ ಎಲ್ಲವೂ ಉತ್ತಮ ಬೆಲೆಗೆ ಮಾರಾಟವಾಗುತ್ತಿತ್ತು. ಸದ್ಯ ರೈತರು ಏಲಕ್ಕಿ ಬಾಳೆಯನ್ನು ಕೆ.ಜಿ.ಗೆ ₹10ರಂತೆ ಮಾರಾಟ ಮಾಡಲು ಸಿದ್ಧರಿದ್ದರೂ ಯಾರೂ ಖರೀದಿಗೆ ಮುಂದಾಗುತ್ತಿಲ್ಲ.

ರೈತರಿಂದ ಖರೀದಿಸಿದ ಚಿಲ್ಲರೆ ಮಾರಾಟಗಾರರು ಕೆ.ಜಿ.ಗೆ ₹40ರಂತೆ ಮಾರಾಟಮಾಡುತ್ತಿದ್ದಾರೆ. ಹೂವಿನ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ನಡುವೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರಾಟಗಾರರ ಪಟ್ಟಿ ನೀಡುತ್ತಿದ್ದು, ಬೇಡಿಕೆ ಇಲ್ಲದ ಕಾರಣ ಖರೀದಿದಾರರು ಕಡಿಮೆ ಬೆಲೆಗೂ ಖರೀದಿಸಲು ಮುಂದೆ ಬರುತ್ತಿಲ್ಲ ಎಂದು ರಾಮಕೃಷ್ಣ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ 130 ಹೆಕ್ಟೇರ್‌ನಲ್ಲಿ ತರಕಾರಿ ಸೊಪ್ಪು ಬೆಳೆಯಲಾಗಿದೆ. ಬಹುತೇಕ ರೈತರು ಪಟ್ಟಣಕ್ಕೆ ಬಂದು ಸಂತೆ ಮೈದಾನದಲ್ಲಿ ಮಾರಾಟ ಮಾಡುತ್ತಿದ್ದರು. ಕೋವಿಡ್‌ ನಂತರ ಸಂತೆ ಮೈದಾನದ ವ್ಯವಹಾರವನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದ್ದು, ಜನ ಹೆಚ್ಚಾದ ಕಾರಣ ಅವಕಾಶ ರದ್ದು ಪಡಿಸಲಾಗಿದೆ. ಇದರಿಂದಾಗಿ ಬಹುತೇಕ ರೈತರು ತಾವು ಬೆಳೆದ ತರಕಾರಿ, ಸೊಪ್ಪುಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕೈತಪ್ಪಿದ್ದು, ದಲ್ಲಾಳಿಗಳ ಪಾತ್ರ ಹೆಚ್ಚಾಗಿದೆ. ರೈತರಿಗೆ ಮಾರಾಟಕ್ಕೆ ಸೂಕ್ತ ಜಾಗ ದೊರಕಿಸಬೇಕು ಎಂದು ಅಶೋಕ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸರ್ಕಾರ ಮಾರುಕಟ್ಟೆ ಸಿಗದೆ ಬೆಳೆ ಹಾನಿಯಾದವರಿಗೆ ಪರಿಹಾರ ನೀಡಿತ್ತು. ಈ ವರ್ಷ ಯಾವುದೇ ನಿರ್ಣಯಗಳನ್ನು ಕೈಗೊಂಡಿಲ್ಲ ಎಂದು ಕುರುಪಾಳ್ಯದ ವಿನೋದ್ ಗೌಡ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು