ಸೋಮವಾರ, ಆಗಸ್ಟ್ 15, 2022
22 °C

ಶಾಲೆಗೆ ಮಕ್ಕಳ ದಾಖಲಾತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದು, ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.

ಜೂನ್ 15ರಿಂದ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಅವಕಾಶ ನೀಡಿದ್ದು, ಶಿಕ್ಷಕರು ಶಾಲೆಗಳತ್ತ ಮುಖ ಮಾಡಿದ್ದಾರೆ. ಕೋವಿಡ್ ಲಾಕ್‌ಡೌನ್ ಇರುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಹಿಳಾ ಶಿಕ್ಷಕರಿಗೆ ಶಾಲೆಗೆ ಕಡ್ಡಾಯ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಪುರುಷ ಶಿಕ್ಷಕರು ಶಾಲೆಗಳಿಗೆ ತೆರಳಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಶಾಲೆ ಶುಚಿಗೊಳಿಸುವುದು, ಶಾಲೆ ಮುಚ್ಚಿದ ನಂತರ ಕಟ್ಟಡಗಳ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿ ತೆಗೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರ ಜತೆಗೆ ಮಕ್ಕಳ ದಾಖಲಾತಿಯನ್ನೂ ಮಾಡುತ್ತಿದ್ದಾರೆ. ಶಾಲೆ ಸಮೀಪದಲ್ಲೇ ಇರುವ, ಸಂಚಾರಕ್ಕೆ ಸ್ವಂತ ವ್ಯವಸ್ಥೆ ಹೊಂದಿರುವ ಮಹಿಳಾ ಶಿಕ್ಷಕರು ಸಹ ಶಾಲೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಮಕ್ಕಳ ದಾಖಲಾತಿಗೆ ಮುಂದಾಗಿದ್ದಾರೆ.

ಪ್ರಮುಖವಾಗಿ ಶಾಲೆಗೆ ಸಮೀಪದಲ್ಲೇ ಇರುವ ಅಂಗನವಾಡಿಗಳಿಗೆ ತೆರಳಿ 1ನೇ ತರಗತಿಗೆ ಸೇರಿಸಲು ಅರ್ಹರಾಗಿರುವ ಮಕ್ಕಳ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತಹ ಮಕ್ಕಳ ಪೋಷಕರನ್ನು ಭೇಟಿಮಾಡಿ ಶಾಲೆಗೆ ಸೇರಿಸುವಂತೆ ಮನವೊಲಿಸುತ್ತಿದ್ದಾರೆ. ಶಾಲೆಗೆ ದಾಖಲಿಸುವ ಸಮಯದಲ್ಲಿ ಏನೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬ ಬಗ್ಗೆ ಮನವರಿಕೆ ಮಾಡಿಕೊಟ್ಟು, ಶಾಲೆಗಳತ್ತ ಪೋಷಕರು, ಮಕ್ಕಳನ್ನು ಕರೆತರುವ ಪ್ರಯತ್ನದಲ್ಲಿ ಮುಂದಡಿ ಇಟ್ಟಿದ್ದಾರೆ.

ಮೂರು ಹಂತ: ಈಗ ಮೂರು ಹಂತದಲ್ಲಿ ದಾಖಲಾತಿ ನಡೆಯುತ್ತಿದೆ. ಮೊದಲನೆಯದಾಗಿ 1ನೇ ತರಗತಿಗೆ ಹೊಸದಾಗಿ ಮಕ್ಕಳನ್ನು ದಾಖಲಿಸಲಾಗುತ್ತದೆ. 5ನೇ ತರಗತಿ ಉತ್ತೀರ್ಣರಾಗಿ, ಅದೇ ಶಾಲೆಯಲ್ಲಿ 6ನೇ ತರಗತಿ ಮುಂದುವರಿಸಲು ಅವಕಾಶ ಇಲ್ಲದವರು ಸಮೀಪದ ಶಾಲೆಯಲ್ಲಿ ದಾಖಲಾತಿ ಪಡೆಯುತ್ತಾರೆ. ಅದೇ ಮಾದರಿಯಲ್ಲಿ 8ನೇ ತರಗತಿಗೂ ಪ್ರವೇಶಾತಿ ನೀಡಲಾಗುತ್ತದೆ.

ಕೋವಿಡ್‌, ಜೀವದ ಮೇಲಷ್ಟೇ ಪರಿಣಾಮ ಬೀರಿಲ್ಲ. ಜೀವನದ ಮೇಲೂ ದೊಡ್ಡ ಮಟ್ಟದಲ್ಲೇ ಹೊಡೆತ ನೀಡಿದೆ. ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದವರು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲುಮಾಡುತ್ತಿದ್ದಾರೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಈವರೆಗೆ 1ನೇ ತರಗತಿಗೆ 1,543 ಮಕ್ಕಳು ದಾಖಲಾಗಿದ್ದಾರೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಮಕ್ಕಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಪೋಷಕರು ಶಾಲೆಗೆ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ನಾವೂ ಸಹ ಪೋಷಕರನ್ನು ಭೇಟಿಮಾಡಿ ಶಾಲೆಗೆ ಸೇರಿಸುವಂತೆ ಮನವೊಲಿಸುತ್ತಿದ್ದೇವೆ’ ಎಂದು ಕೊಡಿಗೇನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆ ಮುಖ್ಯ ಶಿಕ್ಷಕಿ ಬಿ.ಎನ್.ಯಶೋದಮ್ಮ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.