ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡುಗೊಲ್ಲರನ್ನು ಕತ್ತಲಲ್ಲಿಟ್ಟ ಪಕ್ಷಗಳು’

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಆರೋಪ
Last Updated 18 ಅಕ್ಟೋಬರ್ 2020, 6:45 IST
ಅಕ್ಷರ ಗಾತ್ರ

ಶಿರಾ: ಚುನಾವಣೆ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಾಜವನ್ನು ಒಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಆರೋಪಿಸಿದರು.

ತಾಲ್ಲೂಕಿನ ಚಂಗಾವರ ಗ್ರಾಮದಲ್ಲಿ ಶನಿವಾರ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ‌

‘ಕಾಡುಗೊಲ್ಲರನ್ನು ಕತ್ತಲಲಿ ಇಟ್ಟು ಎರಡು ಪಕ್ಷಗಳು ರಾಜಕೀಯ ಲಾಭ ಪಡೆದಿದ್ದಾರೆ. ಚುನಾವಣೆಗಾಗಿ ನಾವು ಕಾಡುಗೊಲ್ಲರ ಅಭಿವೃದ್ಧಿ ನಿಗಮ ಪ್ರಾರಂಭಿಸಿಲ್ಲ. ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸಿದ್ದೇವೆ’ ಎಂದರು.

ಕೆ.ಆರ್.ಪೇಟೆಯಲ್ಲಿ ಕಮಲ ಅರಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಕಾರ್ಯಕರ್ತರ ಪರಿಶ್ರಮದಿಂದ ಅದು ಸಾಧ್ಯವಾಗಿದೆ. ಅಲ್ಲಿ ಚುನಾವಣೆಯಲ್ಲಿ ಆಶ್ವಾಸನೆ ನೀಡಿದಂತೆ ಕ್ಷೇತ್ರದ ಅಭಿವೃದ್ಧಿಗೆ ₹ 600 ಕೋಟಿ ಬಿಡುಗಡೆಯಾಗಿದೆ. ಶಿರಾದಲ್ಲಿ ಆಡಳಿತ ಪಕ್ಷದ ಶಾಸಕರಿದ್ದರೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಯ ಜತೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ ಮಾತನಾಡಿ, ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಅವರ ಪರಿಶ್ರಮ ಮತ್ತು ತ್ಯಾಗದಿಂದಾಗಿ ಈ ಬಾರಿ ಇಲ್ಲಿ ಕಮಲ ಅರಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕಾಡುಗೊಲ್ಲರ ಅರಾಧ್ಯ ದೈವ ಜುಂಜಪ್ಪ, ಚಿತ್ತಲಿಂಗೇಶ್ವರ ಹಾಗೂ ಕಲ್ಲೇಶ್ವರ ದೇವಾಲಯಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ತಲಾ ₹ 3 ಕೋಟಿ ಅನುದಾನ ನೀಡುವಂತೆ ಹಾಗೂ ಗೊಲ್ಲ ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದರು.

ಸೇರ್ಪಡೆ: ಕಾಡುಗೊಲ್ಲ ಸಮುದಾಯದ ಮುಖಂಡ ಚಂಗಾವರ ಮಾರಣ್ಣ ಬಿಜೆಪಿ ಸೇರಿದರು.

ಬಿಜೆಪಿ ಅಭ್ಯರ್ಥಿ ಡಾ. ಸಿ.ಎಂ.ರಾಜೇಶ್‌ ಗೌಡ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಚಂಗಾವರ ಮಾರಣ್ಣ, ಬೆಟ್ಟಸ್ವಾಮಿ ಮಾತನಾಡಿದರು.

ಶಾಸಕ ಜ್ಯೋತಿ ಗಣೇಶ್, ತಾ.ಪಂ‌ ಸದಸ್ಯ ನಾಗರಾಜು, ವಿಜಯರಾಜು, ರಂಗಸ್ವಾಮಿ, ಹುಚ್ಚಯ್ಯ, ಸೂಡಾ ಅಧ್ಯಕ್ಷ ಈರಣ್ಣ, ನರಸಿಂಹಯ್ಯ, ಮದ್ದೇವಳ್ಳಿ ರಾಮಕೃಷ್ಣ, ನರಸಿಂಹೇಗೌಡ, ತಿಪ್ಪೇಸ್ವಾಮಿ, ಕಾಡುಗೊಲ್ಲರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ, ನಾಗರಾಜು, ಮದನ್, ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT